Netherlands lightning strikes
- ಇತಿಹಾಸದಲ್ಲೇ ಮೊದಲ ಬಾರಿಗೆ 'ಕೋಡ್ ರೆಡ್' ಉಷ್ಣಾಂಶ ಎದುರಿಸಿದ ನೆದರ್ಲ್ಯಾಂಡ್.
- ಕೇವಲ 30 ನಿಮಿಷಗಳಲ್ಲಿ 30,000 ಮಿಂಚಿನ ಹೊಡೆತ; ಪ್ರತಿ ಸೆಕೆಂಡಿಗೆ 17 ಮಿಂಚು ದಾಖಲು.
- ನಿರಂತರವಾಗಿ ಮಿನುಗಿದ ಆಕಾಶದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್
Netherlands lightning strikes: ಯುರೋಪಿನಾದ್ಯಂತ ಬಿಸಿಗಾಳಿ ಆತಂಕವನ್ನು ಸೃಷ್ಟಿಮಾಡಿದೆ. ಈ ಮಧ್ಯೆ ನೆದರ್ಲ್ಯಾಂಡ್ಸ್ ಮತ್ತು ಅದರ ರಾಜಧಾನಿ ಆಮ್ಸ್ಟರ್‌ಡ್ಯಾಂನಲ್ಲಿ ತಡರಾತ್ರಿ ಸತತ ನಾಲ್ಕು ಗಂಟೆಗಳ ಕಾಲ, ಪ್ರತಿ ಸೆಕೆಂಡಿಗೆ 17 ಬಾರಿ, ಅಂದರೆ ಒಟ್ಟಾರೆಯಾಗಿ 3,00,000 ಕ್ಕೂ ಹೆಚ್ಚು ಬಾರಿ ಸಿಡಿಲು-ಮಿಂಚು ಕಾಣಿಸಿಕೊಂಡಿದ್ದು, ಮತ್ತಷ್ಟು ಆತಂಕವನ್ನುಂಟು ಮಾಡಿದೆ.
ಹೌದು, ರಾಯಲ್ ನೆದರ್ಲ್ಯಾಂಡ್ಸ್ ಹವಾಮಾನ(KNMI)ಇಲಾಖೆ ಪ್ರಕಾರ ನೆದರ್ಲ್ಯಾಂಡ್ಸ್ ಮತ್ತು ಅದರ ರಾಜಧಾನಿ ಆಮ್ಸ್ಟರ್‌ಡ್ಯಾಂನಲ್ಲಿ 24 ಗಂಟೆಗಳ ಅವಧಿಯಲ್ಲಿ ಇಡೀ ದೇಶಾದ್ಯಂತ 3,00,000 ಕ್ಕೂ ಹೆಚ್ಚು ಬಾರಿ ಮಿಂಚು ಕಾಣಿಸಿಕೊಂಡಿದೆ ಎಂದು ಹೇಳಿದೆ. ಸದ್ಯ ಭೀಕರ ಶಾಖದಿಂದ ತತ್ತರಿದಿದ್ದ ಜನರಿಗೆ, ಭೀಕರ ಚಂಡಮಾರುತ ಇಡೀ ಯುರೋಪ್ ಅನ್ನು ಬೆಚ್ಚಿಬೀಳಿಸುವಂತೆ ಮಾಡಿದೆ
ಹವಾಮಾನ ಇಲಾಖೆ ಹೇಳಿದ್ದೇನು?
ಈ ಚಂಡಮಾರುತವು ಎಷ್ಟು ಭೀಕರವಾಗಿತ್ತೆಂದರೆ, ಅದರ ಉತ್ತುಂಗದ ಸಮಯದಲ್ಲಿ ನೆದರ್ಲೆಂಡ್ಸ್ ಮತ್ತು ಉತ್ತರ ಜರ್ಮನಿಯ ಭಾಗಗಳಲ್ಲಿ ಕೇವಲ 30 ನಿಮಿಷಗಳ ಅವಧಿಯಲ್ಲಿ ಬರೋಬ್ಬರಿ 30,000 ಬಾರಿ ಸಿಡಿಲುಗಳು ಅಪ್ಪಳಿಸಿವೆ. ಸರಾಸರಿ ಲೆಕ್ಕಾಚಾರ ನೋಡಿದರೆ ಪ್ರತಿ ಸೆಕೆಂಡಿಗೆ ಬರೋಬ್ಬರಿ 17 ಬಾರಿ ಆಕಾಶದಲ್ಲಿ ಮಿಂಚು ಕಾಣಿಸಿಕೊಂಡಿದೆ, ನಿರಂತರವಾಗಿ ಇಡಿಮಿಂಚು ಸಂಭವಿಸುತ್ತಿದ್ದರಿಂದ ಆಕಾಶವು 'ಸ್ಟ್ರೋಬ್ ಲೈಟ್'ನಂತೆ ಸತತವಾಗಿ ಮಿನುಗುತ್ತಿತ್ತು ಎಂದು ಹೇಳಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್
ಒಂದೇ ಸಮನೇ ಕಾಣಿಸಿಕೊಂಡ ಈ ಮಿಂಚಿನಿಂದಾಗಿ ರಾತ್ರಿಯ ಕಗ್ಗತ್ತಲಿನ ರಾತ್ರಿ ಹಗಲಿನಂತೆ ಕಾಣುತ್ತಿತ್ತು. ಇಡೀ ರಾತ್ರಿ ಕಾಣಿಸಿಕೊಂಡ ಮಿಂಚುಗಳ ಬಗ್ಗೆ ಇಲ್ಲಿನ ಜನರು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡುತ್ತಿದ್ದು, ಭಾರಿ ವೈರಲ್ ಆಗಿದೆ.
ಮಿಂಚು ಕಾಣಿಸಿಕೊಳ್ಳಲು ಕಾರಣ ಏನು?
ಭಾರತದ ಮುಂಗಾರು ಅವಧಿಯಲ್ಲಿ ಕಂಡುಬರುವ ಇಂತಹ ತೀವ್ರ ಚಂಡಮಾರುತಗಳು ನೆದರ್ಲ್ಯಾಂಡ್ಸ್‌ನಲ್ಲಿ ಅಪರೂಪ. ಆದರೆ, ಯುರೋಪ್ನಲ್ಲಿ ಕಾಣಿಸಿಕೊಂಡಿರುವ ದಾಖಲೆ ಮಟ್ಟದ ತೀವ್ರ ತಾಪಮಾನವೇ ಇದಕ್ಕೆ ಕಾರಣವಾಗಿದೆ. ವಾತಾವರಣದಲ್ಲಿದ್ದ ಅತಿಯಾದ ಶಾಖ ಮತ್ತು ತೇವಾಂಶವು ಹಠಾತ್ ಆಗಿ ಚಂಡಮಾರುತದ ಮೋಡಗಳಾಗಿ ಮಾರ್ಪಟ್ಟಿದ್ದೇ ಈ ಭೀಕರ ಮಿಂಚಿಗೆ ಪ್ರಮುಖ ಕಾರಣ .
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೆದರ್ಲ್ಯಾಂಡ್ನಲ್ಲಿ ತೀವ್ರ ತಾಪಮಾನ ಕಾಣಿಸಿಕೊಂಡಿದೆ. ಈ ಬಗ್ಗೆ ಕೋಡ್ರೆಡ್ ಎಚ್ಚರಿಕೆ ನೀಡಲಾಗಿತ್ತು. ಆಮ್ಸ್ಟರ್‌ಡ್ಯಾಂನಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ತಾಪಮಾನ 30°C ಗಿಂತ ಹೆಚ್ಚಿತ್ತಲ್ಲದೆ, ಕೆಲವು ಕಡೆ 40°C ಹತ್ತಿರ ತಲುಪಿತ್ತು.
ಬದಲಾವಣೆಯ ಸಂಘರ್ಷ
ಇಲ್ಲಿನ ವಾತಾವರಣದಲ್ಲಿ ಹಠಾತ್ ಬದಲಾವಣೆ ಕಾಣುತ್ತಿದೆ. ಅತಿಯಾದ ಶಾಖ ಮತ್ತು ತೇವಾಂಶದ ಒಳಗೆ ಹಠಾತ್ ಆಗಿ ತಂಪಾದ ಗಾಳಿ ಪ್ರವೇಶಿಸಿದಾಗ, ಎರಡೂ ಗಾಳಿಗಳ ನಡುವೆ ತೀವ್ರ ಘರ್ಷಣೆ ಏರ್ಪಟ್ಟಿದೆ. ಇದು ಆಕಾಶದಲ್ಲಿ ಅತ್ಯಂತ ಶಕ್ತಿಶಾಲಿ ಚಂಡಮಾರುತದ ಮೋಡಗಳು ಸೃಷ್ಟಿಯಾಗಲು ಕಾರಣವಾಯಿತು. ಪರಿಸ್ಥಿತಿಯ ಗಂಭೀರತೆ ಅರಿತ ಹವಾಮಾನ ಇಲಾಖೆ ತಕ್ಷಣವೇ 'ಕೋಡ್ ಆರೆಂಜ್' ಎಚ್ಚರಿಕೆ ನೀಡಿತ್ತು.
ತಜ್ಞರು ಹೇಳಿದ್ದೇನು?
ಯುರೋಪ್ನಲ್ಲಿ ಜೂನ್ 2026ರಲ್ಲಿ ತೀವ್ರ ತಾಪಮಾನದಿಂದ ಆಗುತ್ತಿರುವ ಘಟನೆಗಳಿಗೆ ಮಾನವ ನಿರ್ಮಿತ ಜಾಗತಿಕ ತಾಪಮಾನ ಏರಿಕೆ ಕಾರಣ ಎಂದಿದ್ದಾರೆ. ಬಿಸಿಯಾದ ಗಾಳಿಯು ಹೆಚ್ಚು ತೇವಾಂಶ ಮತ್ತು ಶಕ್ತಿಯನ್ನು ಸಂಗ್ರಹಿಸಿಟ್ಟುಕೊಳ್ಳುವುದರಿಂದ ಇಂತಹ ಭೀಕರ ಚಂಡಮಾರುತಗಳು ಸೃಷ್ಟಿಯಾಗುತ್ತವೆ. . ತಾಪಮಾನ ಏರಿಕೆಯು ಕೇವಲ ಬಿಸಿಲಿಗೆ ಸೀಮಿತವಾಗಿರದೆ, ಪರಿಸರದ ಮೇಲೆ ಎಷ್ಟು ಭೀಕರ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಆಮ್ಸ್ಟರ್‌ಡ್ಯಾಂನ ಈ ಘಟನೆಯೇ ಸಾಕ್ಷಿಯಾಗಿದೆ ಎಂದು ವಿಜ್ಞಾನಿಗಳು ಮಾಹಿತಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).