Balochistan Train Explosion  
ವಿದೇಶ

ಬಲೂಚಿಸ್ತಾನದಲ್ಲಿ ಪಾಕ್​ ಸೈನಿಕರು ಪ್ರಯಾಣಿಸುತ್ತಿದ್ದ ರೈಲು ಸ್ಫೋಟ; 24 ಸಾವು, ಕೃತ್ಯದ ಹೊಣೆಯೊತ್ತ BLA

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದ ಕ್ವೆಟ್ಟಾದಲ್ಲಿ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಶಟಲ್ ರೈಲನ್ನು ಗುರಿಯಾಗಿಸಿ ಸ್ಫೋಟ
  • 24 ಸೇನಾ ಸಿಬ್ಬಂದಿ ಸ್ಥಳದಲ್ಲೇ ಸಾವು, 100 ಮಂದಿಗೆ ಗಾಯ, ರಕ್ಷಣಾ ಕಾರ್ಯ ಮುಂದುವರಿಕೆ
  • ಸ್ಫೋಟದ ಹೊಣೆಗಾರಿಕೆಯನ್ನು ಬಲೂಚ್ ಲಿಬರೇಷನ್ ಆರ್ಮಿ ಹೊತ್ತಿದೆ
ಪೇಶಾವರ: ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಭಾನುವಾರ ಅಘಾತಕಾರಿ ಘಟನೆ ನಡೆದಿದೆ. ಪಾಕಿಸ್ತಾನಿ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಶಟಲ್ ರೈಲೊಂದನ್ನು ಗುರಿಯಾಗಿಸಿ ನಡೆಸಲಾದ ಭೀಕರ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಕನಿಷ್ಠ 24 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಫೋಟಗೊಂಡಿದ್ದು ಹೇಗೆ?

ಭಾನುವಾರ ಮುಂಜಾನೆ ಕ್ವೆಟ್ಟಾದ ಚಮನ್​ ಪಟ್ಟಾಕ್​ ಬಳಿ ರೈಲು ಸಿಗ್ನಲ್​ ದಾಟುತ್ತಿದ್ದ ವೇಳೆ. ಸ್ಪೋಟಕ ತುಂಬಿದ್ದ ಕಾರು ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಫೋಟ ಸಂಭವಿಸಿತು. ಇನ್ನು ಸ್ಫೋಟದ ರಭಸಕ್ಕೆ ರೈಲಿನ ಮೂರು ಬೋಗಿಗಳಲ್ಲಿ ಒಂದು ಬೋಗಿ ಸಂಪೂರ್ಣವಾಗಿ ಹಳಿತಪ್ಪಿದೆ. ಭಾಗಶಃ ರೈಲಿಗೆ ಹಾನಿಯಾಗಿದೆ. ರೈಲಿನ ಒಂದು ಬೋಗಿ ನಜ್ಜುಗುಜ್ಜಾಗಿದೆ. ಅದೇ ಪ್ರದೇಶದಲ್ಲಿ 10ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ.
ಮನೆಗಳಿಗೆ ಹಾನಿ
ರೈಲು ಚಲಿಸುವ ಮಾರ್ಗದ ಸಮೀಪದಲ್ಲಿದ್ದ ಮನೆಗಳ ಗಾಜು ಪುಡಿಪುಡಿಯಾಗಿವೆ. ರೈಲಿನ ಅವಶೇಷದಡಿ ಬದುಕುಳಿದವರಿಗಾಗಿ ಹುಡುಕಾಟ, ರಕ್ಷಣಾ ಕಾರ್ಯ ನಡೆಯುತ್ತಿದೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಆತಂಕವಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈದ್​ ಹಬ್ಬಕ್ಕಾಗಿ ಪ್ರಯಾಣಿಸುತ್ತಿದ್ದರು

ಸೇನಾ ಅಧಿಕಾರಿಗಳ ಜೊತೆಗೆ ಅವರ ಕುಟುಂಬಸ್ಥರು ಸಹ ರೈಲಿನಲ್ಲಿ ಇದ್ದರು. ಮಂಗಳವಾರದಿಂದ ಈದ್​ ಹಬ್ಬ ಪ್ರಾರಂಭವಾಗುವುದರಿಂದ ಅದರ ಸಮರೋಪ ಸಮಾರಂಭಕ್ಕೆ ತಯಾರಿ ನಡೆಸಲು ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಅಷ್ಟರಲ್ಲಿ ಈ ಕೃತ್ಯ ನಡೆದಿದೆ. ಸ್ಫೋಟಕ ಪ್ರಕರಣದ ನಂತರ ಕ್ವೆಟ್ಟಾ ಪ್ರದೇಶದಲ್ಲಿ ಜನರ ಹಿತಕ್ಕಾಗಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ತ್ವರಿತವಾಗಿ ಪರಿಸ್ಥಿತಿ ನಿಭಾಯಿಸಲು ವೈದ್ಯರು ಮತ್ತು ರಕ್ಷಣಾ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಎಂದು ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡರು.

ರೈಲು ಸಂಚಾರ ಸ್ಥಗಿತ

ಮುನ್ನೆಚ್ಚರಿಕಾ ಕ್ರಮವಾಗಿ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್​ ಎಕ್ಸ್​​ಪ್ರೆಸ್​ ರೈಲನ್ನು ಕ್ವೆಟ್ಟಾ ನಿಲ್ದಾಣದಲ್ಲೇ ನಿಲ್ಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಖಾಸಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಹೊಣೆಯೊತ್ತ ಬಿಎಲ್​ಎ

ಈ ದಾಳಿಯ ಸಂಪೂರ್ಣ ಜವಾಬ್ದಾರಿಯನ್ನು ಬಲೂಚ್ ಲಿಬರೇಷನ್ ಆರ್ಮಿ (Balochistan Liberation Army) ಉಗ್ರ ಸಂಘಟನೆಯ ಆತ್ಮಹತ್ಯಾ ದಳವಾದ 'ಮಜೀದ್ ಬ್ರಿಗೇಡ್' ವಹಿಸಿಕೊಂಡಿದೆ. "ಆಕ್ರಮಿತ ಪಾಕಿಸ್ತಾನಿ ಪಡೆಗಳ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ನಮ್ಮ ಮಜೀದ್ ಬ್ರಿಗೇಡ್ ಅತ್ಯಂತ ವ್ಯವಸ್ಥಿತವಾದ ಫಿದಾಯೀನ್ ದಾಳಿ ನಡೆಸಿದೆ. ಭೌತಿಕ ಮತ್ತು ಮಾನವ ಜೀವಹಾನಿಯ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ" ಎಂದು ಬಿಎಲ್‌ಎ ಪ್ರಕಟಣೆಯಲ್ಲಿ ತಿಳಿಸಿದೆ.