- ಆ.12ರಂದು ಆಕಾಶದಲ್ಲಿ ವಿಸ್ಮಯಗಳು ಗೋಚರ
- ಗುರು, ಬುಧ, ಮಂಗಳ, ಶನಿ, ಯುರೇನಸ್ ಮತ್ತು ನೆಪ್ಟ್ಯೂನ್ ಸೇರಿ ಆರು ಗ್ರಹಗಳು
- ಯುರೋಪ್, ಆಫ್ರಿಕಾ ಮತ್ತು ಉತ್ತರ ಅಮೆರಿಕದ ಹಲವು ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರ
ನವದೆಹಲಿ: ಪ್ರಕೃತಿಯಲ್ಲಿ ನಡೆಯುವ ಕೌತುಕಕಾರಿ ವಿಸ್ಮಯಗಳನ್ನು ನೋಡಲು ಬಯಸುವವರಿಗೆ ಇದೇ ಆ.12ರಂದು ಕಣ್ಣಿಗೆ ಹಬ್ಬ ಕಾದಿದೆ. ಆಕಾಶದಲ್ಲಿ ವಿಸ್ಮಯಗಳು ಗೋಚರಿಸಲಿದ್ದು, ಒಂದೇ ದಿನ ಆರು ಗ್ರಹಗಳ ಸಾಲು, ಸೂರ್ಯಗ್ರಹಣ, ಅಮಾವಾಸ್ಯೆಯ ಕತ್ತಲೆ ಮತ್ತು ಪರ್ಸೀಡ್ ಉಲ್ಕಾಪಾತದ ಗರಿಷ್ಠ ಹಂತ ಸೇರಿ ನಾಲ್ಕು ಅಪರೂಪದ ಖಗೋಳ ವಿದ್ಯಮಾನ ನಡೆಯಲಿದೆ.
ಆಕಾಶದಲ್ಲಿ ಆರು ಗ್ರಹಗಳ ಮೆರವಣಿಗೆ
ಸೂರ್ಯೋದಯಕ್ಕೂ ಮುನ್ನ ಆಕಾಶದಲ್ಲಿ ಅಪರೂಪದ ಗ್ರಹಗಳ ಸಂಗಮ ಕಾಣಿಸಿಕೊಳ್ಳಲಿದೆ. ಗುರು, ಬುಧ, ಮಂಗಳ, ಶನಿ, ಯುರೇನಸ್ ಮತ್ತು ನೆಪ್ಟ್ಯೂನ್ ಸೇರಿದಂತೆ ಆರು ಗ್ರಹಗಳು ಪೂರ್ವದಿಂದ ಪಶ್ಚಿಮದವರೆಗೆ ಆಗಸದಲ್ಲಿ ಒಂದೇ ಸ್ಥಾನದಲ್ಲಿ ಗೋಚರಿಸಲಿವೆ ಎನ್ನಲಾಗಿದೆ.
ಮಂಗಳ ಮತ್ತು ಶನಿಯಂತಹ ಗ್ರಹಗಳನ್ನು ಬರಿಗಣ್ಣಿನಿಂದಲೇ ಗುರುತಿಸಲು ಸಾಧ್ಯವಾಗಬಹುದು. ಆದರೆ, ದೂರದಲ್ಲಿರುವ ಯುರೇನಸ್ ಮತ್ತು ನೆಪ್ಟ್ಯೂನ್ನಂತಹ ಗ್ರಹಗಳನ್ನು ಸ್ಪಷ್ಟವಾಗಿ ವೀಕ್ಷಿಸಲು ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಅವಶ್ಯಕತೆ ಇದೆ. ಇಂಗ್ಲಿಷ್ನಲ್ಲಿ ಕರೆಯುವ ಈ ‘ಪ್ಲಾನೆಟರಿ ಪೆರೇಡ್’ ಎಂಬುದು ಸಾಮಾನ್ಯವಾಗಿ ಆಕಾಶದ ಒಂದೇ ಭಾಗದಲ್ಲಿ ಹಲವು ಗ್ರಹಗಳು ಗೋಚರಿಸುವುದನ್ನು ಸೂಚಿಸುವ ಪದ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.
ರೋಚಕ ದೃಶ್ಯ
ಇದೇ ದಿನ ಮತ್ತೊಂದು ಭವ್ಯ ಖಗೋಳ ಘಟನೆ ನಡೆಯಲಿದ್ದು, ಚಂದಿರನು ಭೂಮಿ ಮತ್ತು ಸೂರ್ಯನ ನಡುವೆ ನೇರವಾಗಿ ಹಾದುಹೋಗುವಾಗ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್ ಮತ್ತು ಸ್ಪೇನ್ ಮೂಲಕ ಸಾಗುವ ಈ ಗ್ರಹಣದ ಪಥದಲ್ಲಿರುವವರಿಗೆ ಕೆಲ ಸಮಯ ಹಗಲೇ ರಾತ್ರಿ ಎಂಬಂತೆ ಅನುಭವ ಆಗಬಹುದು.
ಭಾರತದಲ್ಲಿ ಕಾಣಿಸಲ್ಲ
ಯುರೋಪ್, ಆಫ್ರಿಕಾ ಮತ್ತು ಉತ್ತರ ಅಮೆರಿಕದ ಹಲವು ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಆದರೆ, ಭಾರತೀಯರಿಗೆ ಈ ಸೂರ್ಯಗ್ರಹಣವನ್ನು ನೇರವಾಗಿ ನೋಡುವ ಅವಕಾಶ ಸಿಗುವುದಿಲ್ಲ. ಭಾರತೀಯ ಕಾಲಮಾನ (IST) ಪ್ರಕಾರ, ಗ್ರಹಣದ ಅವಧಿ ಆಗಸ್ಟ್ 12ರ ರಾತ್ರಿ ಸುಮಾರು 9:45ರಿಂದ ಆಗಸ್ಟ್ 13ರ ಮುಂಜಾನೆ 2:15 ರವರೆಗೆ ಇರಲಿದೆ. ಈ ಸಮಯದಲ್ಲಿ, ದೇಶದಲ್ಲಿ ಸೂರ್ಯ ದಿಗಂತದ ಕೆಳಗೆ ಇರುವುದರಿಂದ ದೇಶದ ಯಾವುದೇ ಭಾಗದಿಂದಲೂ ಗ್ರಹಣ ಗೋಚರಿಸುವುದಿಲ್ಲ.
ಅಮಾವಾಸ್ಯೆಯ ಕತ್ತಲೆಯಲ್ಲಿ ಉಲ್ಕಾಪಾತ
ಅಮಾವಾಸ್ಯೆಯ ಸಮಯದಲ್ಲಿ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬಂದಾಗ, ಚಂದಿರನ ಕತ್ತಲಾದ ಭಾಗವು ಭೂಮಿಗೆ ಎದುರಾಗುತ್ತದೆ. ಈ ಅವಧಿಯಲ್ಲಿ ಸೂರ್ಯನ ಬೆಳಕು ಚಂದ್ರನ ಹಿಂಭಾಗಕ್ಕೆ ಬೀಳುವುದರಿಂದ ಭೂಮಿಗೆ ಚಂದ್ರನು ಸಂಪೂರ್ಣವಾಗಿ ಗೋಚರಿಸುವುದಿಲ್ಲ ಹಾಗೂ ರಾತ್ರಿಯಲ್ಲಿ ಆಕಾಶವು ಎಂದಿಗಿಂತ ಕತ್ತಲೆಯಿಂದ ಕೂಡಿರಲಿದೆ.
ಗಂಟೆಗೆ 100 ಉಲ್ಕೆಗಳ ಗೋಚರ ಸಾಧ್ಯತೆ
ಚಂದ್ರನ ಬೆಳಕಿನ ಅಡ್ಡಿಯಿಲ್ಲದ ಕಾರಣ, ಆಕಾಶದತ್ತ ಕಣ್ಣಾಯಿಸುವವರಿಗೆ ಪರ್ಸೀಡ್ ಉಲ್ಕಾಪಾತದ ಅದ್ಭುತ ದೃಶ್ಯಗಳನ್ನು ಕಾಣುವ ಸಾಧ್ಯತೆಯಿದೆ. ಗರಿಷ್ಠ ಹಂತದಲ್ಲಿ ಗಂಟೆಗೆ 100 ಉಲ್ಕೆಗಳವರೆಗೆ ಆಕಾಶದಲ್ಲಿ ಚಿಮ್ಮುವುದನ್ನು ಕಾಣಬಹುದು. ಕೆಲವು ಉಲ್ಕೆಗಳು ಹೊಳೆಯುವ ಬೆಂಕಿಯ ಉಂಡೆಗಳಂತೆ ಕಾಣಿಸಿಕೊಂಡು, ಹಿಂಭಾಗದಲ್ಲಿ ಪ್ರಕಾಶಮಾನವಾದ ರೇಖೆಯನ್ನೂ ಮೂಡಿಸಬಹುದು,(ಏಜೆನ್ಸೀಸ್).