ನ್ಯೂಸ್

ಯೋಗದಿಂದ ರೋಗ ದೂರ: ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಹೇಳಿಕೆ

ಬೆಂಗಳೂರು: ವಸುಧೈವ ಕುಟುಂಬಕಂ (ವಿಶ್ವವೇ ಒಂದು ಕುಟುಂಬ) ಎಂಬಂತೆ ಇಂದು ನಾವು ವಿಶ್ವಕ್ಕೆ ಯೋಗವನ್ನು ಹಂಚುತ್ತಿದ್ದೇವೆ. ಯೋಗದಿಂದ ಯಾವುದೇ ರೋಗವೂ ದೂರ ಎಂದು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅವರು ಹೇಳಿದರು.

ಅಂತಾರಾಷ್ಟ್ರೀಯ ಯೋಗದಿನಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯಪಾಲರು ಮಾತನಾಡಿದರು.

ಯೋಗದಿಂದ ರೋಗ ದೂರ

ಕನ್ನಡಲ್ಲೇ ಎಲ್ಲರಿಗೂ ಸ್ವಾಗತ ಮಾಡಿದ ರಾಜ್ಯಪಾಲರು, ನಮ್ಮ ಗ್ರಂಥಗಳಲ್ಲಿ ಯೋಗದ ಬಗ್ಗೆ ಉಲ್ಲೇಖ ಇದೆ. ಭಾರತವನ್ನು ಯೋಗ ಗುರು ಎಂದು ಕರೆಯುತ್ತಾರೆ. ಭಾರತಕ್ಕೆ ಸೀಮಿತವಾಗಿದ್ದ ಯೋಗವನ್ನು ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದರು. ಇಂದು ಇಡೀ ವಿಶ್ವವೇ ಯೋಗದಿನವನ್ನು ಆಚರಣೆ ಮಾಡುತ್ತಿದೆ. ಯೋಗ ದಿಂದ ಮನಸ್ಸು ಹಾಗೂ ಆರೋಗ್ಯ ಉತ್ತಮವಾಗಿರುತ್ತದೆ. ವಸುದೈವ ಕುಟುಂಬಕಂ ಎಂಬಂತೆ ಇಂದು ನಾವು ವಿಶ್ವಕ್ಕೆ ಯೋಗವನ್ನು ಹಂಚುತ್ತಿದ್ದೇವೆ. ಇಂದು ನಾವು ಯೋಗಕ್ಕೆ ಶ್ರಮಿಸಿದವರನ್ನು ಸ್ಮರಿಸಬೇಕು. ಯೋಗದಿಂದ ರೋಗವನ್ನು ದೂರ ಮಾಡಬಹುದು. ಎಲ್ಲರೂ ನಿತ್ಯವೂ ಯೋಗ ಮಾಡಿ ಆರೋಗ್ಯವಾಗಿರಿ ಎಂದು ರಾಜ್ಯಪಾಲರು ಹೇಳಿದರು.

ವಿಶ್ವಕ್ಕೆ ಭಾರತ ಕೊಟ್ಟಿರುವ ಕೊಡುಗೆ

ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಯೋಗ ನಮ್ಮ ದೇಶದ ಸಂಸ್ಕೃತಿ ಮತ್ತು ಪೂರ್ವಜರ ಕೊಡುಗೆ. ಸಾವಿರ ವರ್ಷಗಳ ಹಿಂದೇಯೆ ನಮ್ಮ ಪೂರ್ವಜರು ಬಿಟ್ಟುಹೋಗಿದ್ದಾರೆ. ಇಡೀ ವಿಶ್ವಕ್ಕೆ ಭಾರತ ಕೊಟ್ಟಿರುವ ಕೊಡುಗೆ ಇದು. ಇಡೀ ವಿಶ್ವದಲ್ಲೇ ಎಲ್ಲ ಕಡೆ ಯೋಗ ದಿನ ಆಚರಣೆ ಮಾಡ್ತಾರೆ. ಚುರುಕು, ಉತ್ಸಾಹ, ದೈಹಿಕ ಹಾಗೂ ಮಾನಸಿಕ ಶುದ್ಧೀಕರಣ ಯೋಗದಿಂದ ಸಿಗಲಿದೆ. ಇವತ್ತಿನ ದಿನಗಳಲ್ಲಿ ಕಾಯಿಲೆಗಳು ಹೆಚ್ಚಾಗಿವೆ. ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಹೃದಯಾಘಾತ ಹೆಚ್ಚಾಗಿದೆ. ಇದಕ್ಕೆ ಕಾರಣ ನಮ್ಮ ಜೀವನಶೈಲಿಗಳಾಗಿದೆ. ಯಾರು ಯೋಗಾಭ್ಯಾಸ ಮಾಡುತ್ತಾರೋ ಅವರಿಗೆ ಆರೋಗ್ಯ ಅನೂಕೂಲ ಹೆಚ್ಚಾಗಲಿದೆ. ನಮ್ಮ ಸರ್ಕಾರದಿಂದ ಯೋಗಕ್ಕೆ ಸಹಕಾರ ಹಾಗೂ ಪ್ರೋತ್ಸಾಹ ಮಾಡುತ್ತೇವೆ. ಶಾಲೆಗಳಿಂದಲೇ ಎಲ್ಲಾ ಕಡೆ ಯೋಗಾಭ್ಯಾಸಕ್ಕೆ ಪ್ರೋತ್ಸಾಹವನ್ನು ಸರ್ಕಾರದ ವತಿಯಿಂದಲೂ ನೀಡುತ್ತೇವೆ ಎಂದರು.

ಯೋಗವನ್ನು ಮಕ್ಕಳಿಗೆ ಬೋಧಿಸಿ

ವಿಧಾನಸಭಾ ಸ್ಪೀಕರ್​ ಯು.ಟಿ. ಖಾದರ್ ಮಾತನಾಡಿ, ಯೋಗ ಈ ದೇಶದ ಋಷಿಮುನಿಗಳು ವಿಶ್ವಕ್ಕೆ ಕೊಟ್ಟ ಕೊಡುಗೆ. ಇದನ್ನ ನಾವು ಉಳಿಸಿ ಮುಂದುವರೆಸಿಕೊಂಡು ಹೋಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಒತ್ತಡ ಬಹಳ ದೊಡ್ಡ ಸಮಸ್ಯೆಯಾಗಿದೆ. ಮಾನಸಿಕ ಕಾಯಿಲೆ ದೂರವಾಗಿಸಲು ಯೋಗ ಬಹಳ ಸಹಕಾರಿಯಾಗಿದೆ. ಪ್ರತಿ ಶಾಲೆಯಲ್ಲಿ ಪಠ್ಯ, ಚಟುವಟಿಗಳಲ್ಲಿ ಇದನ್ನ ಸೇರಿಸಬೇಕು. ಯೋಗಕ್ಕೆ ಪಠ್ಯ ಮಾಡಿ ಮಕ್ಕಳಿಗೆ ಬೋಧಿಸಬೇಕು. ಇದು ಸಚಿವರಿಗೆ ನನ್ನ ಮನವಿ ಎಂದು ಹೇಳಿದರು.

ವಿಧಾನಸೌಧದಲ್ಲಿ ನಡೆದ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಖ್ಯಾತ ಕ್ರೀಡಾಪಟು ಅಂಜು ಬಾಬಿ ಜಾರ್ಜ್​, ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್​, ವಿಧಾನ ಪರಿಷತ್ ಸದಸ್ಯ ಶರವಣ, ಶ್ವಾಸಗುರು ವಚನಾನಂದಸ್ವಾಮೀಜಿ, ಶಾಸಕ ರಿಜ್ವಾನ್ ಹರ್ಷದ್ ಅವರು ಪಾಲ್ಗೊಂಡು ಯೋಗ ಪ್ರದರ್ಶನ ಮಾಡಿದರು.