Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

1,000 ಕ್ಷಿಪಣಿಗಳು ಲಾಕ್ & ಲೋಡ್!...ನನ್ನನ್ನ ಹತ್ಯೆ ಮಾಡಿದ್ರೆ ಇರಾನ್ ಸರ್ವನಾಶ ಎಂದ ಟ್ರಂಪ್ | Donald Trump

Donald Trump: ತಮ್ಮನ್ನು ಹತ್ಯೆ ಮಾಡಲು ಯತ್ನಿಸಿದರೆ, ಇರಾನ್ ವಿರುದ್ಧ ಭಾರಿ ಪ್ರಮಾಣದ ಮಿಲಿಟರಿ ದಾಳಿ ನಡೆಸಲು ಅಮೆರಿಕ ಈಗಾಗಲೇ ಪೂರ್ವ-ಅನುಮೋದನೆ ನೀಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿಕೆ ನೀಡಿದ್ದು, ಇರಾನ್ ಕಡೆಗೆ 1,000 ಕ್ಷಿಪಣಿಗಳನ್ನು ಲೋಡ್ ಮಾಡಿ ಗುರಿ ಇಡಲಾಗಿದೆ ಎಂದು ತಿಳಿಸಿದ್ದಾರೆ.
ತಮ್ಮ ಟ್ರೂತ್ ಸೋಶಿಯಲ್​ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಟ್ರಂಪ್, ತಮ್ಮ ವಿರುದ್ಧ ದೀರ್ಘಕಾಲದಿಂದ ಇರುವ ಬೆದರಿಕೆಯ ಮೇಲೆ ಇರಾನ್ ಕಾರ್ಯನಿರ್ವಹಿಸಿದರೆ, ಅದರ ವಿರುದ್ಧ ದಾಳಿ ನಡೆಸಲು ತಾವಾಗಲೇ ಆದೇಶ ಹೊರಡಿಸಿದ್ದು, ಆರಂಭಿಕ ದಾಳಿಯ ನಂತರ ಇನ್ನೂ ಸಾವಿರಾರು ಕ್ಷಿಪಣಿಗಳು ತಕ್ಷಣವೇ ದಾಳಿ ನಡೆಸಲಿವೆ. ಈಗಾಗಲೇ ಅಗತ್ಯ ಸೂಚನೆಗಳನ್ನು ಪಡೆದುಕೊಂಡಿದ್ದು, ಇರಾನ್‌ನ ಎಲ್ಲಾ ಪ್ರದೇಶಗಳನ್ನು ಸಂಪೂರ್ಣವಾಗಿ ನಾಶಪಡಿಸಲು ಯುಎಸ್ ಮಿಲಿಟರಿ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹೇಳಿಕೆಗಳು ಅವರು ನ್ಯೂಯಾರ್ಕ್ ಪೋಸ್ಟ್​​ಗೆ ನೀಡಿದ ಸಂದರ್ಶನದ ಮಾತುಗಳನ್ನು ಪ್ರತಿಧ್ವನಿಸಿದ್ದು, ತಮ್ಮನ್ನು ಹತ್ಯೆ ಮಾಡಿದರೆ ಹಿಂದೆಂದೂ ಕಾಣದ ರೀತಿಯಲ್ಲಿ ಮಿಲಿಟರಿ ಪ್ರತ್ಯುತ್ತರ ನೀಡಲು ನಿರಂತರ ಸೂಚನೆಗಳನ್ನು ನೀಡಿರುವುದಾಗಿ ಅವರು ಸಂದರ್ಶನದಲ್ಲಿ ಹೇಳಿದ್ದರು. ತಮ್ಮನ್ನು ಗುರಿಯಾಗಿಸಿಕೊಂಡು ಇರಾನ್ ನಡೆಸಲು ಉದ್ದೇಶಿಸಿದೆ ಎನ್ನಲಾದ ಹೊಸ ಸಂಚಿನ ಬಗ್ಗೆ ಇಸ್ರೇಲ್ ಹೊಸ ಮಾಹಿತಿಯನ್ನು ಬಹಿರಂಗಪಡಿಸಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಟ್ರಂಪ್, ಯಾವುದೇ ಹೊಸ ಇಂಟೆಲಿಜೆನ್ಸ್ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಾರದ ಆರಂಭದಲ್ಲಿಯೂ ಟ್ರಂಪ್ ತಮ್ಮನ್ನು ಇರಾನ್‌ನ ನಂಬರ್ ಒನ್ ಟಾರ್ಗೆಟ್ ಎಂದು ಕರೆದುಕೊಂಡಿದ್ದರು. ಹಾಗೆಯೇ ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಬಿಡಬಾರದು ಎಂದು ಪುನರುಚ್ಚರಿಸಿದ್ದರು. ಭವಿಷ್ಯದಲ್ಲಿ ಇರಾನ್ ಜೊತೆಗಿನ ಯಾವುದೇ ಸಂಘರ್ಷವು ದೀರ್ಘಕಾಲದ ಯುದ್ಧವಾಗಿ ಬದಲಾಗುವುದಿಲ್ಲ ಎಂದು ಅವರು ನಿರೀಕ್ಷಿಸುವುದಾಗಿ ಹೇಳಿದ್ದರು.
2020 ರಲ್ಲಿ ಟ್ರಂಪ್ ಆದೇಶದಂತೆ ಬಾಗ್ದಾದ್ ಬಳಿ ನಡೆದ ಯುಎಸ್ ಡ್ರೋನ್ ದಾಳಿಯಲ್ಲಿ ಇರಾನ್‌ನ ಉನ್ನತ ಮಿಲಿಟರಿ ಕಮಾಂಡರ್ ಖಾಸಿಮ್ ಸುಲೇಮಾನಿ ಕೊಲ್ಲಲ್ಪಟ್ಟಿದ್ದಕ್ಕೆ ಇರಾನ್ ಪದೇ ಪದೇ ಸೇಡು ತೀರಿಸಿಕೊಳ್ಳುವುದಾಗಿ ಶಪಥ ಮಾಡಿದೆ. ಅಂದಿನಿಂದ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಇರಾನ್ ಜೊತೆ ಸಂಪರ್ಕ ಹೊಂದಿರುವ ಹಲವು ಹತ್ಯೆಯ ಸಂಚುಗಳನ್ನು ಯುಎಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಆದರೆ ಇರಾನ್ ಈ ಆರೋಪಗಳಲ್ಲಿ ತನ್ನ ಪಾತ್ರವನ್ನು ನಿರಾಕರಿಸಿದೆ(ಏಜೆನ್ಸೀಸ್​​).