11 ಲಕ್ಷ ಕೋಟಿ ನಾಶ: ಗಲ್ಫ್ ರಾಷ್ಟ್ರಗಳಲ್ಲಿ ಅಮೆರಿಕದ ಮಿಸೈಲ್ ಶೀಲ್ಡ್ ಛಿದ್ರ! ಇರಾನ್ ಕ್ಷಿಪಣಿಗಳ ಮುಂದೆ ಮಂಡಿಯೂರಿದ ಯುಎಸ್ ಟೆಕ್ನಾಲಜಿ!
ರಿಯಾದ್: ವಿಶ್ವದ ಅತ್ಯಂತ ಸುಧಾರಿತ ಕ್ಷಿಪಣಿ ನಿರೋಧಕ ವ್ಯವಸ್ಥೆ ಎಂದು ಬಣ್ಣಿಸಲಾಗಿದ್ದ ಅಮೆರಿಕದ 'ಥಾಡ್' (THAAD Failure) ಮತ್ತು 'ಪೇಟ್ರಿಯಾಟ್' ವ್ಯವಸ್ಥೆಗಳು ಇರಾನ್‌ನ ಪ್ರತೀಕಾರದ ದಾಳಿಯ ಮುಂದೆ ಮಂಡಿಯೂರಿವೆಯೇ ಎಂಬ ಅನುಮಾನ ಮೂಡಿದೆ. ಅಲ್ಲದೆ, ಬರೋಬ್ಬರಿ 142 ಶತಕೋಟಿ ಡಾಲರ್ (ಸುಮಾರು 11 ಲಕ್ಷ ಕೋಟಿ ರೂಪಾಯಿ) ವೆಚ್ಚದ ರಕ್ಷಣಾ ಕವಚವು ಈಗ ಅರಬ್ ರಾಷ್ಟ್ರಗಳ ಪಾಲಿಗೆ ಬೆಲೆಬಾಳುವ ನಿರುಪಯುಕ್ತ ವಸ್ತು ಎಂಬ ಟೀಕೆಗೆ ಗುರಿಯಾಗಿದೆ.
ಈ ಅನುಮಾನವು ಇತ್ತೀಚೆಗೆ ನಡೆದ ಇರಾನ್ ಮತ್ತು ಅಮೆರಿಕ-ಇಸ್ರೇಲ್ ಸಂಘರ್ಷದಲ್ಲಿ ಅಮೆರಿಕ ನಿರ್ಮಿತ ರಕ್ಷಣಾ ವ್ಯವಸ್ಥೆಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುವಲ್ಲಿ ವಿಫಲವಾಗಿವೆ. ಇದು ಕೇವಲ ತಾಂತ್ರಿಕ ಹಿನ್ನಡೆಯಲ್ಲ, ಬದಲಾಗಿ ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಅಮೆರಿಕದ ದರ್ಪಕ್ಕೆ ಬಿದ್ದ ದೊಡ್ಡ ಹೊಡೆತ ಎಂದೇ ವಿಶ್ಲೇಷಿಸಲಾಗುತ್ತಿದೆ.
ನಡೆದಿದ್ದೇನು..? ಅಂಕಿ-ಅಂಶಗಳ ಆಘಾತಕಾರಿ ಸತ್ಯ
ಫೆಬ್ರವರಿ 2026ರಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ, ಇರಾನ್ ಮೊಸಾಯಿಕ್ ಡಿಫೆನ್ಸ್ ತಂತ್ರವನ್ನು ಬಳಸಿ ಅರಬ್ ರಾಷ್ಟ್ರಗಳ ಮೇಲಿನ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತು.
ದಾಳಿಯ ತೀವ್ರತೆ: ಇರಾನ್ ಸುಮಾರು 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 1,000ಕ್ಕೂ ಹೆಚ್ಚು ಡ್ರೋನ್‌ಗಳನ್ನು ಗಲ್ಫ್ ರಾಷ್ಟ್ರಗಳತ್ತ ಹಾರಿಸಿತ್ತು.
ಗುರಿಗಳು: ಸೌದಿ ಅರೇಬಿಯಾ, ಯುಎಇ, ಕತಾರ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕದ ರಕ್ಷಣಾ ನೆಲೆಗಳು ಧ್ವಂಸವಾಗಿವೆ
ವೈಫಲ್ಯದ ಗುರುತು: ಸ್ಯಾಟಲೈಟ್ ಚಿತ್ರಗಳ ಪ್ರಕಾರ, ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆ ಮತ್ತು ಜೋರ್ಡಾನ್‌ನ ಮುವಾಫಕ್ ಸಾಲ್ಟಿ ವಾಯುನೆಲೆಗಳಲ್ಲಿನ THAAD ರೇಡಾರ್‌ಗಳು ಇರಾನ್ ಕ್ಷಿಪಣಿ ದಾಳಿಗೆ ತುತ್ತಾಗಿ ಸುಟ್ಟು ಕರಕಲಾಗಿವೆ ಎಂದು ಹೇಳಲಾಗುತ್ತಿದೆ.
142 ಶತಕೋಟಿ ಡಾಲರ್ ಬೆಲೆಯ 'ತೂತು ಬಿದ್ದ ಕೊಡೆ'
ಮೇ 2025ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅರೇಬಿಯಾದೊಂದಿಗೆ ನಡೆಸಿದ ಬೃಹತ್ ರಕ್ಷಣಾ ಒಪ್ಪಂದದ ಅಡಿಯಲ್ಲಿ ಈ ಥಾಡ್ ಮತ್ತು ಪೇಟ್ರಿಯಾಟ್ ವ್ಯವಸ್ಥೆಗಳನ್ನು ನೀಡಲಾಗಿತ್ತು. ಇರಾನ್‌ನಿಂದ ಎದುರಾಗುವ ಯಾವುದೇ ಬೆದರಿಕೆಯನ್ನು ಇವು ಸಮರ್ಥವಾಗಿ ತಡೆಯಬಲ್ಲವು ಎಂದು ಅಮೆರಿಕ ಭರವಸೆ ನೀಡಿತ್ತು. ಆದರೆ, ವಾಸ್ತವದಲ್ಲಿ ಇರಾನ್‌ನ ಅಗ್ಗದ ಬೆಲೆಯ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಅಮೆರಿಕದ ಈ ದುಬಾರಿ ಗುರಾಣಿಯನ್ನು ಬೇಧಿಸಿವೆ.
ವೈಫಲ್ಯಕ್ಕೆ ಪ್ರಮುಖ ಕಾರಣಗಳು
ವೆಚ್ಚದ ಅಸಮಾನತೆ: ಅಮೆರಿಕದ ಒಂದು ಇಂಟರ್ಸೆಪ್ಟರ್ ಕ್ಷಿಪಣಿಗೆ ಕೋಟ್ಯಂತರ ರೂಪಾಯಿ ವೆಚ್ಚವಾದರೆ, ಇರಾನ್ ಬಳಸುವ ಡ್ರೋನ್‌ಗಳ ಬೆಲೆ ಕೇವಲ 20,000 ಡಾಲರ್ (ಸುಮಾರು 16 ಲಕ್ಷ ರೂ.) ಇದೆ. ಇಷ್ಟು ಕಡಿಮೆ ಬೆಲೆಯ ಡ್ರೋನ್‌ಗಳನ್ನು ಹೊಡೆದುರುಳಿಸಲು ಅತಿ ದುಬಾರಿ ಕ್ಷಿಪಣಿಗಳನ್ನು ಬಳಸುವುದು ಆರ್ಥಿಕವಾಗಿ ಅಸಾಧ್ಯವಾಯಿತು.
ಸ್ಯಾಚುರೇಶನ್ ಅಟ್ಯಾಕ್: ಒಂದೇ ಬಾರಿಗೆ ನೂರಾರು ಡ್ರೋನ್‌ಗಳನ್ನು ಬಿಡುವ ಮೂಲಕ ಇರಾನ್ ಅಮೆರಿಕದ ರೇಡಾರ್ ವ್ಯವಸ್ಥೆಯನ್ನು ಗೊಂದಲಕ್ಕೀಡುಮಾಡಿತು.
ತಾಂತ್ರಿಕ ಮಿತಿ: ಥಾಡ್ ವ್ಯವಸ್ಥೆಯನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆಯೇ ಹೊರತು, ಕೆಳಮಟ್ಟದಲ್ಲಿ ಹಾರುವ ಡ್ರೋನ್‌ಗಳನ್ನು ತಡೆಯಲು ಇದು ಅಷ್ಟೊಂದು ಪರಿಣಾಮಕಾರಿಯಲ್ಲ ಎಂಬುದು ಸಾಬೀತಾಗಿದೆ.
ಅರಬ್ ರಾಷ್ಟ್ರಗಳಲ್ಲಿ ಭೀತಿ ಮತ್ತು ಅಸಮಾಧಾನ
ತಮ್ಮ ರಕ್ಷಣೆಗಾಗಿ ಅಮೆರಿಕದ ಮೇಲೆ ಅವಲಂಬಿತವಾಗಿದ್ದ ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್ ಈಗ ಪರ್ಯಾಯ ದಾರಿಗಳನ್ನು ಹುಡುಕುತ್ತಿವೆ. ಅಮೆರಿಕದ ವ್ಯವಸ್ಥೆಗಳು ವಿಫಲವಾದ ಹಿನ್ನೆಲೆಯಲ್ಲಿ ಈ ರಾಷ್ಟ್ರಗಳು ಈಗ ರಷ್ಯಾ ಅಥವಾ ಚೀನಾದ ರಕ್ಷಣಾ ವ್ಯವಸ್ಥೆಗಳತ್ತ ಕಣ್ಣು ಹಾಯಿಸುತ್ತಿವೆಯೇ ಎಂಬ ಚರ್ಚೆ ಶುರುವಾಗಿದೆ.
ಬಿಲಿಯನ್ ಡಾಲರ್ ಸುರಿದರೂ ನಮ್ಮ ಆಕಾಶಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂಬ ಆಕ್ರೋಶ ಗಲ್ಫ್ ವಲಯದಲ್ಲಿ ಕೇಳಿಬರುತ್ತಿದೆ. ವಿಶೇಷವೆಂದರೆ, ಸಂಘರ್ಷದ ವೇಳೆ ಸೌದಿ ಅರೇಬಿಯಾ ತನ್ನ ವಾಯುಪ್ರದೇಶವನ್ನು ಬಳಸಲು ಅಮೆರಿಕಕ್ಕೆ ಅನುಮತಿ ನೀಡಲು ನಿರಾಕರಿಸಿತ್ತು. ಇದು ಅಮೆರಿಕ ಮತ್ತು ಅರಬ್ ರಾಷ್ಟ್ರಗಳ ನಡುವಿನ ದಶಕಗಳ ಕಾಲದ ಭದ್ರತಾ ಮೈತ್ರಿಯಲ್ಲಿ ಬಿರುಕು ಮೂಡಿರುವುದನ್ನು ಸೂಚಿಸುತ್ತದೆ.
ತಜ್ಞರ ಅಭಿಪ್ರಾಯ
ರಕ್ಷಣಾ ವಿಶ್ಲೇಷಕರ ಪ್ರಕಾರ, ಲಾಕ್ಹೀಡ್ ಮಾರ್ಟಿನ್‌ನಂತಹ ಕಂಪನಿಗಳು ಲಾಭದ ಉದ್ದೇಶದಿಂದ ಹಳೆಯ ತಂತ್ರಜ್ಞಾನವನ್ನೇ ಹೊಸ ರೂಪದಲ್ಲಿ ಮಾರಾಟ ಮಾಡುತ್ತಿವೆಯೇ ಎಂಬ ಪ್ರಶ್ನೆ ಎದ್ದಿದೆ. ಇರಾನ್ ತಿಂಗಳಿಗೆ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದರೆ, ಅಮೆರಿಕದ ಮಿಸೈಲ್ ಪೂರೈಕೆ ತೀರಾ ನಿಧಾನವಾಗಿದೆ.
ಒಮನ್ ಕೊಲ್ಲಿಯಿಂದ ಅರೇಬಿಯನ್ ಸಮುದ್ರದವರೆಗೆ ಈಗ ಅಮೆರಿಕದ ರಕ್ಷಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಪಣಕ್ಕಿಟ್ಟಿದೆ. ಥಾಡ್ ವ್ಯವಸ್ಥೆಯು ಕೇವಲ ಶಬ್ದ ಮಾಡುವ ಮೂಲಕ ನೆಲಕ್ಕಚ್ಚಿದೆ ಎಂದು ವಿಮರ್ಶಕರು ಲೇವಡಿ ಮಾಡುತ್ತಿದ್ದಾರೆ. ಇದು ಜಾಗತಿಕ ರಕ್ಷಣಾ ರಾಜತಾಂತ್ರಿಕತೆಯಲ್ಲಿ ಅಮೆರಿಕಕ್ಕೆ ಅತಿದೊಡ್ಡ ಹಿನ್ನಡೆಯಾಗಿದೆ,(ಏಜೆನ್ಸೀಸ್).