400 ಹಾವುಗಳ ಜತೆ ಒಂದೇ ರೂಮಿನಲ್ಲಿ 40 ದಿನ, 6 ಸಾವಿರ ಚೇಳುಗಳ ಜತೆ 21 ದಿನ: ಹಾವಿನ ರಾಜನ ಭಯಾನಕ ಸಾವಿನ ಕತೆ! Snake King  
ವಿದೇಶ

400 ಹಾವುಗಳ ಜತೆ ಒಂದೇ ರೂಮಿನಲ್ಲಿ 40 ದಿನ, 6 ಸಾವಿರ ಚೇಳುಗಳ ಜತೆ 21 ದಿನ: ಹಾವಿನ ರಾಜನ ಭಯಾನಕ ಸಾವಿನ ಕತೆ! Snake King

ಪ್ರಮುಖ ಮುಖ್ಯಾಂಶಗಳು

  • ವಿಷಸರ್ಪಗಳ ಒಡನಾಡಿ ಮಲೇಷ್ಯಾದ ಸ್ನೇಕ್ ಕಿಂಗ್ ಅಲಿ ಖಾನ್ ಶಂಸುದ್ದೀನ್ ರೋಚಕ ಸಾಹಸದ ಬದುಕು
  • ಗಿನ್ನಿಸ್ ದಾಖಲೆ ಬರೆದಿದ್ದ ಜಗತ್ಪ್ರಸಿದ್ಧ ಹಾವಿನ ರಾಜ ಕೊನೆಗೆ ನೆಚ್ಚಿನ ಹಾವಿನ ಕಡಿತಕ್ಕೆ ಬಲಿಯಾದ ದುರಂತ ಕಥೆ
  • ನೂರು ಬಾರಿ ಹಾವಿನ ಕಡಿತಕ್ಕೊಳಗಾಗಿ ನೂರನೇ ಬಾರಿಗೆ ಜೀವ ಕಳೆದುಕೊಂಡ ಮಲೇಷ್ಯಾದ ಸಾಹಸಿ ಅಲಿ ಖಾನ್
  • ತಂದೆಯ ನಿಧನದ ನಂತರ ಐದನೇ ತಲೆಮಾರಿನ ಹಾವಿನ ಸಾಹಸದ ವೃತ್ತಿ ಮುಂದುವರಿಸಿದ ಮಗ ಅಮ್ಜದ್ ಖಾನ್
Snake King : ಮನೆಯೊಳಗೆ ಸಣ್ಣ ಹಲ್ಲಿ ಅಥವಾ ಜಿರಳೆ ಕಂಡರೆ ಸಾಕು ಸಾಕ್ಷಾತ್ ಯಮನನ್ನೇ ನೋಡಿದಂತೆ ಕಿರುಚಾಡುವ ಜನರಿಗೇನೂ ಕಡಿಮೆ ಇಲ್ಲ. ಆದರೆ, ಅಂತಹವರ ಕಲ್ಪನೆಗೂ ನಿಲುಕದ, ಕಟ್ಟುಕಥೆಯಂತೆ ಭಾಸವಾಗುವ ಸಾಹಸಿಗನೊಬ್ಬನ ರೋಚಕ ಬದುಕಿನ ಕಥೆ ಇದು!
ನೀವು ಮೇಲಿನ ಫೋಟೋದಲ್ಲಿ ನೋಡುತ್ತಿರುವ ವ್ಯಕ್ತಿ ಮಲೇಷ್ಯಾದ 'ಸ್ನೇಕ್ ಕಿಂಗ್' (ಹಾವಿನ ರಾಜ) ಎಂದೇ ಜಗತ್ಪ್ರಸಿದ್ಧರಾಗಿದ್ದ ಅಲಿ ಖಾನ್ ಶಂಸುದ್ದೀನ್. ಕೇವಲ ಕುತೂಹಲಕ್ಕಾಗಿ ಅಲ್ಲದೆ, ತಮ್ಮ ಕೌಟುಂಬಿಕ ವೃತ್ತಿಯನ್ನೇ ಪ್ರಾಣದ ಕಸುಬಾಗಿಸಿಕೊಂಡು 48 ವರ್ಷಗಳ ಕಾಲ ಇವರು ವಿಷಸರ್ಪಗಳ ಜೊತೆ ನಡೆಸಿದ ಸಾಹಸಮಯ ಬದುಕು ಇಡೀ ವಿಶ್ವವನ್ನೇ ಬೆರಗುಗೊಳಿಸಿತ್ತು. ಪ್ರಾಣಾಂತಿಕ ಹಾವುಗಳಿಗೆ ಮುತ್ತಿಕ್ಕುವಷ್ಟು ಧೈರ್ಯಶಾಲಿಯಾಗಿದ್ದ ಈ ಕಿಂಗ್, ಕೊನೆಗೆ ತಾನು ಅತಿಯಾಗಿ ಪ್ರೀತಿಸಿದ ಅದೇ ವಿಷಕಾರಿ ಹಾವಿನ ಕಡಿತಕ್ಕೆ ಸಿಲುಕಿ ತಮ್ಮ ಜೀವನದ ಸಾಹಸಯಾತ್ರೆಗೆ ವಿದಾಯ ಹೇಳಿದ್ದು ಒಂದು ದುರಂತದ ಇತಿಹಾಸ. ಇವರ ಈ ನಂಬಲಾಗದ ಮತ್ತು ರೋಮಾಂಚನಕಾರಿ ಜೀವನದ ಸಂಪೂರ್ಣ ವಿವರ ಇಲ್ಲಿದೆ.
ಅಲಿ ಖಾನ್ ಶಂಸುದ್ದೀನ್ ಅವರು ತಮ್ಮ ಕೌಟುಂಬಿಕ ವೃತ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದು ಹಾಗೂ ವಿಷಸರ್ಪಗಳನ್ನು ಪ್ರೀತಿಸಿದ್ದು ಕೇವಲ ಕಾಕತಾಳೀಯವೇನಲ್ಲ. ಏಕೆಂದರೆ, ಇವರ ಕುಟುಂಬದ ಸತತ ಐದು ತಲೆಮಾರುಗಳು ಹಾವುಗಳನ್ನು ಸಾಕುವ ಮತ್ತು ಅವುಗಳೊಂದಿಗೆ ಪ್ರದರ್ಶನ ನೀಡುವ ಮೂಲಕವೇ ಜೀವನ ಸಾಗಿಸುತ್ತಿದ್ದವು. ಇವರ ತಾತ ಮೌಲಾನಾ ಖಾನ್ ಮತ್ತು ತಂದೆ ದಸ್ತಗೀರ್ ಹುಸೇನ್ ಅವರು ಹಾವು ಸಾಕಾಣಿಕೆ ಹಾಗೂ ಹಾವಿನ ಪ್ರದರ್ಶನಗಳಲ್ಲಿ ಮಲೇಷ್ಯಾದಲ್ಲೇ ಅತ್ಯಂತ ಪ್ರಸಿದ್ಧರಾಗಿದ್ದರು. ಸ್ವಭಾವತಃ ಅಲಿ ಖಾನ್ ಬೆಳೆಯುತ್ತಿದ್ದಂತೆ ಅವರು ಸಹ ಇದೇ ಸಾಂಪ್ರದಾಯಿಕ ವೃತ್ತಿಯನ್ನು ಮುಂದುವರಿಸಿದರು. ಆದರೆ, ಅಲಿ ಖಾನ್ ಅವರಿಗೆ ವಿಭಿನ್ನವಾಗಿರುವ ಈ ಕಲಾ ಪ್ರಬೇಧದ ಸಾಮರ್ಥ್ಯವನ್ನು ಕೇವಲ ಮಲೇಷ್ಯಾ ದೇಶಕ್ಕಷ್ಟೇ ಸೀಮಿತಗೊಳಿಸಲು ಇಷ್ಟವಿರಲಿಲ್ಲ. ಹೀಗಾಗಿ, ಅವರು ಇದನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಮತ್ತು ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ದೊಡ್ಡ ಸ್ಟೇಜ್ ಶೋಗಳನ್ನು ಆಯೋಜಿಸಲು ಸ್ವತಃ ಮುಂದಾಳತ್ವ ವಹಿಸಿದರು.
ತಮ್ಮ ಸಾಹಸ ಪ್ರವೃತ್ತಿ ಮತ್ತು ವೃತ್ತಿಯ ಭಾಗವಾಗಿ ಹಾವುಗಳೊಂದಿಗೆ ಪ್ರದರ್ಶನ ನೀಡುತ್ತಿದ್ದ ಅಲಿ ಖಾನ್, ಸಾಮಾನ್ಯರು ಮಾಡಲು ಊಹಿಸಲೂ ಹೆದರುವಂತಹ ಸಾಹಸಗಳನ್ನು ಮಾಡಿ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದರು. ಇವರು 1990 ರಲ್ಲಿ ಮಲೇಷ್ಯಾದ ಕಿರಿದಾದ ಕೋಣೆಯೊಂದರಲ್ಲಿ 400 ಕಾಳಿಂಗ ಸರ್ಪಗಳ ಜೊತೆ ಸತತ 40 ದಿನಗಳ ಕಾಲ ದಿನಕ್ಕೆ 12 ಗಂಟೆಗಳ ಕಾಲ ಕಳೆದು ಸಾಹಸ ಮೆರೆದರು. ಈ ಅದ್ಭುತ ಸಾಹಸವೇ ಅವರಿಗೆ 'ಸ್ನೇಕ್ ಕಿಂಗ್' ಎಂಬ ಬಿರುದನ್ನು ತಂದುಕೊಟ್ಟಿತು. ಇಷ್ಟಕ್ಕೇ ತಮ್ಮ ಸಾಹಸಯಾತ್ರೆಯನ್ನು ನಿಲ್ಲಿಸದ ಅಲಿ ಖಾನ್, 1997 ರಲ್ಲಿ ಬರೋಬ್ಬರಿ 6,000 ವಿಷಕಾರಿ ಚೇಳುಗಳೊಂದಿಗೆ 21 ದಿನಗಳನ್ನು ಕಳೆಯುವ ಮೂಲಕ ಮತ್ತೊಂದು ಗಿನ್ನಿಸ್ ವಿಶ್ವ ದಾಖಲೆ ಬರೆದರಲ್ಲದೆ, 'ಸ್ಕಾರ್ಪಿಯನ್ ಕಿಂಗ್' (ಚೇಳುಗಳ ರಾಜ) ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ತಮ್ಮ ಬದುಕಿಗೆ ಯಾವುದೇ ಕ್ಷಣದಲ್ಲೂ ಸಾವು ಎದುರಾಗಬಹುದು ಎಂದು ಗೊತ್ತಿದ್ದರೂ ಅಲಿ ಖಾನ್ ಅವರು ತಮ್ಮ ಸಾಹಸದ ವೃತ್ತಿಜೀವನವನ್ನು ಮುಂದುವರಿಸಿದ್ದರು. ಅವರು ತಮ್ಮ 21ನೇ ವಯಸ್ಸಿನಲ್ಲಿಯೇ ಮೊದಲ ಬಾರಿಗೆ ಕಾಳಿಂಗ ಸರ್ಪದ ಕಡಿತಕ್ಕೆ ಒಳಗಾಗಿದ್ದರು. ವರ್ಷಗಳ ಕಾಲ ನಿರಂತರವಾಗಿ ಹಾವು ಕಚ್ಚುತ್ತಿದ್ದ ಕಾರಣ, ಅವರ ದೇಹವು ಹಾವಿನ ವಿಷದ ವಿರುದ್ಧ ಒಂದು ಮಟ್ಟದ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಜೀವಿತಾವಧಿಯಲ್ಲಿ ಸುಮಾರು 99 ಬಾರಿ ಹಾವಿನ ಕಡಿತಕ್ಕೊಳಗಾಗಿದ್ದರೂ ಸಹ ವಿಷದಿಂದ ಬದುಕುಳಿದಿದ್ದರು ಮತ್ತು ಹಾವಿನ ಕಡಿತವನ್ನು ಎಂದಿಗೂ ಗಂಭೀರವಾಗಿ ತೆಗೆದುಕೊಳ್ಳುವ ಅಭ್ಯಾಸವನ್ನು ಅವರು ಹೊಂದಿರಲಿಲ್ಲ.
ಆದರೆ, ಅವರ ಇದೇ ನಿರ್ಲಕ್ಷ್ಯದ ಧೋರಣೆ ಕೊನೆಗೆ ಅವರಿಗೆ ಮುಳುವಾಯಿತು. 2006ರ ಜನವರಿಯಲ್ಲಿ ಕೌಲಾಲಂಪುರ್‌ನ ಥಿಯೇಟರ್ ರೆಸ್ಟೋರೆಂಟ್ ಒಂದರಲ್ಲಿ ಪ್ರದರ್ಶನ ನೀಡುತ್ತಿದ್ದಾಗ, ಅವರ ನೆಚ್ಚಿನ ಕಾಳಿಂಗ ಸರ್ಪವೇ ಅವರ ಎಡಗೈಗೆ ಕಚ್ಚಿತು. ಎಂದಿನಂತೆ ಅವರು ಇದನ್ನು ಸಾಧಾರಣ ವಿಷಯವೆಂದು ನಿರ್ಲಕ್ಷಿಸಿದರು. ಆದರೆ 99 ಬಾರಿ ಅವರ ಕೈಹಿಡಿದಿದ್ದ ಅದೃಷ್ಟ 100ನೇ ಬಾರಿಗೆ ಅವರ ಜೊತೆ ಇರಲಿಲ್ಲ. ಮುಂಚೆ ಹಲವು ಬಾರಿ ಹಾವು ಕಚ್ಚಿದ್ದರಿಂದ ಆಸ್ಪತ್ರೆಗೆ ಹೋಗುವ ಗೋಜಿಗೆ ಹೋಗದ ಅವರ ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿ ಈ ಬಾರಿ ಕೆಲಸ ಮಾಡಲಿಲ್ಲ. ಎರಡು ದಿನಗಳ ನಂತರ ವಿಷವು ಇಡೀ ದೇಹಕ್ಕೆ ಹರಡಿ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿತು. ತಕ್ಷಣವೇ ಅವರನ್ನು ಕೌಲಾಲಂಪುರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ತಮ್ಮ 48ನೇ ವಯಸ್ಸಿನಲ್ಲಿ ಅವರು ಸಾವಿಗೆ ಶರಣಾದರು.
ಅಲಿ ಖಾನ್ ಅವರು ಕೇವಲ ತಮ್ಮ ಕುಟುಂಬದವರಿಗಷ್ಟೇ ಅಲ್ಲದೆ, ಹೊರಗಿನವರಿಗೂ ಈ ವಿಶಿಷ್ಟ ಕಲೆಯನ್ನು ತರಬೇತಿ ನೀಡಲು ಎಂದಿಗೂ ಹಿಂಜರಿಯಲಿಲ್ಲ. ಅವರ ಪ್ರೀತಿಯ ಶಿಷ್ಯೆ ನೂರ್ ಮಲೀನಾ ಹಸನ್ ಅವರೇ ಇದಕ್ಕೆ ಉತ್ತಮ ಉದಾಹರಣೆ. ಅಲಿ ಖಾನ್ ಅವರ ಮಾರ್ಗದರ್ಶನದಲ್ಲಿ ಕಠಿಣ ತರಬೇತಿ ಪಡೆದ ನೂರ್ ಮಲೀನಾ, ಬರೋಬ್ಬರಿ 6,000 ಚೇಳುಗಳೊಂದಿಗೆ ಗಾಜಿನ ಪಂಜರದಲ್ಲಿ ಸತತ 36 ದಿನಗಳನ್ನು ಕಳೆಯುವ ಮೂಲಕ ವಿಶ್ವ ದಾಖಲೆ ಬರೆದರಲ್ಲದೆ, ಜಗತ್ತಿನಲ್ಲಿ 'ಸ್ಕಾರ್ಪಿಯನ್ ಕ್ವೀನ್' (ಚೇಳುಗಳ ರಾಣಿ) ಎಂದೇ ಪ್ರಸಿದ್ಧರಾದರು. ಇನ್ನು ವೈಯಕ್ತಿಕ ಜೀವನದಲ್ಲಿ ಅಲಿ ಖಾನ್ ಅವರು ಇಬ್ಬರು ಪತ್ನಿಯರು ಹಾಗೂ ಐದು ಜನ ಮಕ್ಕಳನ್ನು ಹೊಂದಿದ್ದರು.
ತಂದೆಯ ಧಾರುಣ ಸಾವು ಅಲಿ ಖಾನ್ ಅವರ ಹಿರಿಯ ಮಗ ಅಮ್ಜದ್ ಖಾನ್ ಮೇಲೆ ತೀವ್ರ ಆಘಾತ ಉಂಟುಮಾಡಿತ್ತು. ಈ ಕಾರಣದಿಂದಾಗಿ ಅವರು ಆರಂಭದಲ್ಲಿ ಕೌಟುಂಬಿಕ ವೃತ್ತಿಗೆ ಸೇರಲು ನಿರಾಕರಿಸಿದ್ದರು. ಆದರೆ, ಅಮ್ಜದ್ ಅವರ ತಾಯಿ ಮೌ ಬೋ ಬೀ ಮತ್ತು ಸಂಬಂಧಿಕರು, ನೀನು ಈ ಸಾಂಪ್ರದಾಯಿಕ ವೃತ್ತಿಯಿಂದ ಹಿಂದೆ ಸರಿದರೆ ತಂದೆಯ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂದು ಒತ್ತಾಯಿಸಿ ಅವರನ್ನು ವೃತ್ತಿಗೆ ಮರಳುವಂತೆ ಮಾಡಿದರು. ಕೊನೆಗೆ ಕುಟುಂಬದ ಗೌರವ ಹಾಗೂ ಐದು ತಲೆಮಾರುಗಳಿಂದ ಗಳಿಸಿಕೊಂಡು ಬಂದಿದ್ದ 'ಸ್ನೇಕ್ ಕಿಂಗ್ಸ್' ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಲು ಅಮ್ಜದ್ ಒಪ್ಪಿಕೊಂಡರು. ಇಂದು ತಮ್ಮ ಐದನೇ ತಲೆಮಾರಿನ ಕೊಂಡಿಯಾಗಿ ಅಮ್ಜದ್ ಖಾನ್ ಮಲೇಷ್ಯಾ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾವುಗಳೊಂದಿಗೆ ಸಾಹಸಮಯ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ತಂದೆಯಂತೆಯೇ ವಿಷಸರ್ಪಗಳಿಗೆ ಮುತ್ತಿಕ್ಕುವ ಹಾಗೂ ಅವುಗಳೊಂದಿಗೆ ಸಮಯ ಕಳೆಯುವ ಅಪಾಯಕಾರಿ ಸಾಹಸಗಳನ್ನು ಮಾಡುವ ಇವರು, ಈ ವೃತ್ತಿ ತಮ್ಮ ಜೀವನದ ಒಂದು ಭಾಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ, (ಏಜೆನ್ಸೀಸ್​).