- ತಾಮ್ರದ ಗಣಿಯಲ್ಲಿ ಸೇತುವೆ ಕುಸಿದು ಭಾರೀ ದುರಂತ
- 32 ಜನರ ಸಾವುಗಳ ಬಗ್ಗೆ ಧೃಢಪಡಿಸಿದ ಅಧಿಕಾರಿಗಳು
ಕಾಂಗೋ: ಆಗ್ನೇಯ ಕಾಂಗೋದಲ್ಲಿನ ಅರೆ-ಕೈಗಾರಿಕಾ ತಾಮ್ರದ ಗಣಿಯಲ್ಲಿ ಸೇತುವೆ ಕುಸಿದು ಭಾನುವಾರ ಕನಿಷ್ಠ 32 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಈ ವರ್ಷ ದೇಶದಲ್ಲಿ ನಡೆದ ಅತ್ಯಂತ ಮಾರಕ ಗಣಿಗಾರಿಕೆ ಘಟನೆಗಳಲ್ಲಿ ಒಂದಾಗಿದೆ. ಕಾಂಗೋದ ಕುಶಲಕರ್ಮಿ ಗಣಿಗಾರಿಕೆ ಸಂಸ್ಥೆ(SAEMAPE) ಲುವಾಲಾಬಾ ಪ್ರಾಂತ್ಯದ ಕಲಾಂಡೊ ಸ್ಥಳದಲ್ಲಿ ಕುಸಿತ ಸಂಭವಿಸಿದೆ ಎಂದು ಹೇಳಿದೆ.
ಅಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯ ಗಣಿಗಾರರು ಕಾರ್ಯನಿರ್ವಹಿಸುತ್ತಾರೆ. ಏಜೆನ್ಸಿ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ 49 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಇತರರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ. ಆದರೆ, ಸ್ಥಳೀಯ ಅಧಿಕಾರಿಗಳು 32 ಜನರ ಸಾವನ್ನು ದೃಢಪಡಿಸಿದ್ದಾರೆ.
ಲುವಾಲಾಬಾದ ಪ್ರಾಂತೀಯ ಆಂತರಿಕ ಸಚಿವ ರಾಯ್ ಕೌಂಬಾ ಅವರು ದೂರದರ್ಶನದ ಬ್ರೀಫಿಂಗ್‌ನಲ್ಲಿ ಮಾತನಾಡಿ, 32 ಸಾವುಗಳು ದೃಢಪಟ್ಟಿವೆ. ಅಧಿಕಾರಿಗಳು ಅಂತಿಮ ಸಂಖ್ಯೆಯ ಸಾವುನೋವುಗಳನ್ನು ಪರಿಶೀಲಿಸಲು ಕೆಲಸ ಮಾಡುತ್ತಿರುವುದರಿಂದ ಭಾನುವಾರವೂ ರಕ್ಷಣಾ ಪ್ರಯತ್ನಗಳು ಮುಂದುವರಿದಿವೆ ಎಂದು ತಿಳಿಸಿದ್ದಾರೆ.
ಘಟನೆ ಸಂಭವಿಸಿದ್ದೇಗೆ?
ಗಣಿಗಾರಿಕೆ ಪ್ರದೇಶವನ್ನು ವಶಪಡಿಸಿಕೊಳ್ಳಲು ಮಿಲಿಟರಿ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ನೂರಾರು ಜನರು ಭೀತಿಗೊಳಗಾಗಿ ಓಡಲು ಪ್ರಾರಂಭಿಸಿದ್ದಾರೆ. ಕಿರಿದಾದ ಸೇತುವೆ ಮೇಲೆ ಎಲ್ಲರೂ ಭಯದಿಂದ ಓಡಿದ್ದರಿಂದ ಸೇತುವೆ ಏಕಾಏಕಿ ಕುಸಿದಿದೆ ಹಿನ್ನೆಲೆ ದುರಂತ ಸಂಭವಿಸಿತು ಎಂದು SAEMAPE ಹೇಳಿದೆ.
ಸೇತುವೆ ಕುಸಿತಕ್ಕೆ ಸ್ವಲ್ಪ ಮೊದಲು ಗಣಿಗಾರರು ಮತ್ತು ಸೈನಿಕರ ನಡುವಿನ ಘರ್ಷಣೆಗಳ ವರದಿಗಳನ್ನು ಉಲ್ಲೇಖಿಸಿ, ಮಾನವ ಹಕ್ಕುಗಳ ರಕ್ಷಣಾ ಉಪಕ್ರಮವು ಮಿಲಿಟರಿಯ ಪಾತ್ರದ ಬಗ್ಗೆ ಸ್ವತಂತ್ರ ತನಿಖೆಗೆ ಕರೆ ನೀಡಿದೆ(ಏಜೆನ್ಸೀಸ್).