ಡೆಂಘೆ, ಜೀಕಾ ವೈರಸ್‌ಗೆ ಗೂಗಲ್ ಮಾಸ್ಟರ್ ಪ್ಲ್ಯಾನ್: ಪರಿಸರಕ್ಕೆ ಬಿಡುಗಡೆಯಾಗಲಿವೆ 3.2 ಕೋಟಿ ಸೊಳ್ಳೆಗಳು! Mosquitoes
- ಸೊಳ್ಳೆಗಳಿಂದ ಹರಡುವ ರೋಗಗಳ ತಡೆಗಟ್ಟುವಿಕೆಗಾಗಿ ಗೂಗಲಗಗನಿಂದ ಒಂದು ವಿನೂತನ ಪ್ರಯೋಗ
- ಬರೋಬ್ಬರಿ 32 ಮಿಲಿಯನ್ ಸೊಳ್ಳೆಗಳನ್ನು ಪರಿಸರಕ್ಕೆ ಬಿಡುಗಡೆ ಮಾಡಲು ಗೂಗಲ್ ಸಿದ್ಧತೆ
- ಅಪಾಯಕಾರಿ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಿ ರೋಗ ಹರಡುವಿಕೆಯನ್ನು ನಿಯಂತ್ರಣಕ್ಕೆ ಪ್ಲ್ಯಾನ್
- ಕ್ಯಾಲಿಫೋರ್ನಿಯಾದ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ನಡೆದ ಆರಂಭಿಕ ಪ್ರಯೋಗ ಯಶಸ್ವಿ
Mosquitoes : ವಿಶ್ವದ ಪ್ರಮುಖ ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಗೂಗಲ್, ಪ್ರಾಣಾಂತಿಕ ಕಾಯಿಲೆಗಳಾದ ಡೆಂಘೆ ಜ್ವರ, ಝಿಕಾ ವೈರಸ್ ಮತ್ತು ಚಿಕೂನ್‌ಗುನ್ಯಾದಂತಹ ಸೊಳ್ಳೆಗಳಿಂದ ಹರಡುವ ರೋಗಗಳ ತಡೆಗಟ್ಟುವಿಕೆಗಾಗಿ ಒಂದು ವಿನೂತನ ಹಾಗೂ ವಿಭಿನ್ನ ಪ್ರಯೋಗವನ್ನು ನಡೆಸುತ್ತಿದೆ.
ಈ ಮಾರಕ ಕಾಯಿಲೆಗಳನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಿಸುವ ಯೋಜನೆಯ ಭಾಗವಾಗಿ, ಗೂಗಲ್ ಕಂಪನಿಯು ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾ ರಾಜ್ಯಗಳಲ್ಲಿ ಬರೋಬ್ಬರಿ 32 ಮಿಲಿಯನ್ (3.2 ಕೋಟಿ) ಸೊಳ್ಳೆಗಳನ್ನು ಪರಿಸರಕ್ಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ವಿಶೇಷ ತಂತ್ರಜ್ಞಾನದ ಸೌಲಭ್ಯಗಳನ್ನು ಹೊಂದಿರುವ ಪ್ರಯೋಗಾಲಯಗಳಲ್ಲಿ 'ವೋಲ್ಬಾಕಿಯಾ' (Wolbachia) ಎಂಬ ಬ್ಯಾಕ್ಟೀರಿಯಾವನ್ನು ಈ ಸೊಳ್ಳೆಗಳ ದೇಹಕ್ಕೆ ಸೇರಿಸಲಾಗಿದ್ದು, ಇವುಗಳನ್ನು ಕಾಡಿಗೆ ಅಥವಾ ಸಾರ್ವಜನಿಕ ಪ್ರದೇಶಗಳಿಗೆ ಬಿಡುವುದರಿಂದ ಅಪಾಯಕಾರಿ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಿ ರೋಗ ಹರಡುವಿಕೆಯನ್ನು ನಿಯಂತ್ರಿಸಬಹುದಾಗಿದೆ ಎಂದು ಗೂಗಲ್ ತಿಳಿಸಿದೆ.
ಈ ಪ್ರಯೋಗಕ್ಕಾಗಿ ಮುಖ್ಯವಾಗಿ 'ಈಡಿಸ್ ಈಜಿಪ್ಟಿ' (Aedes aegypti) ಪ್ರಭೇದದ ಗಂಡು ಸೊಳ್ಳೆಗಳನ್ನು ಬಳಸಲಾಗುತ್ತಿದ್ದು, ಇವುಗಳಿಂದ ಮನುಷ್ಯರಿಗೆ ಯಾವುದೇ ರೀತಿಯ ಆರೋಗ್ಯದ ಆತಂಕ ಇರುವುದಿಲ್ಲ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾದ ಈ ಗಂಡು ಸೊಳ್ಳೆಗಳು ಪ್ರಕೃತಿಯಲ್ಲಿರುವ ಹೆಣ್ಣು ಸೊಳ್ಳೆಗಳೊಂದಿಗೆ ದೈಹಿಕ ಸಂಪರ್ಕ ಬೆಳೆಸಿದಾಗ, ಆ ಹೆಣ್ಣು ಸೊಳ್ಳೆಗಳು ಇಡುವ ಮೊಟ್ಟೆಗಳು ಮರಿಗಳಾಗಿ ಹೊರಬರುವುದಿಲ್ಲ. ಇದರ ಪರಿಣಾಮವಾಗಿ ಮುಂದಿನ ಪೀಳಿಗೆಯ ಸೊಳ್ಳೆಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತದೆ ಎಂದು ತಜ್ಞರು ಕಂಡುಕೊಂಡಿದ್ದಾರೆ.
ಇಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ, ಈ ಗಂಡು ಸೊಳ್ಳೆಗಳು ಮನುಷ್ಯರನ್ನು ಕಡಿಯುವುದಿಲ್ಲ ಮತ್ತು ಯಾವುದೇ ರೋಗಗಳನ್ನು ಹರಡುವುದಿಲ್ಲ. ಹಾಗಾಗಿ ಇವುಗಳಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಆರೋಗ್ಯದ ಬೆದರಿಕೆ ಇರುವುದಿಲ್ಲ ಎಂದು ಪರಿಣಿತರು ತಿಳಿಸಿದ್ದಾರೆ.
ಈ ವಿನೂತನ ಯೋಜನೆಯನ್ನು ಗೂಗಲ್‌ನ ಪೇರೆಂಟ್ ಸಂಸ್ಥೆಯಾದ 'ಆಲ್ಫಾಬೆಟ್' (Alphabet) ಅಡಿಯಲ್ಲಿ ಬರುವ ಲೈಫ್ ಸೈನ್ಸಸ್ ವಿಭಾಗ 'ವೆರಿಲಿ' (Verily) ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಕ್ಯಾಲಿಫೋರ್ನಿಯಾದ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಕಂಪನಿಯು ನಡೆಸಿದ ಆರಂಭಿಕ ಪ್ರಯೋಗಗಳು ಸೊಳ್ಳೆಗಳ ಸಂಖ್ಯೆಯನ್ನು ಶೇ. 80 ಕ್ಕಿಂತ ಹೆಚ್ಚು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿವೆ ಎಂದು ವರದಿಯಾಗಿದೆ.
ಸದ್ಯ ಆರಂಭಿಕ ಪ್ರಯೋಗದ ಭರ್ಜರಿ ಯಶಸ್ಸಿನಿಂದ ಗೂಗಲ್ ಅತ್ಯಂತ ವಿಶ್ವಾಸ ಹೊಂದಿದ್ದು, ಇದೀಗ ಇದೇ ಯೋಜನೆಯನ್ನು ಅಮೆರಿಕದಾದ್ಯಂತ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಜಾರಿಗೆ ತರಲು ಯೋಜಿಸುತ್ತಿದೆ, (ಏಜೆನ್ಸೀಸ್).