ನ್ಯೂಸ್

ಅಂತರಾಷ್ಟ್ರೀಯ ಹುಲಿ ದಿನ: ಇವೇ ನೋಡಿ ಭಾರತದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳು

ನವದೆಹಲಿ: ಇಂದು ಪ್ರಪಂಚದಾದ್ಯಂತ ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಜುಲೈ 29 ರಂದು ಹುಲಿಗಳ ಸಂಖ್ಯೆ ಕಡಿಮೆಯಾಗುವುದನ್ನು ನಿಯಂತ್ರಿಸಲು ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನವು ಭಾರತಕ್ಕೆ ಇನ್ನಷ್ಟು ವಿಶೇಷವಾಗಿದೆ. ಏಕೆಂದರೆ ಹುಲಿ ಭಾರತದ ರಾಷ್ಟ್ರೀಯ ಪ್ರಾಣಿ ಮಾತ್ರವಲ್ಲ, ಪ್ರಪಂಚದ 70% ಕ್ಕಿಂತ ಹೆಚ್ಚು ಹುಲಿಗಳು ಭಾರತದಲ್ಲಿ ಕಂಡುಬರುತ್ತವೆ. ಅಂದಹಾಗೆ ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲು ನೀವು ಇಲ್ಲಿರುವ ವಿವಿಧ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡಬಹುದು. ಆದರೆ ಭಾರತದಲ್ಲಿ ಇರುವ 53 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ತುಂಬಾ ಕಷ್ಟ. ಆದ್ದರಿಂದ ಈ ಲೇಖನದಲ್ಲಿ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಒಮ್ಮೆಯಾದರೂ ಹೋಗಿ ಬನ್ನಿ...

ರಣಥಂಬೋರ್, ರಾಜಸ್ಥಾನ
ಇದು ಭಾರತದ ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿದೆ. 1,134 ಕಿಮೀ ವಿಸ್ತೀರ್ಣವನ್ನು ಹೊಂದಿದ್ದು, ಬಂಗಾಳ ಹುಲಿಗಳ ತವರು ಎಂದು ಪ್ರಸಿದ್ಧವಾಗಿದೆ. ಇಲ್ಲಿಗೆ ಹೋಗುವುದಾದರೆ ಸಫಾರಿಗೆ ಹೋಗಬೇಕು. ಈ ಪ್ರದೇಶದಲ್ಲಿ ಹುಲಿಗಳ ಹೊರತಾಗಿ, ಕರಡಿಗಳು, ಹೈನಾಗಳು, ಭಾರತೀಯ ನರಿಗಳು ಸೇರಿದಂತೆ ಇತರ ಪ್ರಾಣಿಗಳನ್ನು ಸಹ ನೀವು ಇಲ್ಲಿ ನೋಡಬಹುದು.

ಜಿಮ್ ಕಾರ್ಬೆಟ್ ಟೈಗರ್ ರಿಸರ್ವ್, ಉತ್ತರಾಖಂಡ
ಹಿಮಾಲಯದ ತಪ್ಪಲಿನಲ್ಲಿರುವ ಜಿಮ್ ಕಾರ್ಬೆಟ್ ಟೈಗರ್ ರಿಸರ್ವ್ ಬಹುಶಃ ಭಾರತದ ಅತಿದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಈ ರಾಷ್ಟ್ರೀಯ ಉದ್ಯಾನವನದ ವಿಸ್ತೀರ್ಣ 500 ಚದರ ಕಿ.ಮೀ. ಇದೆ. ಈ ಮೀಸಲು ಪ್ರದೇಶದಲ್ಲಿ ಆನೆ ಸಫಾರಿ ಸಖತ್ ಫೇಮಸ್. ಬಂಗಾಳ ಹುಲಿಗಳ ಹೊರತಾಗಿ, ನೀವಿಲ್ಲಿ 585 ವಿವಿಧ ಪಕ್ಷಿ ಪ್ರಭೇದಗಳನ್ನು ಮತ್ತು 7 ವಿವಿಧ ಉಭಯಚರ ಜಾತಿಗಳನ್ನು ಸಹ ನೋಡಬಹುದು.

ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶ, ಮಧ್ಯಪ್ರದೇಶ
ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶವು ಭಾರತದ ಅಗ್ರ ಹುಲಿ ಸಂರಕ್ಷಿತ ಪ್ರದೇಶವಾಗಿದೆ, ಪ್ರತಿದಿನ ನೂರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ರಾಯಲ್ ಬೆಂಗಾಲ್ ಟೈಗರ್ಸ್‌ಗೆ ನೆಲೆಯಾಗಿದ್ದು, 820 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ. ಐತಿಹಾಸಿಕ ಬಾಂಧವಗಢ ಕೋಟೆಯು ಕೂಡ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಗೊಂಡಿದೆ. ವೈವಿಧ್ಯಮಯ ಜೀವವೈವಿಧ್ಯತೆ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಈ ಪ್ರದೇಶವು ಹೆಸರುವಾಸಿಯಾಗಿದೆ.

ಕನ್ಹಾ ರಾಷ್ಟ್ರೀಯ ಉದ್ಯಾನವನ, ಮಧ್ಯಪ್ರದೇಶ
ಕನ್ಹಾ ರಾಷ್ಟ್ರೀಯ ಉದ್ಯಾನವನವನ್ನು ಕನ್ಹಾ ಟೈಗರ್ ರಿಸರ್ವ್ ಎಂದೂ ಕರೆಯುತ್ತಾರೆ. ಇದು ಏಷ್ಯಾದ ಅತ್ಯುತ್ತಮ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದೆ ಮತ್ತು ಭಾರತದ ಪ್ರಸಿದ್ಧ ಬಂಗಾಳ ಹುಲಿಗಳಿಗೆ ನೆಲೆಯಾಗಿದೆ. ಇದಲ್ಲದೆ, ನೀವಿಲ್ಲಿ ಭಾರತೀಯ ಆನೆಗಳು, ಸ್ಲಾಥ್ ಕರಡಿಗಳು, ಹಲವಾರು ಪಕ್ಷಿಗಳು ಮತ್ತು ಜಿಂಕೆ ಇತ್ಯಾದಿಗಳನ್ನು ಸಹ ನೋಡಬಹುದು. ವಿಶೇಷವೆಂದರೆ ಈ ಉದ್ಯಾನವನವು ಪ್ರಪಂಚದಲ್ಲಿರುವ 6,000 ಹುಲಿಗಳಲ್ಲಿ 500 ಹುಲಿಗಳಿಗೆ ನೆಲೆಯಾಗಿದೆ.

ಕಾಜಿರಂಗ ಹುಲಿ ಸಂರಕ್ಷಿತ ಪ್ರದೇಶ
ಕಾಜಿರಂಗ ಹುಲಿ ಸಂರಕ್ಷಿತ ಪ್ರದೇಶವು ಭಾರತದಲ್ಲಿ ಮತ್ತು ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. ಅಸ್ಸಾಂನಲ್ಲಿ ಅತಿ ಹೆಚ್ಚು ಸಂರಕ್ಷಿತ ಹುಲಿಗಳು ಕಾಜಿರಂಗ ಉದ್ಯಾನವನದ ತೇರೈ-ಸವನ್ನಾ ಪ್ರದೇಶದಲ್ಲಿ ಕಂಡುಬರುತ್ತವೆ. ಇದು ಹೆಚ್ಚಿನ ಸಂಖ್ಯೆಯ ಆನೆಗಳು, ಕಾಡು ಎಮ್ಮೆಗಳು ಮತ್ತು ಭಾರತೀಯ ಘೇಂಡಾಮೃಗಗಳಿಗೆ ನೆಲೆಯಾಗಿದೆ.

ಸಾತ್ಪುರ ರಾಷ್ಟ್ರೀಯ ಉದ್ಯಾನವನ, ಮಧ್ಯಪ್ರದೇಶ
ನೀವು ಮಧ್ಯಪ್ರದೇಶದ ಜೀವವೈವಿಧ್ಯದ ಒಂದು ನೋಟವನ್ನು ನೋಡಲು ಬಯಸಿದರೆ, ಸಾತ್ಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು. 1981 ರಲ್ಲಿ ಪ್ರಾರಂಭವಾಗಿರುವ ಇದು ದೇಶ ಮತ್ತು ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ವಿಶಿಷ್ಟ ಸಸ್ಯಗಳು ಮತ್ತು ಪ್ರಾಣಿಗಳ ವೈವಿಧ್ಯತೆಗೆ ನೆಲೆಯಾಗಿದೆ.