ನ್ಯೂಸ್

ಇಂದು ಅಂತಾರಾಷ್ಟ್ರೀಯ ಯುವ ದಿನ: ಕೃಷಿಯಲ್ಲಿ ಯುವಶಕ್ತಿಯ ಕಮಾಲ್

ಗ್ರಾಮೀಣ ಯುವಕರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂಬ ಕಳವಳದ ನಡುವೆಯೇ ಕೃಷಿಯಲ್ಲಿ ತೊಡಗುತ್ತಿರುವ ವಿದ್ಯಾವಂತ ಯುವಕರ ಸಂಖ್ಯೆ ಹೆಚ್ಚುತ್ತಿರುವುದು ಪ್ರಬಲ ಆಶಾವಾದ ಮೂಡಿಸಿದೆ. ಬೇಸಾಯವೇ ಉತ್ತಮ, ಕೃಷಿಯಿಂದ ನೆಮ್ಮದಿ ಇದೆ ಎಂದು ನಂಬಿದ ಇಂದಿನ ಯುವಶಕ್ತಿ ‘ಕೃಷಿ’ ಕ್ಷೇತ್ರದ ಶಕ್ತಿಯಾಗಿಯೂ ಮಾರ್ಪಟ್ಟಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಗೋವು ಸಾಕಾಣಿಕೆ, ಸಾಂಬಾರ ಬೆಳೆಗಳ ಬೇಸಾಯ, ಸಿರಿಧಾನ್ಯ ತಳಿಗಳ ಸಂರಕ್ಷಣೆ ಹೀಗೆ ಹಲವು ಆಯಾಮಗಳಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಯುವ ದಿನದ ನಿಮಿತ್ತ ಅಂತಹ ಕೆಲ ಯುವ ಕೃಷಿಕರ ಮಾಹಿತಿ ನೀಡಿದ್ದಾರೆ ನಾಗರಾಜ ಮತ್ತಿಗಾರ.

ಸ್ವಾವಲಂಬನೆಯಿಂದ ನೆಮ್ಮದಿ

ಮಂಡ್ಯ ಜಿಲ್ಲೆಯ ದುದ್ದ ಬಿ.ಹೊಸಳ್ಳಿಯ ಯುವ ರೈತ ಹೇಮಂತಕುಮಾರ ಎಚ್.ಯು. ಮೂರೂವರೆ ಎಕರೆ ಪ್ರದೇಶದಲ್ಲಿ ಭತ್ತ, ಕಬ್ಬು, ತೆಂಗು ಕೃಷಿ ಮಾಡುವುದರ ಜತೆಯಲ್ಲಿ ಕೊತ್ತಂಬರಿ, ಸಬ್ಬಸಿಗೆ, ಪಾಲಕ, ಮೆಂತೆ ಸೊಪ್ಪನ್ನು ಬೆಳೆಯುತ್ತಿದ್ದಾರೆ. 10 ಗುಂಟೆ ಜಾಗದಲ್ಲಿ ತೆಂಗನ್ನು ಬೆಳೆಯುತ್ತಿದ್ದು, ಅದರಲ್ಲಿಯೇ ಮಿಶ್ರ ಬೆಳೆಯಾಗಿ ಶುಂಠಿ, ಲಿಂಬು ಇವೆ. ಅಲ್ಲದೆ, ಗದ್ದೆ ಕೆಲಸ ಮುಗಿದ ನಂತರ ಸೊಪು್ಪಗಳನ್ನು ಬೆಳೆಯುತ್ತಾರೆ. ಮೂರು ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದು, ದೇಸಿ ತಳಿಗಳಿಗೆ ಆದ್ಯತೆ ನೀಡಿದ್ದಾರೆ. ರಾಜಮುಡಿ, ಸಿದ್ದಸಣ್ಣ, ಸೇಲಂಸಣ್ಣ, ಎಚ್​ಎಂಟಿ ಭತ್ತ ಬೆಳೆಯುತ್ತಾರೆ. ಸುತ್ತಮುತ್ತಲಿನ ಸಮಾನ ಮನಸ್ಸಿನ ರೈತರು ಜತೆಯಾಗಿ ‘ಬಯಲುಸೀಮೆ ಸಾವಯವ ಬೆಳೆಗಾರರ ಸಂಘ’ವನ್ನು ಕಟ್ಟಿಕೊಂಡು ಮಂಡ್ಯದಲ್ಲಿ ಭಾನುವಾರ ಬಿಟ್ಟು ಉಳಿದ ದಿನ ಸಂತೆಯನ್ನು ಮಾಡುತ್ತಾರೆ. ಈ ಮೂಲಕ ತಾವು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಇದರೊಂದಿಗೆ ‘ಸಾವಯವ ಸಂತೆ’ ಎಂಬ ಬ್ರಾ್ಯಂಡ್​ನೊಂದಿಗೆ ಪ್ಯಾಕೇಟ್ ಮಾಡಿ ಬೇಡಿಕೆಗೆ ಅನುಗುಣವಾಗಿ ಮಾರಾಟ ಮಾಡುತ್ತಿದ್ದಾರೆ. ಮಂಡ್ಯ ಮಾತ್ರವಲ್ಲದೆ, ಬೆಂಗಳೂರಿನಲ್ಲೂ ಇದಕ್ಕೆ ಮಾರುಕಟ್ಟೆ ಇದೆ. ‘ರೈತರು ಕೂಲಿಯನ್ನು ನಂಬದೆ ಕೆಲಸವನ್ನು ಅವರೇ ಮಾಡಿಕೊಳ್ಳಬೇಕು. ನಾವು ಹೆಚ್ಚು ದುಡಿದಷ್ಟು ನಮಗೆ ಉಳಿತಾಯ ಜಾಸ್ತಿ. ಸ್ವಾಬಲಂಬಿ ರೈತನಾದರೆ ನೆಮ್ಮದಿಯೂ ಹೆಚ್ಚು’ ಎನ್ನುತ್ತಾರೆ ಹೇಮಂತಕುಮಾರ (99456-43770).

ಸುಂದರ ಬದುಕು

ವಾಣಿ ಶ್ರೀಹರ್ಷ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲುಕಿನ ಕುಂಬ್ರಿಉಬ್ಬಿನವರು. ಇವರು ಸ್ವಂತ ಆಸಕ್ತಿಯಿಂದ ಗೋವುಗಳನ್ನು ಸಾಕುತ್ತಿದ್ದಾರೆ. ‘ಯಾರಿಗೆ ಆಕಳುಗಳನ್ನು ಸಾಕಲು ಸಾಧ್ಯವಿಲ್ಲವೋ ಅವುಗಳನ್ನು ನಾವು ಸಾಕುತ್ತೇವೆ’ ಎಂಬ ಹೇಳಿಕೆಯೊಂದಿಗೆ ‘ಸುರಭಿ’ ಗೋಶಾಲೆ ಆರಂಭಿಸಿದ್ದಾರೆ. ವಾಣಿ ಅವರ ಪತಿ ಶ್ರೀಹರ್ಷ ಸಾವಯವ ಕೃಷಿಕರು. ಇವರ ಕೃಷಿಗೆ ಸಾಥ್ ನೀಡುವ ಜತೆಯಲ್ಲಿ ತಾವು ಬೆಳೆದ ಬೆಳಗಳ ಮೌಲ್ಯವರ್ಧನೆಯಲ್ಲಿ ವಾಣಿ ತೊಡಗಿಸಿಕೊಂಡಿದ್ದಾರೆ. ಕಷಾಯಪುಡಿ, ಅರಿಷಿಣ ಪುಡಿ, ಕಾಳುಮೆಣಸಿನ ಪುಡಿ, ಮತ್ತು ಕಾಳುಮೆಣಸನ್ನು ‘ಫಲಶ್ರೀ’ ಎಂಬ ಬ್ರಾ್ಯಂಡ್​ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಎರೆಗೊಬ್ಬರವನ್ನೂ ತಯಾರಿಸುತ್ತಾರೆ. ಸುರಭಿ ಗೋಶಾಲೆಯಲ್ಲಿರುವ ಆಕಳುಗಳಿಗೆ ಬೇಕಾದ ಮೇವುಗಳನ್ನು ಇವರೇ ಬೆಳೆದುಕೊಳ್ಳುತ್ತಿದ್ದಾರೆ. ‘ಏಕಾಂತ, ನಿಸರ್ಗ ಇವು ನನಗೆ ತುಂಬ ಇಷ್ಟ. ಇದಕ್ಕೆ ಪೂರಕವಾಗಿರುವುದು ಕೃಷಿ. ಬೇಸಾಯ ಎನ್ನುವುದು ಲಾಭ-ನಷ್ಟದ ಉದ್ಯಮ ಅಲ್ಲ. ಇದೊಂದು ಭಾವನೆ. ಇದರಲ್ಲಿದ್ದು ಸುಂದರ ಬದುಕು ಕಾಣಬೇಕೆಂದರೆ ಮೌಲ್ಯವರ್ಧನೆ ಮಾಡಬೇಕು. ಭೂಮಿತಾಯಿಯ ಸೇವೆ ಮಾಡಬೇಕು. ಆಗ ನಮಗೆ ಇದು ಸುಂದರ ಬದುಕನ್ನು ಕೊಡುತ್ತದೆ’ ಎನ್ನುತ್ತಾರೆ ವಾಣಿ (82175-73938).

ಉದ್ಯೋಗ ಭದ್ರತೆಯ ಕ್ಷೇತ್ರ

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಳ್ಳಿಯ ವಿನಯ ನಾಯ್ಕ ಅವರಿಗೆ ಕೃಷಿ ಮೇಲೆ ಎಲ್ಲಿಲ್ಲದ ಆಸಕ್ತಿ. ಅದೇ ಕಾರಣಕ್ಕಾಗಿ ಬೆಂಗಳೂರನ್ನು ಬಿಟ್ಟು ಊರಿಗೆ ಮರಳಿ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ತಾವು ಕಲಿತ ದಂತ ವೈದ್ಯಕೀಯ ವಿದ್ಯೆಗೆ ಎರಡನೇ ಆದ್ಯತೆ. ಕೃಷಿಯೇ ಇವರ ಪ್ರಥಮ ಆದ್ಯತೆ. ತಮಗಿದ್ದ ಪಾಳು ಬಿದ್ದ ಗದ್ದೆಯನ್ನು ಹಸನಾಗಿ ಮಾಡಿ ಸಿರಿ ಪದ್ಧತಿಯಲ್ಲಿ ಭತ್ತದ ಕೃಷಿ ಮಾಡಿದ್ದಾರೆ. ಮೊದಲ ಬೆಳೆಯಲ್ಲೇ ಎಕರೆಗೆ 20 ಕ್ವಿಂಟಾಲ್ ಭತ್ತ ಪಡೆದರು. ಭೂಮಿತಾಯಿಯನ್ನು ನಂಬಿದರೆ ನಮ್ಮ ಕೈ ಬಿಡುವುದಿಲ್ಲ ಎಂಬ ದೃಢನಿರ್ಧಾರ ಇವರದ್ದಾಯಿತು. ಊರಿನ ಬಳಿಯ ಸಣ್ಣ ಪಟ್ಟಣ ಕಾರ್ಗಲ್​ನಲ್ಲಿ ಕ್ಲಿನಿಕ್ ಆರಂಭಿಸಿದರು. ಭಾನುವಾರ ಪೂರ್ಣ ದಿನ ಬೇಸಾಯದಲ್ಲಿ ನಿರತರಾಗುವ ಇವರು, ಕಲ್ಲಂಗಡಿ, ಅನಾನಸ್ ಬೆಳೆಯುತ್ತಾರೆ. ‘ರೈತಾಪಿ ಬದುಕು ಉತ್ತಮ. ನಮ್ಮ ಆರೋಗ್ಯಕ್ಕೆ ಪೂರಕವಾಗಿರುವುದನ್ನು ನಾವೇ ಬೆಳೆದುಕೊಳ್ಳಬಹುದು. ಆಸಕ್ತಿ ಇದ್ದರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು. ಅಲ್ಲದೆ, ಜಗತ್ತಿನ ಯಾವುದೇ ಕ್ಷೇತ್ರಕ್ಕೆ ಹೊದರೂ ಉದ್ಯೋಗ ಭದ್ರತೆ ಇಲ್ಲ. ಆದರೆ ಬೇಸಾಯ ಕ್ಷೇತ್ರದಲ್ಲಿ ಆ ಭದ್ರತೆ ಇದೆ. ನಾವು ಬೆಳೆದು ನಾವು ತಿನ್ನಬಹುದು. ಯಾವುದಕ್ಕೆ ಬೇಡಿಕೆ ಕಡಿಮೆಯಾದರೂ ಆಹಾರ ಪದಾರ್ಥಗಳಿಗೆ ಬೇಡಿಕೆ ಕಡಿಮೆ ಆಗುವುದಿಲ್ಲ’ ಎನ್ನುವ ಡಾ.ವಿನಯ ನಾಯ್ಕ (99009-11506) ಅವರ ಮಾತು ಇತರ ಯುವಕರಿಗೆ ಸ್ಪೂರ್ತಿ.

ಸಿರಿಧಾನ್ಯ ಸಮೃದ್ಧಿ

ಆಹಾರ ಬೆಳೆ ಅದರಲ್ಲೂ ಜೀವಕ್ಕೆ ಹಿತ, ಶಕ್ತಿ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಬೆಳೆಗಳಿಗೆ ಇಂದು ಹೆಚ್ಚು ಮೌಲ್ಯವಿದೆ. ಈ ಪೈಕಿ ಪ್ರಮುಖವಾದುದು ರಾಗಿ. ಇವುಗಳ ಬೀಜೋತ್ಪಾದನೆ ಜತೆಯಲ್ಲಿ ಶೇಂಗಾ, ತೊಗರಿ ಬೆಳೆಯುತ್ತಿದ್ದಾರೆ ಯುವರೈತ ಈಶ್ವರ ಗೌಡ ಪಾಟೀಲ (ಸುನೀಲ್). ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಮತ್ತಿಗಟ್ಟಿ ಗ್ರಾಮದವರಾದ ಇವರ ಜಮೀನು ಹತ್ತಿರದ ಹನುಮನಹಳ್ಳಿಯಲ್ಲಿದೆ. ಈ ಬಾರಿ ಇವರು ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಜಗಳೂರು ರಾಗಿಯನ್ನು ಬಿತ್ತಿದ್ದಾರೆ. ಮೂರು ಎಕರೆಯಲ್ಲಿ ಶೇಂಗಾ ಬೆಳೆಯೂ ಇದೆ. ಇದರೊಂದಿಗೆ 75 ಬಗೆಯ ರಾಗಿ ತಳಿಯನ್ನು ಸಂರಕ್ಷಿಸಿ, ಬೀಜೋತ್ಪಾದನೆ ಮಾಡುವ ಇರಾದೆ ಹೊಂದಿದ್ದಾರೆ. ಈ ಕಾರಣದಿಂದ ಈಗಾಗಲೇ 30 ತರಹದ ರಾಗಿಯನ್ನು ಬಿತ್ತಿದ್ದಾರೆ. ಸಮಾನಮನಸ್ಕರು ಜತೆಯಾಗಿ ‘ಸಂಜೀವಿನಿ ಸಾವಯವ ಕೃಷಿಕರ ಬಳಗ’ ಎನ್ನುವ ಸಂಘಟನೆ ಮಾಡಿಕೊಂಡಿದ್ದಾರೆ. ‘ಕೃಷಿಯಿಂದ ಸಿಗುವ ಖುಷಿ ಮತ್ಯಾವುದರಲ್ಲೂ ಇಲ್ಲ. ಸದ್ಯ ಬೆಳೆಗಳನ್ನು ಸಾರ್ವತ್ರಿಕ ಮಾರುಕಟ್ಟೆಯಲ್ಲಿ ಮಾರುತ್ತಿದ್ದೇವೆ. ನಮ್ಮದು ಸಾವಯವ ಕೃಷಿಯಾದ ಕಾರಣ ಸಿರಿಧಾನ್ಯಕ್ಕೆ ಹೊರಗಡೆಯಿಂದ ಬೇಡಿಕೆ ಇದೆ. ಇನ್ಮುಂದೆ ರಾಗಿಯನ್ನು ಮನೆಯಲ್ಲಿಯೇ ಸಂಸ್ಕರಣೆ ಮಾಡಿ, ಮೌಲ್ಯವರ್ಧನೆ ಮಾಡುವ ಉದ್ದೇಶವಿದೆ. ಕೃಷಿಯಲ್ಲೇ ನಮ್ಮ-ನಿಮ್ಮೆಲರ ಭವಿಷ್ಯವಿದೆ’ ಎಂಬುದು ಈಶ್ವರ ಗೌಡರ ವಿಶ್ವಾಸ (89710-50999).

ವ್ಯವಸ್ಥಿತ ಕೃಷಿಯಿಂದ ಲಾಭ

‘ನನ್ನ ತಂದೆ ಆಧುನಿಕ ಕೃಷಿಗೆ ಒತ್ತು ಕೊಡುತ್ತಿದ್ದಾರೆ. ಊರಿನಲ್ಲಿ ಅಪ್ಪನನ್ನು ಅನುಸರಿಸುತ್ತಿರುವ ಅನೇಕ ಕೃಷಿಕರಿದ್ದಾರೆ. ಕೃಷಿಯೊಂದಿಗೆ ಸಾಮಾಜಿಕ ಜೀವನದಲ್ಲಿ ತೊಡಗಲು ಅನುಕೂಲ’ ಎನ್ನುವ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಹಳವಳ್ಳಿಯ ಶಶಾಂಕ್ ಬಿಬಿಎ ವ್ಯಾಸಂಗ ಮಾಡಿ ಬೆಂಗಳೂರು ಸೇರಿದ್ದರು. ಆದರೆ, ಕೃಷಿ ಮೇಲಿನ ಅಸಕ್ತಿ ಊರಿಗೆ ಬರುವಂತೆ ಮಾಡಿತು. ಇವರು ಅಡಕೆ, ಕಾಳುಮೆಣಸು, ವೆಂಗುರ್ಲಾ 7 ಗೇರು, ಅಗರ್​ವುಡ್, ಸಿಲ್ವರ್ ಓಕ್, ಗ್ಲಿರಿಸಿಡಿಯಾ ಮತ್ತು ಗೇರುಮರಕ್ಕೆ ಕಾಳುಮೆಣಸು, ಬಳ್ಳಿಯನ್ನು ಹಬ್ಬಿಸಿ ಆದಾಯ ಪಡೆಯುತ್ತಿದ್ದಾರೆ. ‘ಕೃಷಿಯನ್ನು ನಂಬಿದರೆ ಯಾವುದೇ ತೊಂದರೆ ಇಲ್ಲ. ಇಲ್ಲಿ ಹಣ ತೊಡಗಿಸಿ ಹಣ ಪಡೆಯಬೇಕು. ಆಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ’ ಎನ್ನುತ್ತಾರೆ ಶಶಾಂಕ್ (88922-29496).