ನವದೆಹಲಿ: ದಿ. ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವೆಯಾಗಿದ್ದ ವೇಳೆ ಜನರಿಗೆ ಮಾಡಿದ ಸಹಾಯವನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಟ್ವಿಟರ್ ಇಂಡಿಯಾ ಸ್ಮರಿಸಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದೆ.
ಸುಷ್ಮಾ ಸ್ವರಾಜ್ ಅವರು ಉತ್ತಮ ನಾಯಕಿ. ವಿಶ್ವದ ಇತರ ರಾಷ್ಟ್ರಗಳಲ್ಲಿದ್ದ ಭಾರತೀಯರನ್ನು ತಲುಪಲು ಅವರು ಟ್ವಿಟರ್ ಬಳಸಿಕೊಂಡಿದ್ದು ಮಾತ್ರ ಗಮನಾರ್ಹ. ಕುಟುಂಬಗಳನ್ನು ಒಗ್ಗೂಡಿಸಲು ಹಾಗೂ ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಲು ಅವರು ಟ್ವಿಟರ್ ಬಳಸಿಕೊಂಡಿದ್ದರು ಎಂದು ಹೊಗಳಿದೆ.
ಈ ಸಂದರ್ಭದಲ್ಲಿ ಟ್ವಿಟರ್ ಇಂಡಿಯಾ ಸುಷ್ಮ ಸ್ವರಾಜ್ ಅವರ ಮಗಳು ಬಾನ್ಸುರಿ ಸ್ವರಾಜ್ ಅವರನ್ನು ಒಳಗೊಂಡ ವಿಶೇಷ ವಿಡಿಯೋ ಪೋಸ್ಟ್ ಮಾಡಿದೆ.
ಬಾನ್ಸುರಿ ಸ್ವರಾಜ್ ಮೊದಲು ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ನಂತರ ಸುಷ್ಮಾ ಸ್ವರಾಜ್ ಅವರ ಮಗಳಾಗಲು ನಾನು ಅದೃಷ್ಟ ಮಾಡಿದ್ದೇನೆ. ನಾನು ನನ್ನ ತಾಯಿಯನ್ನು ಅನುಸರಿಸುತ್ತಿದ್ದೇನೆ. ಅಲ್ಲದೆ ಸ್ವತಃ ವಕೀಲ ವೃತ್ತಿಯಲ್ಲಿ ತಾಯಿಯ ಆದರ್ಶಗಳನ್ನು ಪಾಲಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸುಷ್ಮ ಸ್ವರಾಜ್ ಅವರು ವಿದೇಶಾಂಗ ಸಚಿವೆಯಾಗಿದ್ದ ವೇಳೆ ನಡೆದ ಒಂದು ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.
ಜರ್ಮನಿಯಲ್ಲಿ ಭಾರತೀಯ ಮಹಿಳೆಯೊಬ್ಬರು ಟ್ರಾವೆಲ್ ಏಜೆಂಟರಿಂದ ಮೋಸಕ್ಕೆ ಒಳಗಾಗಿದ್ದರು. ಈ ವೇಳೆ ಅವರನ್ನು ಜರ್ಮನ್ ಸರ್ಕಾರ ಆಕೆಯ 8 ವರ್ಷದ ಮಗಳ ಜತೆ ನಿರಾಶ್ರಿತರ ಶಿಬಿರದಲ್ಲಿ ಬಿಟ್ಟಿತ್ತು. ಈ ವೇಳೆ ಆ ಮಹಿಳೆ ವಿಡಿಯೋ ಮಾಡಿ ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ್ದರು. ವಿಡಿಯೋ ಅಪ್ಲೋಡ್ ಆದ ತಾಸು ಒಳಗೆ ಉತ್ತರಿಸಿದ ಸುಷ್ಮಾ ಸ್ವರಾಜ್ ಅವರು ಮಗಳೊಂದಿಗೆ ಆ ತಾಯಿ ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಲು ಸಹಾಯ ಮಾಡಿದರು ಎಂದು ಅವರು ಸ್ಮರಿಸಿದರು.
ಈ ವಿಡಿಯೋವನ್ನು ಅಂದಾಜು 23 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ ಅಲ್ಲದೆ 300 ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್)