ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ
- ಕೊಲಂಬಿಯಾದ ಪಶ್ಚಿಮ ಭಾಗದಲ್ಲಿ ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪ
- ಭಾರಿ ಭೂಕಂಪನಕ್ಕೆ ಹಲವು ಕಟ್ಟಡಗಳು ನೆಲಸಮ
- ಈಕ್ವೆಡಾರ್, ವೆನಿಜುವೆಲಾಗೂ ತಟ್ಟಿದ ಕೊಲಂಬಿಯಾದ ಭೂಕಂಪನ
ದಕ್ಷಿಣ ಅಮೆರಿಕ: ಕೊಲಂಬಿಯಾದ ಪಶ್ಚಿಮ ಭಾಗದಲ್ಲಿ ಸೋಮವಾರ ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭೂಕಂಪದ ತೀವ್ರತೆಗೆ ಹಲವು ಬೃಹತ್ ಕಟ್ಟಡಗಳು ನೆಲಕ್ಕೆ ಉರುಳಿದ್ದು, ಅವಶೇಷಗಳಡಿ ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಬೊಗೋಟಾ ಪ್ರದೇಶದಿಂದ ಭೂಮಿ ಕಂಪಿಸಿದ್ದು, ಸುಮಾರು 400 ಕಿ.ಮೀ. ಪಶ್ಚಿಮದಲ್ಲಿರುವ ಸ್ಯಾನ್ ಜೋಸ್ ಡೆಲ್ ಪಾಲ್ಮಾರ್ವರೆಗೆ ವ್ಯಾಪಿಸಿದೆ. ಭೂಮಿಯ ಸುಮಾರು 107 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದಾಗಿ ವರದಿಯಾಗಿದೆ.
ಸುಮಾರು 4,800 ಜನಸಂಖ್ಯೆ ಹೊಂದಿರುವ ಈ ಪ್ರದೇಶದಲ್ಲಿ ಭೂಕಂಪದ ತೀವ್ರತೆ ಜೋರಾಗಿದ್ದು, ಸಮೀಪದ ಪೆರೆರಾ, ಕಾಲಿ ಮತ್ತು ಕ್ವಿಬ್ಡೊ ನಗರಗಳಲ್ಲೂ ಕಟ್ಟಡಗಳು ಕುಸಿದಿರುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿವೆ.
ಪೆರೆರಾದಲ್ಲಿ 18 ಮಂದಿ ಮೃತ
ಭೂಕಂಪನಕ್ಕೆ ಮೃತಪಟ್ಟವರ ಪೈಕಿ 18 ಮಂದಿ ಪೆರೆರಾ ಮೂಲದವರು ಎನ್ನಲಾಗಿದೆ. ಭೂಮಿ ಕಂಪಿಸಿದ ಬೆನ್ನಲ್ಲೇ ಹಲವು ಪ್ರದೇಶಗಳಲ್ಲಿ ಜನರು ಆತಂಕದಿಂದ ಮನೆಗಳಿಂದ ಹೊರಬಂದು ಸುರಕ್ಷಿತ ಸ್ಥಳಗಳತ್ತ ಓಡಿದ್ದಾರೆ. ಪ್ರಸ್ತುತ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ನೆರೆಯ ಈಕ್ವೆಡಾರ್, ವೆನಿಜುವೆಲಾದಲ್ಲಿಯೂ ಕಂಪನದ ಬಿಸಿ ತಟ್ಟಿದೆ