ನ್ಯೂಸ್

ಒಳಮೀಸಲಾತಿ ಅನುಷ್ಠಾನ ವಿಳಂಬಕ್ಕೆ ಆಕ್ರೋಶ | Minister's house siege tomorrow

ಮೃತ್ಯುಂಜಯ ಕಪಗಲ್

ಬೆಂಗಳೂರು: ಪರಿಶಿಷ್ಟ ಜಾತಿ ಒಳಮೀಸಲಾತಿ ಅನುಷ್ಠಾನ ವಿಳಂಬಕ್ಕೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೊಣೆಗಾರರು ಎಂದು ಒಳಮೀಸಲಾತಿ ಹೋರಾಟಗಾರರು ಆಪಾದಿಸಿ ಸಚಿವರ ಅಧಿಕೃತ ನಿವಾಸಕ್ಕೆ ಶುಕ್ರವಾರ ಮುತ್ತಿಗೆ ಹಾಕಲಿದ್ದಾರೆ.

ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧಿಕೃತ ನಿವಾಸದಲ್ಲಿ ಹೋರಾಟಗಾರರ ಜತೆಗೆ ಗುರುವಾರ ನಡೆದ ಮಾತುಕತೆ ಅಪೂರ್ಣವಾಯಿತು. ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಮುಖಂಡರು ಈ ಮೊದಲ ಕೈಗೊಂಡ ನಿರ್ಧಾರದಂತೆ ಸಚಿವರ ಮನೆಗೆ ಶುಕ್ರವಾರ ಮುತ್ತಿಗೆ ಹಾಕಲಿದ್ದಾರೆ.

ಅಸಮಾಧಾನ

ರಾಜಿಸಂಧಾನದ ಮಾತುಕತೆ ವೇಳೆ ಇಲಾಖೆ ಉನ್ನತಾಧಿಕಾರಿಗಳು ಹಾಜರಿದ್ದು, ನಡವಳಿಯನ್ನು ದಾಖಲಿಸಿಕೊಳ್ಳಬೇಕಾಗಿತ್ತು. ಆದರೆ ಯಾವೊಬ್ಬ ಅಧಿಕಾರಿಗಳಿಲ್ಲದೆ ಸಚಿವರು ಕಾಟಾಚಾರಕ್ಕೆ ಮಾತುಕತೆ ನಡೆಸಿದರು ಎಂದು ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುತ್ತಿಗೆ ಸಂದರ್ಭದಲ್ಲಿ ವ್ಯತ್ಯಾಸಗಳಾದರೆ ಸಚಿವರೇ ಹೊಣೆ ಹೊರಬೇಕಾಗುತ್ತದೆ. ಒಳಮೀಸಲಾತಿ ಅನುಷ್ಠಾನ ವಿಷಯದಲ್ಲಿ ತಮ್ಮ ನಿರ್ಧಾರವನ್ನು ಹೋರಾಟಗಾರರ ಸಮಕ್ಷಮವೇ ತಿಳಿಸಿ ಎಂದು ಸಚಿವರಿಗೆ ತಿಳಿಸಿ, ಮುಖಂಡರು ಹೊರ ಬಂದರು ಎಂದು ಮೂಲಗಳು ತಿಳಿಸಿವೆ.

ಹೋರಾಟಗಾರರು ಚಳವಳಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸಿಎಂ, ಸಚಿವರ ಸೂಚನೆಯಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಗುರುವಾರ ಮೊದಲ ಸುತ್ತಿನ ಮಾತುಕತೆ ನಡೆಸಿದ್ದರು.

ಜಾತಿ ಪ್ರಮಾಣಪತ್ರ ನೀಡುವ ವಿಷಯ ಶೇ.90ರಷ್ಟು ಇತ್ಯರ್ಥವಾದರೂ ಎಕೆ, ಎಎ, ಎಡಿ ಸೇರಿ ಇನ್ನೂ ಕೆಲವು ಸಮಸ್ಯೆಗಳು ಉಳಿದ ಕಾರಣ ಸಚಿವರೊಂದಿಗೆ ಮಾತುಕತೆ ನಡೆಯಿತು.

ತೆಲಂಗಾಣ ಮಾದರಿಗೆ ಬೇಡಿಕೆ

ತೆಲಂಗಾಣ ಮಾದರಿಯಲ್ಲಿ ಎಸ್‌ಸಿ ಒಳಮೀಸಲಾತಿ ಅನುಷ್ಠಾನಕ್ಕೆ ತರಬೇಕು ಎಂದು ಹೋರಾಟಗಾರರು ಬಿಗಿಪಟ್ಟು ಹಿಡಿದಿದ್ದು, ಸಮಾಜ ಕಲ್ಯಾಣ ಸಚಿವರು ಅರೆಮನಸ್ಕತೆಯಿಂದ ವಿಳಂಬವಾಗುತ್ತಿದೆ ಎಂದು ಶಂಕಿಸಿದ್ದಾರೆ.

ನೇಮಕಾತಿ, ಶಿಕ್ಷಣ ಮಾತ್ರವಲ್ಲದೆ ಬ್ಯಾಕ್‌ಲಾಗ್ ಹುದ್ದೆಗಳು, ಬಡ್ತಿಗೂ ಮೀಸಲು ವರ್ಗೀಕರಣ ಅನ್ವಯಿಸಬೇಕು. ಶಾಸನಾತ್ಮಕ ವಿಶೇಷ ಅನುದಾನವು ಎಸ್‌ಸಿ ವರ್ಗೀಕರಣ ಪ್ರಕಾರ ಹಂಚಿಕೆ, ಎಎ, ಎಡಿ, ಎಕೆ ಸಮುದಾಯಗಳು ಮೀಸಲು ಪ್ರಮಾಣಪತ್ರ ವಿತರಣೆಗೆ ಮೇಲ್ವಿಚಾರಣೆ ಸಮಿತಿ ರಚನೆ ಬೇಡಿಕೆಗಳನ್ನು ಸಚಿವರ ಮುಂದಿಡಲಾಗಿದೆ.

ಮಾತುಕತೆಯಲ್ಲಿ ಒಳಮೀಸಲಾತಿ ಹೋರಾಟಗಾರರಾದ ಎಸ್.ಮಾರೆಪ್ಪ, ಬಸವರಾಜ ಕೌತಾಳ, ಅಂಬಣ್ಣ ಅರೋಲಿಕರ್, ಚಂದ್ರಶೇಖರ್, ಮಂಜುನಾಥ್ ಇನ್ನಿತರರು ಇದ್ದರು.