ನ್ಯೂಸ್

ಬೂಸ್ಟರ್ ಡೋಸ್ ಗೆ ಒಲವು; 2ನೇ ಡೋಸ್ ನೀಡಿದ 6 ತಿಂಗಳ ನಂತರ ಪ್ರತಿಕಾಯಗಳ ಕುಸಿತ

Webdesk - Ravikanth

ನವದೆಹಲಿ: ಕರೊನಾ ಲಸಿಕೆಯ ಎರಡನೇ ಡೋಸ್ ನೀಡಿದ ಆರು ತಿಂಗಳ ನಂತರ ಲಸಿಕೆಯ ರಕ್ಷಣಾ ಸಾಮರ್ಥ್ಯ ಕುಂದುತ್ತದೆ. ಪ್ರತಿಕಾಯಗಳು ಸತತವಾಗಿ ಕಡಿಮೆಯಾಗುತ್ತವೆ ಎಂದು ಅಧ್ಯಯನವೊಂದು ಹೇಳಿದೆ. ಹೀಗಾಗಿ ಲಸಿಕೆಯ ಬೂಸ್ಟರ್ ಡೋಸ್ ಅಗತ್ಯವೆಂದು ತಜ್ಞರು ಪ್ರತಿಪಾದಿಸಿದ್ದಾರೆ.

ಫೈಜರ್ ಮತ್ತು ಬಯೋಎನ್ ಟೆಕ್ ನ ಲಸಿಕೆಗಳು ಒದಗಿಸುವ ರೋಗನಿರೋಧಕ ಶಕ್ತಿ (ಇಮ್ಯುನಿಟಿ) ಕೆಲವೇ ತಿಂಗಳಲ್ಲಿ ಗಣನೀಯವಾಗಿ ಕಡಿಮೆಯಾಗುತ್ತದೆ. ಪುರುಷರಲ್ಲಿ ಮಹಿಳೆಯರಿಗಿಂತ ಕಡಿಮೆ ಇಮ್ಯುನಿಟಿ ಇರುತ್ತದೆ ಎಂದು ‘ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ನಲ್ಲಿ ಪ್ರಕಟವಾದ ಸಂಶೋಧನಾ ವರದಿ ಹೇಳಿದೆ. ಸುಮಾರು 5,000 ಇಸ್ರೇಲಿ ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇಮ್ಯುನಿಟಿ ಶಕ್ತಿ ಆರಂಭದಲ್ಲಿ ತೀವ್ರಗತಿಯಲ್ಲಿ ಕುಂದಿ ನಂತರ ಮಧ್ಯಮ ಪ್ರಮಾಣದಲ್ಲಿ ಕಡಿಮೆಯಾಗಿದ್ದು ಅಧ್ಯಯನದಲ್ಲಿ ಕಂಡುಬಂದಿದೆ. ಆಂಟಿಬಾಡಿ ಮಟ್ಟ ಯುವಜನತೆಗಿಂತ ವೃದ್ಧರಲ್ಲಿ ಕಡಿಮೆಯಿರುತ್ತದೆ ಎಂದು ಅಧ್ಯಯನ ಹೇಳಿದೆ.

ಆಕ್ಸಿಜನ್ ಘಟಕಗಳ ಲೋಕಾರ್ಪಣೆ: ಭಾರತ ಶೀಘ್ರವೇ 100 ಕೋಟಿ ಡೋಸ್ ಕರೊನಾ ಲಸಿಕೆ ನೀಡಿಕೆಯ ಮೈಲಿಗಲ್ಲು ದಾಟಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡದ ರಿಷಿಕೇಷದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್್ಸ) ಆವರಣದಲ್ಲಿ ಗುರುವಾರ ಆಮ್ಲಜನಕ ಘಟಕಗಳ ಉದ್ಘಾಟನೆ ಸಮಾರಂಭದಲ್ಲಿ ಮೋದಿ ಈ ವಿಷಯ ಪ್ರಕಟಿಸಿದರು. ಪಿಎಂ ಕೇರ್ಸ್ ನಿಧಿ ನೆರವಿನಿಂದ ದೇಶದಾದ್ಯಂತ ಸ್ಥಾಪಿಸಿರುವ 35 ಘಟಕಗಳನ್ನು ಅವರು ಉದ್ಘಾಟಿಸಿದರು. ಸಾರ್ವಜನಿಕ ಅಧಿಕಾರದಲ್ಲಿ 20 ವರ್ಷ ಪೂರೈಸಿದ ಸಂದರ್ಭದ ಸಂಕೇತವಾಗಿ ಅವರು ಜೀವರಕ್ಷಕ ಅನಿಲದ ಘಟಕಗಳನ್ನು ಲೋಕಾರ್ಪಣೆಗೊಳಿಸಿದರು. ದೇಶದ ಎಲ್ಲ ಜಿಲ್ಲೆಗಳಲ್ಲಿ ಪಿಎಸ್ ಎ ಆಮ್ಲಜನಕ ಸ್ಥಾವರ ಕಾರ್ಯಾರಂಭ ಮಾಡಿದೆ. ಇದುವರೆಗೆ ಒಟ್ಟು 1,224 ಪಿಎಸ್ ಎ ಸ್ಥಾವರಗಳ ಸ್ಥಾಪನೆಗೆ ಪಿಎಂ ಕೇರ್ಸ್ ನೆರವು ಒದಗಿಸಿದೆ. ಆ ಪೈಕಿ ಸುಮಾರು 1,100 ಘಟಕಗಳು ಕಾರ್ಯಾರಂಭಿಸಿದ್ದು, ಪ್ರತಿದಿನ ಒಟ್ಟು 1,750 ಮೆಟ್ರಿಕ್ ಟನ್ ಗೂ ಅಧಿಕ ಆಮ್ಲಜನಕ ಉತ್ಪಾದಿಸುತ್ತಿವೆ.

ಬಿಕ್ಕಟ್ಟು ಅಂತ್ಯ: ಸಮರ್ಪಣಾ ಮನೋಭಾವದ ಕೆಲಸದಿಂದ ಜೀವರಕ್ಷಕ ಆಮ್ಲಜನಕದ ಬಿಕ್ಕಟ್ಟು ಅಂತ್ಯಗೊಂಡಿದೆ ಎಂದು ಮೋದಿ ಹೇಳಿದರು. ಕೋವಿಡ್-19 ಸಾಂಕ್ರಾಮಿಕತೆಯ ಎರಡನೇ ಅಲೆ ವೇಳೆ ವೈದ್ಯಕೀಯ ಆಮ್ಲಜನಕದ ಬಿಕ್ಕಟ್ಟು ಉಲ್ಬಣಿಸಿತ್ತು. ಉತ್ಪಾದನೆಯನ್ನು ಹತ್ತು ಪಟ್ಟು ಅಧಿಕಗೊಳಿಸುವ ಮೂಲಕ ಸಮಸ್ಯೆ ನಿವಾರಿಸಲಾಗಿದೆ. ‘ನಮ್ಮ ಆರೋಗ್ಯ ಕಾರ್ಯಕರ್ತರ ಸಮರ್ಪಿತ ಹಾಗೂ ಕಠಿಣ ಪರಿಶ್ರಮದಿಂದ ಎಲ್ಲ ಅಡೆತಡೆಗಳನ್ನು ನಿವಾರಿಸಲಾಗಿದೆ’ ಎಂದರು.

22,431 ಹೊಸ ಕೇಸ್: ಗುರುವಾರ ದೇಶದಲ್ಲಿ ಕರೊನಾ ಸೋಂಕಿನ 22,431 ಹೊಸ ಕೇಸ್ ಗಳು ದೃಢಪಟ್ಟಿವೆ. 318 ಜನರು ಬಲಿಯಾಗಿದ್ದಾರೆ. ಸೋಂಕಿತರಲ್ಲಿ ಕೇರಳದ ಪಾಲು 12,616 ಆಗಿದೆ.

ವಿದೇಶಿ ಪ್ರವಾಸಿಗರಿಗೆ ಅನುಮತಿ: ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸಲು ನವೆಂಬರ್ ನಿಂದ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನಿಗದಿತ ವಿಮಾನಗಳ ಮೂಲಕ ಆಗಮಿಸುವ ಪ್ರವಾಸಿಗಳಿಗೆ ಅಕ್ಟೋಬರ್ 15ರಿಂದ ವೀಸಾ ನೀಡಲಾಗುವುದೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.

ಫೈಜರ್ ಮನವಿ: 5ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ಕೊಡುವಂತೆ ಫೈಜರ್ ಕಂಪನಿ ಅಮೆರಿಕ ಸರ್ಕಾರವನ್ನು ಕೋರಿದೆ. ಅನುಮತಿ ಸಿಕ್ಕಲ್ಲಿ ಕೆಲವೇ ವಾರಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಿಕೆ ಆರಂಭಿಸಬಹುದು ಎಂದು ಅದು ಹೇಳಿದೆ. ಫೈಜರ್ ಮತ್ತು ಜರ್ಮನಿಯ ಅದರ ಪಾಲುದಾರ ಬಯೋಎನ್ ಟೆಕ್ ಮಕ್ಕಳ ಲಸಿಕೆಯನ್ನು ಅಭಿವೃದ್ಧಿಪಡಿಸಿವೆ.

ಅನಾಥ ಮಕ್ಕಳಿಗೆ ಪಿಎಂ ಕೇರ್ಸ್ ನೆರವು: ಕರೊನಾ ಮಹಾಮಾರಿಯಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ 18 ವರ್ಷ ಆದ ಮೇಲೆ ಪಿಎಂ ಕೇರ್ಸ್ ನಿಧಿಯಿಂದ ಮಾಸಿಕ ಸ್ಟೈಪೆಂಡ್ ಹಾಗೂ 23 ವರ್ಷದವರಾದಾಗ 10 ಲಕ್ಷ ರೂಪಾಯಿ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಈ ಸಂಬಂಧ ವಿಸ್ತ್ರತ ಮಾರ್ಗಸೂಚಿಯನ್ನು ಹೊರಡಿಸಿದೆ. ಸೋಂಕಿನಿಂದ ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ಸಮಗ್ರ ಬೆಂಬಲ ನೀಡುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಈ ವರ್ಷ ಮೇ 29ರಂದು ಘೋಷಿಸಿದ್ದರು. ಮಕ್ಕಳು ದೇಶದ ಭವಿಷ್ಯವಾಗಿದ್ದು ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಸಮಾಜದ ಹೊಣೆಯಾಗಿದೆ ಎಂದವರು ಹೇಳಿದ್ದಾರೆ.

ಏನಿದು ಯೋಜನೆ?

  • ಅನಾಥ ಮಕ್ಕಳಿಗೆ ಆರೋಗ್ಯ ವಿಮೆ ಮೂಲಕ ರಕ್ಷಣೆ ಒದಗಿಸುವುದು.
  • ಉಚಿತ ಶಿಕ್ಷಣದ ಮೂಲಕ ಸಬಲೀಕರಿಸುವುದು.
  • 23 ವರ್ಷ ತುಂಬಿದಾಗ ಸ್ವಾವಲಂಬಿ ಬದುಕು ಸಾಗಿಸಲು ಆರ್ಥಿಕ ಬೆಂಬಲ ಒದಗಿಸುವುದು.
  • ನ್ನತ ಶಿಕ್ಷಣಕ್ಕೆ ಸಾಲ ಒದಗಿಸವುದು. ಪಿಎಂ ಕೇರ್ಸ್ ನಿಧಿಯಿಂದ ಸಾಲದ ಬಡ್ಡಿ ಪಾವತಿ.
  • 18 ವರ್ಷದ ವರೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂಪಾಯಿ ಆರೋಗ್ಯ ವಿಮೆ. ಪಿಎಂ ಕೇರ್ಸ್ ನಿಂದ ಪ್ರೀಮಿಯಂ ಪಾವತಿ.