ಕೈರೋ: ಈಜಿಪ್ಟ್‌ನ ರಾಜಧಾನಿ ಕೈರೋದ ಹೆದ್ದಾರಿಯಲ್ಲಿ ಇಂಧನ ಟ್ಯಾಂಕರ್ ಪಲ್ಟಿಯಾಗಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Cairo Fuel Tanker Accident) ಕನಿಷ್ಠ 31 ಮಂದಿ ಸಜೀವ ದಹನವಾಗಿದ್ದು, 21 ಜನರು ಗಂಭೀರವಾಗಿ ಗಾಯಗೊಂಡಿದ್ದು, 27ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ ಎಂದು ಈಜಿಪ್ಟ್ ಆರೋಗ್ಯ ಸಚಿವಾಲಯ ದೃಢಪಡಿಸಿದೆ.
ಗ್ರೇಟರ್ ಕೈರೋ ಪ್ರದೇಶದ ವ್ಯಾಪ್ತಿಗೆ ಬರುವ ಗಿಜಾದ ವಾರಾಕ್ ನೆರೆಹೊರೆಯ ರಿಂಗ್ ರೋಡ್ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಇಂಧನ ತುಂಬಿದ್ದ ಟ್ಯಾಂಕರ್ ಅಪಘಾತಕ್ಕೀಡಾದ ತಕ್ಷಣ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಹೆದ್ದಾರಿಯಲ್ಲಿದ್ದ ಇತರ ವಾಹನಗಳಿಗೂ ವ್ಯಾಪಿಸಿದೆ.
ಅಪಘಾತದ ತೀವ್ರತೆಗೆ ವಾಹನಗಳ ಒಳಗೆ ಸಿಲುಕಿದ್ದ ಪ್ರಯಾಣಿಕರಿಗೆ ಹೊರಬರಲು ಸಾಧ್ಯವಾಗದೆ ಸಾವು-ನೋವಿನ ಪ್ರಮಾಣ ಹೆಚ್ಚಾಗಿದೆ. ಘಟನಾ ಸ್ಥಳದ ದೃಶ್ಯಾವಳಿಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿರುವುದು ಮತ್ತು ರಕ್ಷಣಾ ತಂಡಗಳು ಸುಟ್ಟುಹೋದ ವಾಹನಗಳ ಅವಶೇಷಗಳಿಂದ ಸಂತ್ರಸ್ತರನ್ನು ಹೊರತೆಗೆಯುತ್ತಿರುವುದು ಕಂಡುಬಂದಿದೆ.
ಕೈರೋದ ಉಪನಗರವಾದ ಇಂಬಾಬಾದ ವಾರಾಕ್ ಜಿಲ್ಲೆಯ ಅಪಘಾತ ಸ್ಥಳದ ಬಳಿ ನೂರಾರು ಜನರು ಜಮಾಯಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಆರಂಭದಲ್ಲಿ ಸ್ವಲ್ಪ ಅಡ್ಡಿಯಾಯಿತು. ಈಜಿಪ್ಟ್‌ನ ಆರೋಗ್ಯ ಸಚಿವಾಲಯದ ಪ್ರಕಾರ, ಘಟನೆಯಲ್ಲಿ ಕನಿಷ್ಠ 21 ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರಂಭಿಕ ವರದಿಗಳಲ್ಲಿ ಗಾಯಾಳುಗಳ ಸಂಖ್ಯೆ 25 ಎಂದು ಹೇಳಲಾಗಿತ್ತಾದರೂ, ನಂತರ ಅಧಿಕಾರಿಗಳು 21 ಎಂದು ಧೃಡಪಡಿಸಿದ್ದಾರೆ.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದ್ದು, ತಾವು ಖುದ್ದಾಗಿ ಅಪಘಾತ ಸ್ಥಳಕ್ಕೆ ಭೇಟಿ ನೀಡುವುದಾಗಿ ಆರೋಗ್ಯ ಸಚಿವ ಖಾಲೆದ್ ಅಬ್ದೆಲ್ ಗಫಾರ್ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮತ್ತು ಮೃತದೇಹಗಳ ಗುರುತು ಪತ್ತೆ ಪ್ರಕ್ರಿಯೆ ಮುಂದುವರಿದಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಭೀಕರ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್-ಫತ್ತಾಹ್ ಎಲ್-ಸಿಸಿ ತೀವ್ರ ಸಂತಾಪ ಸೂಚಿಸಿದ್ದಾರೆ. ಮತ್ತೊಂದೆಡೆ, ಬೆಂಕಿಯ ತೀವ್ರತೆಗೆ ಮೃತದೇಹಗಳು ಗುರುತು ಹಿಡಿಯಲಾಗದಷ್ಟು ಸುಟ್ಟುಹೋಗಿರುವುದರಿಂದ, ಸಂತ್ರಸ್ತರ ಗುರುತನ್ನು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಾರ್ವಜನಿಕ ಅಭಿಯೋಜಕರ ಕಚೇರಿ ತಿಳಿಸಿದೆ.
ಈ ದುರಂತವು ಈಜಿಪ್ಟ್‌ನ ಕಳಪೆ ರಸ್ತೆ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ದೇಶದಲ್ಲಿ ಪ್ರತಿವರ್ಷ ಸಾವಿರಾರು ಜನರು ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಅತಿಯಾದ ವೇಗ, ಹದಗೆಟ್ಟ ರಸ್ತೆಗಳು ಮತ್ತು ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಯ ಕೊರತೆಯೇ ಇಂತಹ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ. ಕಳೆದ ಜನವರಿಯಲ್ಲಷ್ಟೇ ದಕ್ಷಿಣ ಪ್ರಾಂತ್ಯದ ಬೆನಿ ಸ್ಯೂಫ್ ಬಳಿ ಸಂಭವಿಸಿದ್ದ ಸರಣಿ ವಾಹನ ಅಪಘಾತದಲ್ಲಿ 21 ಮಂದಿ ಮೃತಪಟ್ಟು, 16 ಜನರು ಗಾಯಗೊಂಡಿದ್ದರು. ಇದು ಈಜಿಪ್ಟ್ ಹೆದ್ದಾರಿಗಳಲ್ಲಿ ವಾಹನ ಸವಾರರು ನಿತ್ಯ ಎದುರಿಸುತ್ತಿರುವ ಸಮಸ್ಯೆಗೆ ಜೀವಂತ ಸಾಕ್ಷಿಯಾಗಿದೆ(ಏಜೆನ್ಸೀಸ್).