ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

H-1B ವೀಸಾಗೆ 1 ಲಕ್ಷ ಡಾಲರ್ ಶುಲ್ಕ; ಟ್ರಂಪ್ ಆಡಳಿತದ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಅಮೆರಿಕಾದ 20 ರಾಜ್ಯಗಳು | H-1B Visa

ನ್ಯೂಯಾರ್ಕ್​: H-1B ವೀಸಾಗೆ 1 ಲಕ್ಷ ಡಾಲರ್ ಶುಲ್ಕ ವಿಧಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಕ್ಯಾಲಿಫೋರ್ನಿಯಾ ಮತ್ತು ಇತರ 19 ಯುಎಸ್ ರಾಜ್ಯಗಳು ಶುಕ್ರವಾರ ಕೋರ್ಟ್​ ಮೆಟ್ಟಿಲೇರಿದ್ದು, 100,000 ಶುಲ್ಕ ವಿಧಿಸುವ ಆದೇಶವನ್ನು ತಡೆಯುವಂತೆ ಮೊಕದ್ದಮೆ ಹೂಡಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಶುಕ್ರವಾರ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದ್ದು, 20 ರಾಜ್ಯಗಳ ಪರವಾಗಿ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ರಾಬ್ ಬೊಂಟಾ ಅವರು ವಾದಿಸುತ್ತಿದ್ದಾರೆ. ಇದನ್ನು ಕಾನೂನುಬಾಹಿರ ನೀತಿ ಎಂದು ಕರೆದಿದ್ದು, ಕೌಶಲ್ಯಪೂರ್ಣ ವಿದೇಶಿ ಕಾರ್ಮಿಕರನ್ನು ಅವಲಂಬಿಸಿರುವ ವಲಯಗಳಿಗೆ ಇದು ತೊಂದರೆ ಮಾಡಬಹುದು ಎಂದು ಎಚ್ಚರಿಸಿದ್ದಾರೆ.
ಫೆಡರಲ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ಗೃಹ ಭದ್ರತಾ ಇಲಾಖೆ (DHS) ಕಾಂಗ್ರೆಸ್ ಅಧಿಕಾರದ ಮಿತಿಯ ಹೊರಗೆ ಶುಲ್ಕವನ್ನು ವಿಧಿಸಿದೆ. ಅಗತ್ಯವಿರುವ ಸೂಚನೆ ಮತ್ತು ಕಾಮೆಂಟ್ ಕಾರ್ಯವಿಧಾನಗಳನ್ನು ತಪ್ಪಿಸಿದೆ ಎಂದು ವಾದಿಸಲಾಗಿದೆ. H-1B ವೀಸಾಗಳ ಸಾಮಾನ್ಯ ವೆಚ್ಚಕ್ಕಿಂತ 10 ಪಟ್ಟು ಹೆಚ್ಚಿನ ಶುಲ್ಕವು H-1B ಉದ್ಯೋಗಿಗಳನ್ನು ಅವಲಂಬಿಸಿರುವ ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಆಸ್ಪತ್ರೆಗಳ ಮೇಲೆ ಗಮನಾರ್ಹ ಒತ್ತಡವನ್ನುಂಟು ಮಾಡುತ್ತದೆ ಎಂದು ಉಲ್ಲೇಖಿಸಲಾಗಿದೆ.
ಮೊಕದ್ದಮೆ ದಾಖಲಿಸಿದ ರಾಜ್ಯಗಳಾವವು ಅಂದ್ರೆ, ಕ್ಯಾಲಿಫೋರ್ನಿಯಾ, ಅರಿಜೋನಾ, ಕೊಲೊರಾಡೋ, ಕನೆಕ್ಟಿಕಟ್, ಡೆಲವೇರ್, ಹವಾಯಿ, ಇಲಿನಾಯ್ಸ್, ಮೇರಿಲ್ಯಾಂಡ್, ಮ್ಯಾಸಚೂಸೆಟ್ಸ್, ಮಿಚಿಗನ್, ಮಿನ್ನೇಸೋಟ, ನೆವಾಡಾ, ನಾರ್ತ್ ಕೆರೊಲಿನಾ, ನ್ಯೂಜೆರ್ಸಿ, ನ್ಯೂಯಾರ್ಕ್, ಒರೆಗಾನ್, ರೋಡ್ ಐಲೆಂಡ್, ವರ್ಮೊಂಟ್, ವಾಷಿಂಗ್ಟನ್ ಮತ್ತು ವಿಸ್ಕಾನ್ಸಿನ್ ರಾಜ್ಯಗಳು ಸೇರಿವೆ.
ಹೊಸ H-1B ಅರ್ಜಿಗಳಿಗೆ USD 100,000 ಶುಲ್ಕವನ್ನು ಪರಿಚಯಿಸುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸೆ. 19ರಂದು ಸಹಿ ಹಾಕಿದ್ದರು. 2024ರಲ್ಲಿ ಎಲ್ಲಾ H-1B ವೀಸಾ ಫಲಾನುಭವಿಗಳಲ್ಲಿ ಭಾರತೀಯ ಪ್ರಜೆಗಳು ಶೇ. 71 ರಷ್ಟಿದ್ದರು, ಚೀನಾ ಶೇ. 11.7 ರೊಂದಿಗೆ ಎರಡನೇ ಸ್ಥಾನದಲ್ಲಿದೆ (ಏಜೆನ್ಸೀಸ್).