Ayatollah Khamenei: ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ಕ್ಷಿಪಣಿ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯಾಗಿರುವುದಾಗಿ ಇದೀಗ ಅಧಿಕೃತವಾಗಿದೆ. ಸ್ವತಃ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತು ಘೋಷಿಸಿದ್ದಾರೆ. ಟ್ರಂಪ್ ಮಾತ್ರವಲ್ಲದೆ, ಇರಾನ್ ಮಾಧ್ಯಮಗಳು ಕೂಡ ಖಮೇನಿ ಸಾವನ್ನು ವರದಿ ಮಾಡಿವೆ. ಇದರಲ್ಲಿ ಅಚ್ಚರಿ ಎಂದರೆ, ಕೇವಲ ಖಮೇನಿ ಮಾತ್ರವಲ್ಲ, ಅವರೊಟ್ಟಿಗಿದ್ದ 40ಕ್ಕೂ ಹೆಚ್ಚು ಮಂದಿ ಇಸ್ರೇಲ್ ದಾಳಿಯಲ್ಲಿ ಉಸಿರು ಚೆಲ್ಲಿದ್ದಾರೆ.
ಅಮೆರಿಕ-ಇಸ್ರೇಲಿ ಜಂಟಿಯಾಗಿ ಹೇಗೆ ಅಯತೊಲ್ಲಾ ಖಮೇನಿಯವರ ಇಡೀ ತಂಡವನ್ನು ಛಿದ್ರಗೊಳಿಸಿತು? ಕ್ಷಿಪಣಿ ಟಾರ್ಗೆಟ್ ಯಾವ ರೀತಿ ಒಂದೇ ಏಟಿಗೆ ಖಮೇನಿ ಅಡಗಿದ್ದ ಸ್ಥಳವನ್ನು ಗುರುತಿಸಿ ಸ್ಫೋಟಗೊಳಿಸಿತು? ಅಮೆರಿಕ-ಇಸ್ರೇಲಿ ಗುಪ್ತಚರ ಇಲಾಖೆಗೆ ನಿಖರವಾದ ಮಾಹಿತಿ ಕೊಟ್ಟವರಾರು? ಇದರ ಬಗ್ಗೆ ಇರಾನಿನ ಮಾಧ್ಯಮಗಳು ಹೇಳುತ್ತಿರುವುದೇನು? ಎಂಬ ಹತ್ತು ಹಲವು ಪ್ರಶ್ನೆಗಳು ಇರಾನ್ ಜನತೆಯನ್ನು ಬೆಂಬಿಡದೆ ಕಾಡುತ್ತಿವೆ.
ಬೆಳಗಿದ್ದ ಮೀಟಿಂಗ್ ಮಧ್ಯಾಹ್ನಕ್ಕೆ
ಶನಿವಾರ (ಫೆ.28) ಮಧ್ಯಾಹ್ನ ಇರಾನಿನ ಸಮಯಕ್ಕೆ ಅನುಗುಣವಾಗಿ ಮಹೂರ್ತ ಫಿಕ್ಸ್ ಮಾಡಿದ ಅಮೆರಿಕ ಮತ್ತು ಇಸ್ರೇಲಿ, ತಮ್ಮ ಸೇನೆಯ ವಾಯುಪಡೆಗಳು ಮೂಲಕ ಖಮೇನಿ ನಿವಾಸದ ಮೇಲೆ ಭೀಕರ ದಾಳಿ ನಡೆಸಿತು. ಆದ್ರೆ, ವರದಿಗಳ ಪ್ರಕಾರ, ಸುಪ್ರೀಂ ಲೀಡರ್ ತಮ್ಮ ಭವ್ಯ ಬಂಗಲೆಯಲ್ಲಿ ಇರಲೇ ಇಲ್ಲ. ಆದರೂ ಸಹ ಒಂದೇ ಒಂದು ಗುರಿಯನ್ನು ಸಹ ಸೇನಾ ಪಡೆಗಳು ಮಿಸ್ ಮಾಡಿಲ್ಲ. ಅಸಲಿಗೆ, ಇರಾನಿನ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆ ಶನಿವಾರ ಬೆಳಗ್ಗೆ ನಿಗದಿಯಾಗಿತ್ತು. ಆದಾಗ್ಯೂ, ಸಭೆಯನ್ನು ಶನಿವಾರ ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಇಸ್ರೇಲಿ ಗುಪ್ತಚರ ಇಲಾಖೆ ಯುಎಸ್-ಇಸ್ರೇಲ್ ಜಂಟಿ ದಾಳಿಯ ಬಗ್ಗೆ ಅದಾಗಲೇ ಖಮೀನಿಗೆ ಸುಳಿವು ನೀಡಿತ್ತು. ತಕ್ಷಣವೇ ತಮ್ಮ ತಂಡದೊಂದಿಗೆ ಸ್ಥಳ ಬದಲಿಸಿದ ಖಮೇನಿ, 40 ಸದಸ್ಯರ ಇರಾನಿನ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯನ್ನು ಗೌಪ್ಯ ಸ್ಥಳದಲ್ಲಿ ನಡೆಸುತ್ತಿದ್ದರು. ಇಲ್ಲಿಯೂ ಬಿಡದ ಅಮೆರಿಕ ಮತ್ತು ಇಸ್ರೇಲಿ ವಾಯುಪಡೆಗಳು, ಆ ಪ್ರದೇಶವನ್ನೂ ಪತ್ತೆಹಚ್ಚಿ, ಕಡೆಗೂ ಕ್ಷಿಪಣಿ ದಾಳಿ ನಡೆಸಿದ್ದು ದುರಂತ. ಈ ಅಟ್ಯಾಕ್ನಲ್ಲಿ ಖಮೇನಿ ಸೇರಿದಂತೆ ಸಭೆಯಲ್ಲಿದ್ದ 40ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿ ಕೊನೆಯುಸಿರೆಳೆದರು ಎಂದು ಅಂತಾರಾಷ್ಟ್ರೀಯ ಮೂಲಗಳು ತಿಳಿಸಿವೆ.
ಈ ಭೀಕರ ದಾಳಿಯಲ್ಲಿ ಖಮೇನಿ ಆಗಲಿ ಅಥವಾ ಅವರ ತಂಡವಾಗಲಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ದೇಶದ ಮಾಧ್ಯಮಗಳು ತಿಳಿಸಿವೆ. ದಾಳಿಗಳ ಬಗ್ಗೆ ಅವರಿಗೆ ಮೊದಲೇ ತಿಳಿದಿದ್ದರೆ, ಖಂಡಿತ ಭೂಗತ ರಹಸ್ಯ ನೆಲೆಗಳಿಗೆ ಸ್ಥಳಾಂತರಗೊಳ್ಳುತ್ತಿದ್ದರು ಎಂದು ಮತ್ತೊಂದಿಷ್ಟು ಮಾಧ್ಯಮಗಳು ಹೇಳಿವೆ. ಸುಪ್ರೀಂ ಲೀಡರ್ ನಾಯಕತ್ವದಡಿ ಕೆಲಸ ಮಾಡುತ್ತಿದ್ದ ಸುಮಾರು 40 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ದೂರದರ್ಶನ ದೃಢಪಡಿಸಿದೆ. ಸತ್ತವರೆಲ್ಲರೂ ಇರಾನ್‌ನ ಪ್ರಮುಖ ನಾಯಕರೇ ಆಗಿದ್ದಾರೆ.
ಯಾರೆಲ್ಲ ಸಾವು?
ಯುಎಸ್-ಇಸ್ರೇಲ್ ಜಂಟಿ ಕ್ಷಿಪಣಿ ದಾಳಿಯಲ್ಲಿ, ಸುಪ್ರೀಂ ಲೀಡರ್ ಖಮೇನಿ, ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಅಬ್ದುಲ್ ರಹೀಮ್ ಮೌಸಾವಿ ಮತ್ತು ರಕ್ಷಣಾ ಸಚಿವ ಬ್ರಿಗೇಡಿಯರ್ ಜನರಲ್ ಅಜೀಜ್ ನಸರ್ಜಾದೆ ಸೇರಿದ್ದಾರೆ. ಐಆರ್‌ಜಿಸಿಯಲ್ಲಿ ಅಡ್ಮಿರಲ್ ಹುದ್ದೆಯನ್ನು ಹೊಂದಿರುವ ಹಿರಿಯ ಮಿಲಿಟರಿ ಮತ್ತು ರಾಜಕೀಯ ವ್ಯಕ್ತಿ ಅಲಿ ಶಮ್ಖಾನಿ ಕೂಡ ಸಾವಿಗೀಡಾಗಿದ್ದಾರೆ. ಇವರು ರಕ್ಷಣಾ ಸಚಿವ ಮತ್ತು ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೇರಿದಂತೆ ದಶಕಗಳ ಕಾಲ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ ಹೆಸರಾಂತ ವ್ಯಕ್ತಿ ಎನ್ನಲಾಗಿದೆ.
ಬ್ರಿಗೇಡಿಯರ್ ಜನರಲ್ ಅಜೀಜ್ ನಾಸಿರ್ಜಾದೆ ಅವರು 19ನೇ ವಯಸ್ಸಿನಲ್ಲಿ ಇರಾನಿನ ವಾಯುಪಡೆಗೆ ಸೇರಿದರು. ಅವರ ಅವಧಿಯಲ್ಲಿ, F-14 ಯುದ್ಧ ವಿಮಾನಗಳನ್ನು ಹಾರಾಟ ನಡೆಸಿದವು. ಅವರನ್ನು 2021ರಲ್ಲಿ ಸಶಸ್ತ್ರ ಪಡೆಗಳ ಉಪ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಸಲಾಹ್ ಅಸಾದಿ ಮಿಲಿಟರಿ ತುರ್ತು ಕಮಾಂಡ್‌ನಲ್ಲಿ ಗುಪ್ತಚರ ವಿಭಾಗದ ಮುಖ್ಯಸ್ಥರಾದರು. ನಂತರದಲ್ಲಿ ಇರಾನಿನ ಸಶಸ್ತ್ರ ಪಡೆಗಳ ಸುಪ್ರೀಂ ಸ್ಟಾಫ್‌ನಲ್ಲಿ ಹಿರಿಯ ಗುಪ್ತಚರ ಅಧಿಕಾರಿಯಾಗಿಯೂ ಸೇವೆ ಸಲ್ಲಿದರು,(ಏಜೆನ್ಸೀಸ್).