ಅವೈಜ್ಞಾನಿಕವಾಗಿರುವ ಒಳಮೀಸಲಾತಿ ಜಾರಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಬಂಜಾರ ಸಮಾಜದ ಟಿ.ಮಂಜುನಾಥ್, ರೇಣುನಾಯ್ಕ, ಶಶಿಕುಮಾರ್, ಶಿವಾನಾಯ್ಕ, ಶಶಿನಾಯ್ಕ ಮತ್ತಿತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 
ನ್ಯೂಸ್

ಒಳಮೀಸಲಾತಿಯಿಂದ ಬಂಜಾರ ಸಮಾಜಕ್ಕೆ ಅನ್ಯಾಯ

ಶಿವಮೊಗ್ಗ: ಅವೈಜ್ಞಾನಿಕವಾಗಿ ಒಳಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಇದರಿಂದ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾ ಬಂಜಾರ ಸಮಾಜ, ಗೋರ ಸೇನಾ ಸಂಘಟನೆ ಪ್ರಮುಖರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣದಲ್ಲಿ ಅವೈಜ್ಞಾನಿಕ ನಿರ್ಧಾರ ತೆಗೆದುಕೊಂಡಿದೆ. ಬೇಡ, ಜಂಗಮ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಆ ಸಮುದಾಯವನ್ನು ನಮ್ಮ ವರ್ಗದಲ್ಲಿ ಸೇರಿಸಿರುವುದು, ಅಲೆಮಾರಿ ಹಾಗೂ ಇತರ ಜನಾಂಗಕ್ಕೆ ಪ್ರತ್ಯೇಕವಾಗಿ ಶೇ. 1ಮೀಸಲಾತಿ ಕಲ್ಪಿಸಿದ್ದರೂ ಅವರನ್ನೂ ನಮ್ಮ ಜತೆ ಸೇರ್ಪಡೆ ಮಾಡಿರುವುದು ಅವೈಜ್ಞಾನಿಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಗಮೋಹನ್‌ದಾಸ್ ಆಯೋಗ ತಾಂಡಗಳ ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡಿಲ್ಲ. 2011ರ ಜನಗಣತಿಯಲ್ಲಿ ಎಸ್‌ಸಿ ಜನ ಸಂಖ್ಯೆ 1.8 ಕೋಟಿಯಿತ್ತು. ಈಗ 1.5 ಕೋಟಿ ಆಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಎಸ್‌ಸಿ ಜನಸಂಖ್ಯೆ 8 ಸಾವಿರ ಎಂದು ಉಲ್ಲೇಖಿಸಲಾಗಿದೆ. ಮತದಾರರ ಪಟ್ಟಿಯಲ್ಲೂ ಇದೇ ಸಂಖ್ಯೆ ನಮೂದಾಗಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇದೇ ಅಂಕಿ ಅಂಶಗಳೊಂದಿಗೆ ಒಳಮೀಸಲಾತಿ ಜಾರಿ ಮಾಡಬಾರದು. ಕ್ರಮಬದ್ಧವಾಗಿ ಸಮೀಕ್ಷೆ ಮಾಡಿ ಆನಂತರ ಕ್ರಮ ಕೈಗೊಳ್ಳಬೇಕು. ನಮ್ಮ ಸಮಾಜಕ್ಕೆ ಸೇರಿದ ಗುಳೆ ಹೋಗಿರುವವರು ಮೀಸಲಾತಿ ಸಮೀಕ್ಷೆಯಿಂದ ಹೊರಗಿದ್ದಾರೆ. ಇವರನ್ನೂ ಪರಿಗಣಿಸಬೇಕು. ಸ್ಪಶ್ಯ ಮತ್ತು ಅಸ್ಪ್ರಶ್ಯ ಎಂಬ ಪದ ಬಳಕೆ ಸರಿಯಲ್ಲ ಎಂದು ದೂರಿದರು.

ಜಿಲ್ಲಾ ಬಂಜಾರ ಸಮಾಜದ ಪ್ರಮುಖರಾದ ಟಿ.ಮಂಜುನಾಥ್, ಶಶಿಕುಮಾರ್, ಹನುಮಂತನಾಯ್ಕ, ರೇಣುನಾಯ್ಕ, ನಾನ್ಯಾ ನಾಯ್ಕ, ಬಸವರಾಜ್ ನಾಯ್ಕ, ಶಿವಾನಾಯ್ಕ, ನಾಗರಾಜ್ ನಾಯ್ಕ, ಜಿ.ಚಂದ್ರಾನಾಯ್ಕ , ಚಂದ್ರ ಎಸ್.ನಾಯ್ಕ, ಶಶಿನಾಯ್ಕ, ಭೀಮಾ ನಾಯ್ಕ, ನಾಗೇಶ್ ನಾಯ್ಕ ಇತರರಿದ್ದರು.