ಆಂಡ್ರ್ಯೂ ಮೆಕಾರ್ಥಿ ಸೆರೆ ಹಿಡಿದ ಚಿತ್ರ
ವಾಷಿಂಗ್ಟನ್: ಖಗೋಳ ವಿಜ್ಞಾನ ಮತ್ತು ಛಾಯಾಗ್ರಹಣ ಇತಿಹಾಸದಲ್ಲೇ ಖ್ಯಾತ ಖಗೋಳ ಛಾಯಾಗ್ರಾಹಕ(Astrophotographer) ಆಂಡ್ರ್ಯೂ ಮೆಕಾರ್ಥಿ, ತಮ್ಮ ವೃತ್ತಿ ಜೀವನದ ಅತ್ಯಂತ ಮತ್ತು ಅದ್ಭುತ ಮತ್ತು ಒಮ್ಮೆ ಮಾತ್ರ ಸಿಗಬಹುದಾದ ಕ್ಷಣವೊಂದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಧಗಧಗಿಸುವ ಸೂರ್ಯನ ಧ್ರುವ ಮಂಡಲದ ಮಧ್ಯಭಾಗದಲ್ಲೇ ವಾಣಿಜ್ಯ ವಿಮಾನವೊಂದು ಹಾದುಹೋಗುವ ಅತ್ಯಂತ ನಯನಮನೋಹರ ದೃಶ್ಯವನ್ನು ಅವರು ತಮ್ಮ ಲೆನ್ಸ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ಚಿತ್ರವನ್ನು ಸೆರೆ ಹಿಡಿಯಲು ಮೆಕಾರ್ಥಿ, ಬರೋಬ್ಬರಿ ಆರು ದಿನಗಳ ಕಾಲ ಶ್ರಮಪಟ್ಟು, 17 ಲಕ್ಷ ಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ. ಅದರಲ್ಲಿ ಈ ಒಂದು ಚಿತ್ರ ಅಧ್ಭುತವಾಗಿ ಮೂಡಿ ಬಂದಿದೆ. ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
6 ದಿನಗಳ ಕಠಿಣ ತಪಸ್ಸು, 17 ಲಕ್ಷ ಶೂಟ್‌ಗಳು!
ಈ ಅಪರೂಪದ ಚಿತ್ರವು ಕೇವಲ ರ್ಯಾಂಡಮ್ ಆಗಿ ಸಿಕ್ಕಿದ್ದಲ್ಲ. ಇದರ ಹಿಂದೆ ಆಂಡ್ರ್ಯೂ ಅವರ 6 ದಿನಗಳ ನಿರಂತರ ಶ್ರಮ, ತಾಳ್ಮೆ, ಯೋಜನೆ ಹಾಗೂ ಲೆಕ್ಕಚಾರವಿದೆ. ಸೂರ್ಯನ ಮೇಲೆ ವಾಣಿಜ್ಯ ವಿಮಾನವೊಂದು ಹಾದುಹೋಗುವ ಈ ಒಂದು ಅಪರೂಪದ ಫ್ರೇಮ್ ಪಡೆಯಲು ನಾನು ಆರು ದಿನಗಳಲ್ಲಿ 1.7 ಮಿಲಿಯನ್ ಫೋಟೋಗಳನ್ನು ತೆಗೆದಿದ್ದಾರೆ.
ಚಿತ್ರದ ಸೌಂದರ್ಯ ಹೆಚ್ಚಿಸಿದ 'ಸೌರ ಜ್ವಾಲೆಗಳು'
ಚಿತ್ರ ಕೇವಲ ಸೂರ್ಯ ಮತ್ತು ವಿಮಾನದ ಸಮ್ಮಿಲನವಾಗಿಲ್ಲ. ಅದನ್ನೂ ಮೀರಿಸಿದ ಪ್ರಕೃತಿಯ ಅದ್ಭುತವೊಂದನ್ನು ಸೆರೆ ಹಿಡಿದಿದೆ. ವಿಮಾನವು ಸೂರ್ಯನ ಪ್ರಖರ ಬಿಂಬವನ್ನು ದಾಟುವ ಆ ಕಣ್ಣು ಮಿಟುಕಿಸುವಷ್ಟರ ಅವಧಿಯಲ್ಲಿ, ಸೂರ್ಯನ ಮೇಲ್ಮೈಯಿಂದ ಎರಡು ಬೃಹತ್ ಸೌರ ಜ್ವಾಲೆಗಳು ಹೊರಹೊಮ್ಮುತ್ತವೆ.
ತಮ್ಮ ಈ ಚಿತ್ರವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಆಂಡ್ರ್ಯೂ ಮೆಕಾರ್ಥಿ, ಆ ಕ್ಷಣದಲ್ಲಿ ವಿಮಾನ ಹಾದುಹೋಗುವಾಗಲೇ ಎರಡು ಸೌರ ಜ್ವಾಲೆಗಳು ಗೋಚರಿಸುತ್ತಿದ್ದುದ್ದು ನನ್ನ ಅದೃಷ್ಟವನ್ನು ದುಪ್ಪಟ್ಟು ಮಾಡಿತು. ಇದು ಕೇವಲ ನನ್ನ ವೃತ್ತಿಜೀವನದ ಅತ್ಯುತ್ತಮ ವಿಮಾನ ಟ್ರಾನ್ಸಿಟ್ ಚಿತ್ರ ಮಾತ್ರವಲ್ಲ, ನನ್ನ ಇಡೀ ಕೆರಿಯರ್‌ನ ಅತ್ಯಂತ ಅದೃಷ್ಟದ ಕ್ಷಣ ಎಂದು ಬರೆದುಕೊಂಡಿದ್ದಾರೆ.
ಚಿತ್ರ ಸೆರೆ ಹಿಡಿದಿದ್ದೇಗೆ?
ಈ ಅದ್ಭುತ ಚಿತ್ರವನ್ನು ಸೆರೆಹಿಡಿಯಲು ಆಂಡ್ರ್ಯೂ ಎರಡು ವಿಭಿನ್ನ ಫೋಕಲ್ ಲೆಂತ್ ಹೊಂದಿರುವ ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿದ್ದಾರೆ. ಒಂದು ಸೆಟಪ್ ಅನ್ನು ಸೆಕೆಂಡಿಗೆ 10 ಫ್ರೇಮ್‌ಗಳ ವೇಗದಲ್ಲಿ ಚಿತ್ರೀಕರಿಸಲು ಬಳಸಿದರೆ, ಮತ್ತೊಂದು ಕ್ಲೋಸ್-ಅಪ್ ಸೆಟಪ್ ಅನ್ನು ಸೆಕೆಂಡಿಗೆ 85 ಫ್ರೇಮ್‌ಗಳ ಅತ್ಯಧಿಕ ವೇಗದಲ್ಲಿ ರೆಕಾರ್ಡ್ ಮಾಡಲು ಬಳಸಿದ್ದಾರೆ.
ಬಳಿಕ ಇದನ್ನು 24fps ವೇಗಕ್ಕೆ ನಿಧಾನಗೊಳಿಸಿ ವಿಮಾನದ ಸಿಲೂಯೆಟ್ ಮತ್ತು ಸೂರ್ಯನ ಅಶಾಂತ ಮೇಲ್ಮೈಯ ಪ್ರತಿಯೊಂದು ಸೂಕ್ಷ್ಮ ವಿವರಗಳನ್ನು ಅತ್ಯಂತ ಗರಿಗರಿಯಾದ ಎಚ್‌ಡಿ ಗುಣಮಟ್ಟದಲ್ಲಿ ಸಂಯೋಜಿಸಲಾಗಿದೆ. ಆಧುನಿಕ ಹೈ-ಸ್ಪೀಡ್ ಕ್ಯಾಮೆರಾಗಳು, ವಿಶೇಷ ಸೌರ ಫಿಲ್ಟರ್‌ಗಳು ವಾಯುಯಾನದ ಲೈವ್ ಡೇಟಾ ಮತ್ತು ನಿಖರವಾದ ಖಗೋಳ ತಂತ್ರಜ್ಞಾನದ ಸಮ್ಮಿಲನದಿಂದ ಮಾತ್ರ ಇಂತಹದೊಂದು ದೃಶ್ಯವನ್ನು ಸೆರೆಹಿಡಿಯಲು ಸಾಧ್ಯ ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದೆ (ಏಜೆನ್ಸೀಸ್).