12ರ ಪ್ರಾಯದಲ್ಲೇ ಜಗತ್ತಿನ ಗಮನ ಸೆಳೆದ ಐಟಿ ಕುವರಿ: 3 ದೇಶಗಳಲ್ಲಿ AI ಸ್ಟಾರ್ಟಪ್ ನಡೆಸುತ್ತಿರುವ 7ನೇ ತರಗತಿ ಬಾಲಕಿ! Success Story  
ವಿದೇಶ

12ರ ಪ್ರಾಯದಲ್ಲೇ ಜಗತ್ತಿನ ಗಮನ ಸೆಳೆದ ಐಟಿ ಕುವರಿ: 3 ದೇಶಗಳಲ್ಲಿ AI ಸ್ಟಾರ್ಟಪ್ ನಡೆಸುತ್ತಿರುವ 7ನೇ ತರಗತಿ ಬಾಲಕಿ! Success Story

ಪ್ರಮುಖ ಮುಖ್ಯಾಂಶಗಳು

  • ಹನ್ನೆರಡರ ಪ್ರಾಯದಲ್ಲೇ ಮೂರು ದೇಶಗಳಲ್ಲಿ ಎಐ ಸ್ಟಾರ್ಟಪ್ ಕಂಪನಿ ಮುನ್ನಡೆಸುತ್ತಿರುವ ಬಾಲಕಿ ಮನಾ ಜಂಪಾಲ
  • ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದ ಕೆನಡಾದ ಏಳನೇ ತರಗತಿ ವಿದ್ಯಾರ್ಥಿನಿ ಮನಾ ಜಂಪಾಲ ಸಾಹಸ
  • ಉದ್ಯಮಗಳ ಫೋನ್ ಕರೆಗಳನ್ನು ನಿರ್ವಹಿಸಲು ವೋಕ್ಸಾ ಎಂಬ ವಿಶಿಷ್ಟ ಎಐ ಪ್ಲಾಟ್‌ಫಾರ್ಮ್ ಸೃಷ್ಟಿಸಿದ ಬಾಲಕಿ
  • ಒಂಬತ್ತನೇ ವಯಸ್ಸಿಗೆ ಕೋಡಿಂಗ್ ಕಲಿತು ಹನ್ನೊಂದರ ಹರೆಯದಲ್ಲೇ ಸ್ವಂತ ಎಐ ಉತ್ಪನ್ನ ತಯಾರಿಸಿದ ಪ್ರತಿಭೆ
  • ಚಾಟ್‌ಜಿಪಿಟಿ ಮತ್ತು ಕ್ಲೋಡ್ ನೆರವಿನಿಂದ ಹಂತ ಹಂತವಾಗಿ ಕೋಡಿಂಗ್ ಮಾಡಿ ಸಾಫ್ಟ್‌ವೇರ್ ಸಿದ್ಧಪಡಿಸಿದ ಮನಾ
Success Story : ಸಾಮಾನ್ಯವಾಗಿ 12 ವರ್ಷದ ಮಕ್ಕಳು ಏನು ಮಾಡುತ್ತಾರೆ? ಶಾಲೆಯ ಹೋಮ್‌ವರ್ಕ್, ವಿಡಿಯೋ ಗೇಮ್ಸ್ ಅಥವಾ ಸ್ನೇಹಿತರೊಂದಿಗೆ ಆಟ ಆಡುವುದರಲ್ಲೇ ಬಿಜಿಯಾಗಿರುತ್ತಾರೆ. ಆದರೆ ಕೆನಡಾದ ಬ್ರಿಟಿಷ್ ಕೊಲಂಬಿಯಾದ (ಕೆಲೊವ್ನಾ) 7ನೇ ತರಗತಿ ವಿದ್ಯಾರ್ಥಿನಿ ಮನಾ ಜಂಪಾಲ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದಾರೆ. ಬಾಲ್ಯದ ಆಟದ ಜತೆಗೆ ಮೂರು ದೇಶಗಳಲ್ಲಿ ಹರಡಿಕೊಂಡಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸ್ಟಾರ್ಟಪ್ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ!
ಹೌದು, ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದಿರುವ ಅತ್ಯಂತ ಕಿರಿಯ ಎಐ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಮನಾ, ವ್ಯವಹಾರ ಸಂಸ್ಥೆಗಳು ಗ್ರಾಹಕರ ಯಾವುದೇ ಫೋನ್ ಕರೆಗಳನ್ನು ಮಿಸ್ ಮಾಡಿಕೊಳ್ಳದಂತೆ ತಡೆಯಲು 'ವೋಕ್ಸಾ' (Voxa) ಎಂಬ ಎಐ ಆಧಾರಿತ ರಿಸೆಪ್ಷನಿಸ್ಟ್ ಪ್ಲಾಟ್‌ಫಾರ್ಮ್ ಅನ್ನು ಸೃಷ್ಟಿಸಿದ್ದಾರೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಈ ವಿಶಿಷ್ಟ ಪ್ಲಾಟ್‌ಫಾರ್ಮ್ ಈಗಾಗಲೇ ಕೆನಡಾ, ಭಾರತ ಮತ್ತು ಕಾಂಬೋಡಿಯಾ ದೇಶಗಳ ಕಂಪನಿಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಚಿಕ್ಕ ವಯಸ್ಸಿನಲ್ಲೇ ಕೋಡಿಂಗ್ ಮಂತ್ರ

ಮನಾ ಜಂಪಾಲ ಅವರಿಗೆ ಬಾಲ್ಯದಿಂದಲೇ ತಂತ್ರಜ್ಞಾನದ ಬಗ್ಗೆ ಭಾರಿ ಆಸಕ್ತಿ ಇತ್ತು. ಕೇವಲ ಒಂಬತ್ತು ವರ್ಷದ ಪ್ರಾಯದಲ್ಲೇ ಸ್ಕ್ರಾಚ್ ಕ್ಯಾಂಪ್‌ಗಳ ಮೂಲಕ ಕೋಡಿಂಗ್ ಕಲಿಯಲು ಆರಂಭಿಸಿದ ಅವರು, ನಂತರ 'ಪೈಥಾನ್' ಭಾಷೆಯಲ್ಲೂ ಪ್ರಾವೀಣ್ಯತೆ ಪಡೆದರು. 11 ವರ್ಷಕ್ಕೇ ಸ್ವಂತ ಎಐ ಉತ್ಪನ್ನಗಳನ್ನು ತಯಾರಿಸಲು ತೊಡಗಿದ ಇವರ ಪ್ರತಿಭೆ ಶಾಲೆಯ ಗಡಿಯನ್ನೂ ಮೀರಿ ಬೆಳೆಯಿತು. ಭಾರತಕ್ಕೆ ಪ್ರವಾಸ ಬಂದಿದ್ದಾಗ ಇಲ್ಲಿನ ಕಾಲೇಜು ಮಟ್ಟದ ವಿಜ್ಞಾನ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ವಿಶೇಷ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅಷ್ಟೇ ಅಲ್ಲದೆ, ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ '1517 ಫಂಡ್'ನ ಮೆಡಿಸಿ ಪ್ರಾಜೆಕ್ಟ್‌ನಿಂದ ಧನಸಹಾಯದ ನೆರವನ್ನು ಪಡೆದುಕೊಂಡಿದ್ದಾರೆ. ಇಷ್ಟು ದೊಡ್ಡ ಕಂಪನಿ ನಡೆಸುತ್ತಿದ್ದರೂ, ಮನಾ ಅವರಿಗೆ ಫುಟ್‌ಬಾಲ್ ಆಡುವುದು, ಸ್ನೇಹಿತರೊಂದಿಗೆ ಸಮಯ ಕಳೆಯುವುದು ಮತ್ತು ತಮ್ಮಂತೆಯೇ ಇರುವ ಇತರ ಯುವ ಬಿಲ್ಡರ್‌ಗಳನ್ನು ಭೇಟಿಯಾಗುವುದೆಂದರೆ ತುಂಬಾನೇ ಇಷ್ಟ.

ತಂದೆಯ ಆಫೀಸ್‌ನಲ್ಲಿ ಹುಟ್ಟಿದ ಐಡಿಯಾ

'ವೋಕ್ಸಾ' ಸ್ಟಾರ್ಟಪ್ ಆರಂಭಿಸುವ ಆಲೋಚನೆ ಮನಾ ಅವರಿಗೆ ಬಂದಿದ್ದು ತಮ್ಮ ತಂದೆಯ ಕಚೇರಿಯಿಂದ. ಅಲ್ಲಿನ ನೌಕರರು ಗ್ರಾಹಕರಿಗೆ ಸೇವೆ ನೀಡುವುದರಲ್ಲಿ ಬಿಜಿಯಾಗಿದ್ದಾಗ, ಅನೇಕ ಫೋನ್ ಕರೆಗಳು ಮಿಸ್ ಆಗುತ್ತಿರುವುದನ್ನು ಮನಾ ಗಮನಿಸಿದರು. ಪ್ರತಿಯೊಂದು ಮಿಸ್ಡ್ ಕಾಲ್ ಕೂಡ ವ್ಯವಹಾರದ ಒಂದು ದೊಡ್ಡ ಅವಕಾಶವನ್ನು ಕಳೆದುಕೊಂಡಂತೆ ಎಂಬುದನ್ನು ಅವರು ಅರಿತುಕೊಂಡರು. ಈ ಸಣ್ಣ ಅವಲೋಕನವೇ ಮುಂದೆ 'ವೋಕ್ಸಾ' ಜನನಕ್ಕೆ ಕಾರಣವಾಯಿತು. ರೆಸ್ಟೋರೆಂಟ್‌ಗಳು, ಫಾರ್ಮಸಿಗಳು ಮತ್ತು ಇತರ ಸೇವಾ ವಲಯದ ಉದ್ಯಮಗಳಿಗಾಗಿ ದಿನದ 24 ಗಂಟೆಯೂ ಕೆಲಸ ಮಾಡುವ ಎಐ ವಾಯ್ಸ್ ಅಸಿಸ್ಟೆಂಟ್ ಅನ್ನು ಅವರು ವಿನ್ಯಾಸಗೊಳಿಸಿದರು. ಈ ಸಿಸ್ಟಮ್ ಕೇವಲ ಗ್ರಾಹಕರ ಕರೆಗಳಿಗೆ ಉತ್ತರಿಸುವುದು ಮಾತ್ರವಲ್ಲದೆ, ಅಪಾಯಿಂಟ್‌ಮೆಂಟ್‌ಗಳನ್ನು ಬುಕ್ ಮಾಡುತ್ತದೆ, ರೆಸ್ಟೋರೆಂಟ್ ಆರ್ಡರ್‌ಗಳನ್ನು ತೆಗೆದುಕೊಳ್ಳುತ್ತದೆ, ಫಾಲೋ-ಅಪ್‌ಗಳನ್ನು ಮಾಡುತ್ತದೆ ಮತ್ತು ಪ್ರತಿ ಸಂಭಾಷಣೆಯ ನಂತರ ಅದರ ಸಾರಾಂಶವನ್ನು ಸಿದ್ಧಪಡಿಸುತ್ತದೆ. ಪ್ರಸ್ತುತ ಈ ವ್ಯವಸ್ಥೆಯು ಕೆನಡಾದಾದ್ಯಂತ ನೂರಾರು ಕರೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಹಂತ ಹಂತದ ಕೋಡಿಂಗ್ ತಂತ್ರ

'ಬಿಸಿನೆಸ್ ಇನ್‌ಸೈಡರ್' ನಿಯತಕಾಲಿಕೆಯೊಂದಿಗೆ ಮಾತನಾಡಿದ ಮನಾ, ಈ ವಿಶಿಷ್ಟ ಉತ್ಪನ್ನವನ್ನು ತಯಾರಿಸಲು ತಮಗೆ ಚಾಟ್‌ಜಿಪಿಟಿ ಮತ್ತು ಕ್ಲೋಡ್‌ನಂತಹ ಎಐ ಕೋಡಿಂಗ್ ಅಸಿಸ್ಟೆಂಟ್‌ಗಳು ಸಹಾಯ ಮಾಡಿದವು ಎಂದು ತಿಳಿಸಿದ್ದಾರೆ. ಆದರೆ, ಇಡೀ ಪ್ರಾಡಕ್ಟ್ ಅನ್ನು ಒಟ್ಟಿಗೇ ಎಐ ಮೂಲಕ ಮಾಡಿಸುವ ಬದಲಿಗೆ, ಅವರು ಕೋಡಿಂಗ್‌ನ ಸಣ್ಣ ಸಣ್ಣ ಭಾಗಗಳನ್ನು ಜನರೇಟ್ ಮಾಡಿಕೊಂಡು ಬ್ಯಾಕೆಂಡ್ ಸಿದ್ಧಪಡಿಸಿದರು. ನಂತರ ತಾವೇ ಸ್ವತಃ ಅವುಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿ, ಅದಲ್ಲಿದ್ದ ಬಗ್‌ಗಳನ್ನು ಸರಿಪಡಿಸಿದರು. ಈ ಹಂತ ಹಂತದ ವಿಧಾನವು ತಂತ್ರಾಂಶದ (ಸಾಫ್ಟ್‌ವೇರ್) ಪ್ರತಿಯೊಂದು ಭಾಗವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ತಮಗೆ ಸಹಾಯ ಮಾಡಿತು ಎಂದು ಮನಾ ವಿವರಿಸಿದ್ದಾರೆ.

ಮುಂದಿನ ಹೆಜ್ಜೆ ವೋಕ್ಸಾ ಏಜೆಂಟ್ಸ್

ಮನಾ ಕೇವಲ ಎಐ ರಿಸೆಪ್ಷನಿಸ್ಟ್ ಸೃಷ್ಟಿಸುವುದಕ್ಕಷ್ಟೇ ತಮ್ಮ ಪ್ರಯಾಣವನ್ನು ಸೀಮಿತಗೊಳಿಸಿಲ್ಲ. ಅವರ ಮುಂದಿನ ಹೆಜ್ಜೆ 'ವೋಕ್ಸಾ ಏಜೆಂಟ್ಸ್' (Voxa Agents) ಎಂಬ ಹೊಸ ಸಾಹಸದ ಕಡೆಗಿದೆ. ಇದರ ಮೂಲಕ ಬಳಕೆದಾರರು ತಮಗೆ ಬೇಕಾದ ಕೆಲಸವನ್ನು ಕೇವಲ ಸಾಮಾನ್ಯ ಇಂಗ್ಲಿಷ್‌ನಲ್ಲಿ ವಿವರಿಸಿದರೆ ಸಾಕು, ಸ್ವಾಯತ್ತ ಎಐ ಏಜೆಂಟ್‌ಗಳು ಆ ಕೆಲಸವನ್ನು ಸ್ವಯಂಚಾಲಿತವಾಗಿ ಪೂರ್ಣಗೊಳಿಸುತ್ತವೆ. ಉದಾಹರಣೆಗೆ, ಪ್ರತಿಸ್ಪರ್ಧಿ ಉದ್ಯಮಗಳ ಮೇಲೆ ನಿಗಾ ಇಡುವುದು, ಸಭೆಗಳ ಸಂಕ್ಷಿಪ್ತ ವಿವರಗಳನ್ನು ಸಿದ್ಧಪಡಿಸುವುದು ಅಥವಾ ಆನ್‌ಲೈನ್ ಸಂಭಾಷಣೆಗಳನ್ನು ಗಮನಿಸುವುದನ್ನು ಇವು ಸುಲಭವಾಗಿಸಲಿವೆ. ಭವಿಷ್ಯದಲ್ಲಿ ಈ ಕಂಪನಿಯನ್ನು ಮತ್ತಷ್ಟು ವಿಸ್ತರಿಸಿ, ಮುಂಚೂಣಿಯಲ್ಲಿರುವ ಸ್ಟಾರ್ಟಪ್ ಆಕ್ಸಿಲರೇಟರ್ ಸೇರುವ ಗುರಿಯನ್ನು ಮನಾ ಹೊಂದಿದ್ದಾರೆ.

ಎಐ ಕ್ರಾಂತಿಗೆ ಮುನ್ನುಡಿ ಬರೆದ 12ರ ಬಾಲಕಿ

ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಬಗ್ಗೆ ಯೋಚಿಸಲು ಕೂಡ ಆರಂಭಿಸದ ಇಂತಹ ಚಿಕ್ಕ ವಯಸ್ಸಿನಲ್ಲಿ, ಮುಂದಿನ ಪೀಳಿಗೆಯು ಎಷ್ಟು ವೇಗವಾಗಿ ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಕ್ರಾಂತಿಯನ್ನು ಅಪ್ಪಿಕೊಳ್ಳಲಿದೆ ಎಂಬುದನ್ನು ಮನಾ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ವಿವಿಧ ಖಂಡಗಳಾದ್ಯಂತ ಇರುವ ವ್ಯಾಪಾರ ಸಂಸ್ಥೆಗಳಿಗೆ ಉಪಯುಕ್ತವಾಗುವಂತಹ ಉತ್ಪನ್ನಗಳನ್ನು ಸೃಷ್ಟಿಸುವ ಮೂಲಕ, ಅವರು ಇಂದಿನ ಯುವ ಪೀಳಿಗೆಗೆ ಮತ್ತು ತಂತ್ರಜ್ಞಾನ ಲೋಕಕ್ಕೆ ಬಹುದೊಡ್ಡ ಪ್ರೇರಣೆಯಾಗಿದ್ದಾರೆ, (ಏಜೆನ್ಸೀಸ್​).