ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದ ಸಂಯೋಜಕಿ ಡಾ.ಜಿ.ಎಸ್.ಸರೋಜಾ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷೆ ಪ್ರೊ.ಪಿ.ಆರ್.ಮಮತಾ, ಉಪಾಧ್ಯಕ್ಷರಾದ ಉಷಾ ನಟೇಶ್ ಕಾಸರವಳ್ಳಿ, ವಾರಿಜಾ ಜಗದೀಶ್, ಕೋಶಾಧ್ಯಕ್ಷೆ ಟಿ.ಎನ್.ಸರಸ್ವತಿ, ಅನುರಾಧಾ, ಯು.ಪಿ.ಕವಿತಾ, ವಾಣಿ ಭಂಡಾರಿ, ಭಾರತಿ ಸುದ್ದಿಗೋಷ್ಠಿಯಲ್ಲಿದ್ದರು. 
ನ್ಯೂಸ್

ನ.22ರಿಂದ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ

ಶಿವಮೊಗ್ಗ: ಮಹಿಳೆಯರಿಂದ, ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ಪರಿಕಲ್ಪನೆಯಲ್ಲಿ ನಾರಿಶಕ್ತಿಗೆ ಹೊಸ ಆಯಾಮ ನೀಡಿದ ಎಐಪಿಸಿಗೆ (ಅಖಿಲ ಭಾರತ ಕವಯತ್ರಿ ಸಮ್ಮೇಳನ) ಈಗ 24ನೇ ರಜತ ಮಹೋತ್ಸವದ ಸಂಭ್ರಮ. ಆ ಕಾರಣಕ್ಕೆ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನವನ್ನು ನ.22ರಿಂದ 24ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಸಂಯೋಜಕಿ ಡಾ.ಜಿ.ಎಸ್.ಸರೋಜಾ ಹೇಳಿದರು.

ವಿಶ್ವಶಾಂತಿ ಮತ್ತು ಸದ್ಭಾವನ ಸ್ಥಾಪನೆಗಾಗಿ ಭಾರತೀಯ ಸಾಹಿತ್ಯ ಮತ್ತು ಭಾರತೀಯ ನಾರಿ ಸಂಸ್ಕೃತಿಯ ಸೌರಭವನ್ನು ಅಖಿಲ ಭಾರತ ಕವಯತ್ರಿ ಸಮ್ಮೇಳನವು ಪರಿಚಯಿಸುತ್ತಿದೆ. 2000ರ ಏ.30ರಂದು ಸ್ಥಾಪಿತವಾದ ಎಐಪಿಸಿ 24 ವರ್ಷಗಳ ಸುದೀರ್ಘ ಪಯಣದಲ್ಲಿ 23 ರಾಷ್ಟ್ರೀಯ ಮತ್ತು 16 ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಿರುವುದು ಅನವರತ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ.21ರಂದು ಕನ್ನಡದ ಮೊದಲ ಕವಯತ್ರಿ, ಶಿವಶರಣೆ ಅಕ್ಕಮಹಾದೇವಿಯ ಜನ್ಮಸ್ಥಳವಾದ ಉಡುತಡಿಯಲ್ಲಿ ರಜತ ಮಹೋತ್ಸವದ ಆರಂಭಿಕ ಜ್ಯೋತಿಯನ್ನು ಬೆಳಗಿಸಿ ಸಮ್ಮೇಳನಕ್ಕೆ ಚಾಲನೆ ನೀಡಲಾಗುವುದು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಎಐಪಿಸಿ ಗೌರವಾಧ್ಯಕ್ಷೆ, ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಸಂಸ್ಥಾಪಕಿ ಡಾ. ಲಾರಿ ಆಜಾದ್ ಉಪಸ್ಥಿತರಿರುವರು ಎಂದರು.

ದೇಶದ 20 ರಾಜ್ಯಗಳು ಹಾಗೂ ಭೂತಾನ್, ನೇಪಾಳ, ಬಾಂಗ್ಲಾದೇಶ, ಕ್ಯಾಲಿಫೋರ್ನಿಯಾ, ಕೆನಡಾ, ಲಂಡನ್, ದುಬೈ, ಕತಾರ್ ಸೇರಿದಂತೆ ವಿವಿಧ ದೇಶಗಳಲ್ಲಿರುವ ಅನಿವಾಸಿ ಭಾರತೀಯರು ಸೇರಿ ಸುಮಾರು 500ಕ್ಕೂ ಅಧಿಕ ಲೇಖಕಿಯರು ಸಮ್ಮೇಳನಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ 260ಕ್ಕೂ ಅಧಿಕ ಲೇಖಕಿಯರು ನೋಂದಣಿ ಮಾಡಿಸಿದ್ದಾರೆ. ಶಿವಮೊಗ್ಗದ ಸಾರಸತ್ವ ಲೋಕದ ಇತಿಹಾಸದಲ್ಲಿ ಇದೊಂದು ಅಪೂರ್ವ ಸಮಾವೇಶವಾಗಿದ್ದು ಭಾರತೀಯ ಭಾಷಾ ಲೇಖಕಿಯರ ಸಾಹಿತ್ಯ ಮಂಥನದ ಮಹಾ ಉತ್ಸವ ನಡೆಯುತ್ತಿದೆ ಎಂದು ಹೇಳಿದರು.

22ರಂದು ಕುವೆಂಪು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಬಲ್ಕಿಷ್ ಬಾನು ಮತ್ತಿತರರು ಪಾಲ್ಗೊಳ್ಳುವರು ಎಂದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ಪ್ರೊ.ಪಿ.ಆರ್.ಮಮತಾ, ಉಪಾಧ್ಯಕ್ಷರಾದ ಉಷಾ ನಟೇಶ್ ಕಾಸರವಳ್ಳಿ, ವಾರಿಜಾ ಜಗದೀಶ್, ಕೋಶಾಧ್ಯಕ್ಷೆ ಟಿ.ಎನ್.ಸರಸ್ವತಿ, ಅನುರಾಧಾ, ಯು.ಪಿ.ಕವಿತಾ, ವಾಣಿ ಭಂಡಾರಿ, ಭಾರತಿ ಸುದ್ದಿಗೋಷ್ಠಿಯಲ್ಲಿದ್ದರು.

24 ಭಾಷೆ, 24 ಪುಸ್ತಕ ಬಿಡುಗಡೆ

ಕನ್ನಡ ಕವಿಗೋಷ್ಠಿ ಮಾತ್ರವಲ್ಲದೆ, ಎಲ್ಲ ಭಾಷೆಗಳ ಗೋಷ್ಠಿಗಳು ಸಮ್ಮೇಳನದಲ್ಲಿ ನಡೆಯಲಿವೆ. ವಿಶೇಷವಾಗಿ 24 ಭಾಷೆಯ 24 ಪುಸ್ತಕಗಳು ಬಿಡುಗಡೆಗೊಳ್ಳಲಿವೆ. ಇದು ಕೂಡ ಒಂದು ದಾಖಲೆಯಾಗಲಿದೆ. ಕನ್ನಡ ಸಾಹಿತ್ಯ ಪುಸ್ತಕಗಳು ಮಾತ್ರವಲ್ಲದೆ, ವಿವಿಧ ಪ್ರಕಾರಗಳ ಪುಸ್ತಕಗಳನ್ನೂ ಬಿಡುಗಡೆಗೊಳಿಸಲಾಗುವುದು. ಜತೆಗೆ ನಿತ್ಯೋತ್ಸವ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. 24 ವರ್ಷಗಳ ಎಲ್ಲ ಮಾಹಿತಿಯನ್ನೂ ಪ್ರದರ್ಶನಗೊಳ್ಳಲಿದೆ. ಮೂರು ದಿನವೂ ಸಂಜೆ 6ರಿಂದ ರಾತ್ರಿ 8ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಸರೋಜಾ ಹೇಳಿದರು.