21 ಗಂಟೆಗಳ ಹಗ್ಗಜಗ್ಗಾಟ ಅಂತ್ಯ! ಇಸ್ಲಾಮಾಬಾದ್ ಸಂಧಾನ ಫೇಲ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಮೊಳಗಲಿದೆಯೇ ಮಹಾಯುದ್ಧದ ರಣಕಹಳೆ?
ಇಸ್ಲಾಮಾಬಾದ್: ಜಗತ್ತೇ ಕಾತರದಿಂದ ಕಾಯುತ್ತಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಮುಖಾಮುಖಿ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ( Islamabad talks fail) ನಡೆದ ಈ ಸುದೀರ್ಘ 21 ಗಂಟೆಗಳ ಸಂಧಾನ ಪ್ರಕ್ರಿಯೆಯು ಅಂತಿಮವಾಗಿ ವಿಫಲವಾಗಿದ್ದು, ಕೇವಲ ಎರಡು ವಾರಗಳ ಹಿಂದೆ ಘೋಷಿಸಲಾಗಿದ್ದ ಕದನ ವಿರಾಮದ ಭವಿಷ್ಯ ಈಗ ಅತಂತ್ರ ಸ್ಥಿತಿಯಲ್ಲಿದೆ.
ಜೆಡಿ ವ್ಯಾನ್ಸ್ ಹೇಳಿದ ಆ ಕೆಟ್ಟ ಸುದ್ದಿ ಏನು..?
ಅಮೆರಿಕದ ನಿಯೋಗದ ನೇತೃತ್ವ ವಹಿಸಿದ್ದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಮಾತುಕತೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ನಿರಾಶೆ ವ್ಯಕ್ತಪಡಿಸಿದ್ದಾರೆ. ಒಂದು ಕೆಟ್ಟ ಸುದ್ದಿಯೆಂದರೆ, ನಾವು ಯಾವುದೇ ಒಪ್ಪಂದಕ್ಕೆ ಬಂದಿಲ್ಲ. ಇದು ಅಮೆರಿಕಕ್ಕಿಂತ ಇರಾನ್‌ಗೆ ಹೆಚ್ಚು ನಷ್ಟ ತರಲಿದೆ ಎಂದು ಎಚ್ಚರಿಸಿದ್ದಾರೆ.
ಅಣ್ವಸ್ತ್ರ ತಯಾರಿಕೆಯಿಂದ ಹಿಂದೆ ಸರಿಯುವ ಅಮೆರಿಕದ ಷರತ್ತುಗಳನ್ನು ಒಪ್ಪಿಕೊಳ್ಳಲು ಇರಾನ್ ನಿರಾಕರಿಸಿದ್ದೇ ಈ ವೈಫಲ್ಯಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಇರಾನ್ ಅಣ್ವಸ್ತ್ರಗಳನ್ನು ಹೊಂದುವುದಿಲ್ಲ ಎಂಬ ದೃಢವಾದ ಬದ್ಧತೆಯನ್ನು ನಾವು ನಿರೀಕ್ಷಿಸಿದ್ದೆವು. ಇದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮುಖ ಗುರಿಯಾಗಿತ್ತು, ಆದರೆ ಇರಾನ್ ನಮ್ಮ ನಿಯಮಗಳನ್ನು ತಿರಸ್ಕರಿಸಿದೆ ಎಂದು ವ್ಯಾನ್ಸ್ ಸ್ಪಷ್ಟಪಡಿಸಿದ್ದಾರೆ.
ಇರಾನ್ ಆಕ್ರೋಶ: ಅಮೆರಿಕದ ಅತಿರೇಕದ ಬೇಡಿಕೆಗಳು
ಇನ್ನೊಂದೆಡೆ, ಇರಾನ್ ನಿಯೋಗವು ಅಮೆರಿಕದ ಮೇಲೆ ಗೂಬೆ ಕೂರಿಸಿದೆ. ಅಮೆರಿಕವು ಯುದ್ಧದ ಮೂಲಕ ಪಡೆಯಲು ಸಾಧ್ಯವಾಗದ ವಿಷಯಗಳನ್ನು ಮಾತುಕತೆಯ ಮೇಜಿನ ಮೇಲೆ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಆರೋಪಿಸಿದೆ.
ಪಾಯಿಂಟ್ಸ್ ಆಫ್ ಕಂಟೆನ್ಶನ್
ಹೋರ್ಮುಜ್ ಜಲಸಂಧಿ: ವಿಶ್ವದ ಶೇ. 20-25 ರಷ್ಟು ತೈಲ ಸಾಗಣೆಯಾಗುವ ಈ ಮಾರ್ಗದ ಮೇಲೆ ಇರಾನ್ ನಿಯಂತ್ರಣ ಸಾಧಿಸಲು ಬಯಸಿದೆ.
ಅಣ್ವಸ್ತ್ರ ಹಕ್ಕು: ಶಾಂತಿಯುತ ಉದ್ದೇಶಕ್ಕಾಗಿ ಅಣ್ವಸ್ತ್ರ ಇಂಧನ ಬಳಸುವ ಹಕ್ಕನ್ನು ಬಿಟ್ಟುಕೊಡಲು ಇರಾನ್ ಸಿದ್ಧವಿಲ್ಲ.
ಹೆಚ್ಚುವರಿ ಷರತ್ತುಗಳು: ಯುದ್ಧದಲ್ಲಿ ಸೋಲಿಸಲು ಸಾಧ್ಯವಾಗದ ಕಾರಣ, ಅಮೆರಿಕವು ಅತಿರೇಕದ ಬೇಡಿಕೆಗಳನ್ನು ಇಡುತ್ತಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಸಂಧಾನ ಪ್ರಯತ್ನಗಳು
ಈ ಹೈ-ಪ್ರೊಫೈಲ್ ಮಾತುಕತೆಯನ್ನು ಆಯೋಜಿಸಿದ್ದ ಪಾಕಿಸ್ತಾನ, ಉಭಯ ದೇಶಗಳ ನಡುವೆ ಸೇತುವೆಯಾಗಲು ಪ್ರಯತ್ನಿಸಿತು. ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಅವರು ನಿರಂತರವಾಗಿ ಸಂಧಾನ ನಡೆಸಿದರು. ಮಾತುಕತೆ ಮುರಿದುಬಿದ್ದರೂ, ಕದನ ವಿರಾಮವನ್ನು ಮುಂದುವರಿಸುವಂತೆ ಪಾಕಿಸ್ತಾನ ಎರಡೂ ದೇಶಗಳಿಗೆ ಮನವಿ ಮಾಡಿದೆ.
ಜಾಗತಿಕ ಆರ್ಥಿಕತೆಯ ಮೇಲೆ ಆತಂಕದ ನೆರಳು
ಈ ಮಾತುಕತೆಯ ವೈಫಲ್ಯವು ಕೇವಲ ರಾಜತಾಂತ್ರಿಕ ಹಿನ್ನಡೆಯಲ್ಲ, ಬದಲಿಗೆ ಜಾಗತಿಕ ಪೂರೈಕೆ ಸರಪಳಿಯ ಮೇಲೆ ಭೀಕರ ಪರಿಣಾಮ ಬೀರಲಿದೆ. ಹೋರ್ಮುಜ್ ಜಲಸಂಧಿಯನ್ನು ಮುಕ್ತವಾಗಿರಿಸುವ ಬಗ್ಗೆ ಇರಾನ್ ಯಾವುದೇ ಭರವಸೆ ನೀಡಿಲ್ಲ. ಇದರಿಂದಾಗಿ ಜಾಗತಿಕ ತೈಲ ಮತ್ತು ಅನಿಲ ದರಗಳಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ.
ಮುಂದೇನು..? ಯುದ್ಧ ಮತ್ತೆ ಆರಂಭವಾಗುತ್ತದೆಯೇ?
ಫೆಬ್ರವರಿ 28 ರಂದು ಆರಂಭವಾಗಿದ್ದ ಭೀಕರ ಯುದ್ಧವು ಕಳೆದ ಮಂಗಳವಾರ ತಾತ್ಕಾಲಿಕ ಕದನ ವಿರಾಮಕ್ಕೆ ಸಾಕ್ಷಿಯಾಗಿತ್ತು. ಆದರೆ ಈಗಿನ ಬೆಳವಣಿಗೆಯನ್ನು ನೋಡಿದರೆ, ಶಾಂತಿ ಮರೀಚಿಕೆಯಾದಂತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗಾಗಲೇ ಯುದ್ಧ ಗೆದ್ದಿದ್ದೇವೆ ಎಂಬ ಅಹಂನಲ್ಲಿದ್ದು, ಮಾತುಕತೆಯ ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂದು ವರದಿಯಾಗಿದೆ.
ಒಂದು ವೇಳೆ ಕದನ ವಿರಾಮ ಉಲ್ಲಂಘನೆಯಾದರೆ, ಪಶ್ಚಿಮ ಏಷ್ಯಾದಲ್ಲಿ ಮತ್ತೊಂದು ಸುತ್ತಿನ ರಕ್ತಪಾತ ಆರಂಭವಾಗುವುದು ಖಚಿತ. ಜಗತ್ತು ಈಗ ಇರಾನ್ ಮತ್ತು ಅಮೆರಿಕದ ಮುಂದಿನ ನಡೆಯನ್ನು ಉಸಿರು ಬಿಗಿಹಿಡಿದು ಗಮನಿಸುತ್ತಿದೆ,(ಏಜೆನ್ಸೀಸ್).