ವಿದೇಶ

ಪೇಶಾವರದಲ್ಲಿ ಶಾಲೆಯ ಮೇಲ್ಛಾವಣಿ ಕುಸಿತ; 29 ಮಕ್ಕಳು ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ..Pakistan..

  • ಪೇಶಾವರದ ದಿರ್ ಕಾಲೋನಿ ಪ್ರದೇಶದಲ್ಲಿರುವ ಖಾಸಗಿ ಶಾಲೆಯ ಮೇಲ್ಛಾವಣಿ ಕುಸಿತ.

  • ಮಹಿಳಾ ಶಿಕ್ಷಕಿ ಸೇರಿದಂತೆ 29 ಮಂದಿ ಮಕ್ಕಳು ದಾರುಣವಾಗಿ ಮೃತ.

  • 40ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ.

ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದ ರಾಜಾಧಾನಿ ಪೇಶಾವರದಲ್ಲಿ ದಿರ್ ಕಾಲೋನಿ ಪ್ರದೇಶದಲ್ಲಿರುವ ಖಾಸಗಿ ಶಾಲೆಯೊಂದರ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಮಹಿಳಾ ಶಿಕ್ಷಕಿ ಸೇರಿದಂತೆ 29 ಜನರು ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ (ಅ.15) ಬೆಳಕಿಗೆ ಬಂದಿದೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಕಾರ್ಯಕರ್ತರು ಅವಶೇಷಗಳಡಿ ಸಿಲುಕಿಕೊಂಡ ಮಕ್ಕಳನ್ನು ಹುಡುಕುವ ಕಾರ್ಯ ಮುಂದುವರೆಸಿದ್ದಾರೆ. ಇಲ್ಲಿಯವರೆಗೂ ಗಂಭೀರ ಗಾಯಗೊಂಡ 40 ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು, ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ.

ಪ್ರಧಾನಿ ಸಂತಾಪ

ಪ್ರಧಾನಿ ಶೆಹಬಾಜ್ ಷರೀಫ್ ಮಾತನಾಡಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ತನಿಖೆಗೆ ಆದೇಶ

ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ರಾಜಧಾನಿಯಲ್ಲಿರುವ ದಿರ್ ಕಾಲೋನಿಯಲ್ಲಿ ಈ ಕುಸಿತ ಸಂಭವಿಸಿದೆ. ಶಾಲೆಯ ಮಾಲೀಕರನ್ನು ಬಂಧಿಸಿದ್ದು, ಘಟನೆ ಬಗ್ಗೆ ತನಿಖೆಗೆ ಉಪ ಆಯುಕ್ತ ಅಫಾಕ್ ವಜೀರ್ ಆದೇಶಿಸಿದ್ದಾರೆ.

ವೈದ್ಯರು ಏನಂದ್ರು?

ಲೇಡಿ ರೀಡಿಂಗ್ ಆಸ್ಪತ್ರೆಯ ವಕ್ತಾರ ಮುಹಮ್ಮದ್ ಅಸಿಮ್  ಮಾತನಾಡಿ, 'ಮೃತಪಟ್ಟ 29 ಮಕ್ಕಳಲ್ಲಿ ಮಕ್ಕಳಲ್ಲಿ 13 ವರ್ಷದ ಮೇಲ್ಪಟ್ಟವರು ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಾರೆ. ಇದರಲ್ಲಿ ಎಂಟು ಮಂದಿ ಬಾಲಕಿಯರು ದಾರುಣವಾಗಿ ಮೃತಪಟ್ಟಿದ್ದಾರೆ. ಓರ್ವ ಶಿಕ್ಷಕಿಯೂ ಇದ್ದಾರೆ' ಎಂದು ಸ್ಪಷ್ಟಪಡಿಸಿದರು.

'ಗಂಭೀರ ಗಾಯಗೊಂಡ ವಿದ್ಯಾರ್ಥಿಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ. ಮತ್ತಷ್ಟು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯ ಆಸ್ಪತ್ರೆ ಮುಂದೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಜಮಾಯಿಸಿದ್ದಾರೆ' ಎಂದರು ವೈದ್ಯರು.

ಪೊಲೀಸರು ಮಾಹಿತಿ ಕೊಟ್ಟಿದ್ದಿಷ್ಟು

ಖಾಸಗಿ ಶಾಲೆ ಕುಸಿದು ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಲು ಶಾಲಾ ಕಟ್ಟಡದ್ದೇ ಸಮಸ್ಯೆ, ರಚನಾತ್ಮಕವಾಗಿ ದುರ್ಬಲವಾಗಿದ್ದ ಕಾರಣ ಕುಸಿತಕ್ಕೆ ಕಾರಣವಾಯ್ತು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಮುಂದುವರೆದ ಕಾರ್ಯಾಚರಣೆ

ದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ ತಮ್ಮ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರು ಯಾರು, ವಿದ್ಯಾರ್ಥಿಗಳಾ ಅಥವಾ ನೆರೆಹೊರೆಯವರ ಎನ್ನುವ ಬಗ್ಗೆಯೂ ತನಿಖೆ ಶುರುವಾಗಿದೆ,(ಏಜೆನ್ಸೀಸ್).