ಬೆಂಗಳೂರು: ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಜೊತೆಗೆ ಯುವ ಸಮುದಾಯದಲ್ಲಿ ಕೌಶಲಾಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಯೋಜನೆಗಳನ್ನು ರೂಪಿಸುತ್ತಿದೆ( intention of the government to make the state a hub for skill development) ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ(Sharan Prakash Patil) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ಕೈಗಾರಿಕೆ-ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡುವ ನಿಟ್ಟಿನಲ್ಲಿ ಕೈಗಾರಿಕೆ-ಶೈಕ್ಷಣಿಕ ಸಮಾವೇಶ ಆಯೋಜಿಸಲಾಗಿದ್ದು, ಶೈಕ್ಷಣಿಕ-ವೃತ್ತಿಪರ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಬೃಹತ್ ವೇದಿಕೆಯಾಗಿದೆ. ಉದ್ಯೋಗ ಕ್ಷೇತ್ರದಲ್ಲಿನ ಬೇಡಿಕೆಗಳನ್ನು ಪೂರೈಸಲು ಸಹಯೋಗ, ಸಹಭಾಗಿತ್ವ, ನಾವೀನ್ಯತೆ ಮತ್ತು ಕೌಶಲ ಅಭಿವೃದ್ಧಿಯನ್ನು ಉತ್ತೇಜಿಸಲು ಮುಂದಾಗಿದ್ದೇವೆ. ರಾಜ್ಯವನ್ನು ಕೌಶಲ ಅಭಿವೃದ್ಧಿ ಹಬ್ ಮಾಡುವುದೇ ನಮ್ಮ ಧ್ಯೇಯ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಕೌಶಲ ಶಕ್ತಿ ಹೆಚ್ಚಿಸಲು ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಕೈಗಾರಿಕಾ ಮತ್ತು ಉದ್ಯಮ ವಲಯಗಳಲ್ಲಿ ಕೌಶಲಪೂರ್ಣ ಉದ್ಯೋಗಿಗಳ ಅಗತ್ಯತೆಯನ್ನು ಪೂರೈಸಲು 300 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿಯ ಸಂಡೂರಿನಲ್ಲಿ ಕೌಶಲ ಅಕಾಡೆಮಿ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.ಇದಲ್ಲದೆ, ಜಿಟಿಟಿಸಿ ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಕಲಬುರಗಿ (ಗುಲ್ಬರ್ಗ ವಿವಿ ಜತೆ ಒಪ್ಪಂದ), ಕೊಪ್ಪಳದ ತಲಕಲ್ ಮತ್ತು ಮೈಸೂರಿನ ವರುಣಾದಲ್ಲಿ ವಿಶ್ವೇಶ್ವರಯ್ಯ ವಿವಿಯ ಸಹಯೋಗದೊಂದಿಗೆ ಆರಂಭಿಸಲಾಗುವುದು ಎಂದರು.ಸ್ಕಿಲ್ ಲೋಕಲಿ, ವರ್ಕ್ ಗ್ಲೋಬಲಿ
‘ಸ್ಕಿಲ್ ಲೋಕಲಿ, ವರ್ಕ್ ಗ್ಲೋಬಲಿ’ ಎಂಬುದು ನಮ್ಮ ಸರ್ಕಾರದ ಮೂಲ ಮಂತ್ರವಾಗಿದೆ. ರಾಜ್ಯದ ಹಲವೆಡೆ ಜಿಟಿಟಿಸಿ ಸ್ಥಾಪಿಸಲು ನಮ್ಮ ಸರ್ಕಾರ ಸಿದ್ಧತೆ ನಡೆಸಿದೆ. ರಾಜ್ಯದ ಎಲ್ಲೆಡೆಯೂ ಕೌಶಲ ಆಧಾರಿತ ತರಬೇತಿಯನ್ನು ಯುವ ಸಮೂಹಕ್ಕೆ ನೀಡಲಾಗುವುದು ಎಂದು ಸಚಿವರು ವಿವರಿಸಿದರು.
ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ವೈ.ಕೆ.ದಿನೇಶ್ ಕುಮಾರ್ ಮತ್ತು ಉದ್ಯಮಿಗಳು ಉಪಸ್ಥಿತರಿದ್ದರು.
ಇಂಜಿನಿಯಿರಿಂಗ್ ಕಾಲೇಜುಗಳಲ್ಲಿ ಹಾಲಿ ಇರುವ ಪಠ್ಯಕ್ರಮ ಬದಲು ಮಾಡಿ ಕೌಶಲ್ಯಾಧಾರಿತ ಪಠ್ಯಕ್ರಮ ರೂಪಿಸುವಂತೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್(ಎಐಸಿಟಿಇ)ಗೆ ಮನವಿ ಮಾಡಲಾಗಿದೆ. ಹೊಸ ಪಠ್ಯಕ್ರಮದಲ್ಲಿ ಶೇ.60 ಪ್ರಾಯೋಗಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ನಿರುದ್ಯೋಗ ಪ್ರಮಾಣ ಕಡಿಮೆ ಮಾಡಲು ಸಾಧ್ಯ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಹೇಳಿದರು.
* 27 ಜಿಟಿಟಿಸಿ ಕೇಂದ್ರಗಳಲ್ಲಿ ಹೊಸ ಡಿಪ್ಲೊಮಾ ಕಾರ್ಯಕ್ರಮಗಳು
* ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ಸ್-ಸೆಮಿಕಂಡಕ್ಟರ್ ಡೊಮೇನ್‌ನಲ್ಲಿ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ
* ಜರ್ಮನ್ ಚೇಂಬರ್ ಆ್ ಕಾಮರ್ಸ್ ಸಹಯೋಗದೊಂದಿಗೆ ಡಿಪ್ಲೊಮಾ ಮತ್ತು ಬಿಇ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ವಿನಿಮಯ ಕಾರ್ಯಕ್ರಮ
* ಜರ್ಮನ್ ಅಂತರಾಷ್ಟ್ರೀಯ ವಲಸೆ ಕೇಂದ್ರ
* ಉನ್ನತ-ಕೌಶಲ ಮತ್ತು ಮರು-ಕೌಶಲ ತರಬೇತಿ ಯೋಜನೆಗಳು
>ಯುವ ನಿಧಿ ಯೋಜನೆಗೆ 2 ಲಕ್ಷ ಪದವೀಧರರು, ಡಿಪ್ಲೋಮ ಪಡೆದ ನಿರುದ್ಯೋಗಿ ಯುವಕರು ನೋಂದಾಯಿಸಿಕೊಂಡಿದ್ದಾರೆ. ಇವರಿಗೆ ಕೌಶಲ ತರಬೇತಿ ನೀಡಿ ಅವರನ್ನು ಉದ್ಯೋಗಿಗಳನ್ನಾಗಿ ಮಾಡಬೇಕಿದೆ. ಇದಕ್ಕೆ ಖಾಸಗಿ ಕಂಪನಿಗಳು ಕೈಜೋಡಿಸಬೇಕು.
-ಶರಣ ಪ್ರಕಾಶ ಪಾಟೀಲ, ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ.
>ನಿರುದ್ಯೋಗ ನೀಗಿಸಲು ಶಿಕ್ಷಣ ಸಂಸ್ಥೆಗಳು ಕೈಗಾರಿಕೆಗಳ ಜತೆಗೆ ಒಪ್ಪಂದ ಮಾಡಿಕೊಂಡು ಅವರ ಬೇಡಿಕೆಗೆ ಅನುಗುಣವಾಗಿ ಕೋರ್ಸ್‌ಗಳ ಸ್ವರೂಪ ಬದಲು ಮಾಡಬೇಕು. ಅದಕ್ಕಾಗಿ ನಮ್ಮ ಇಲಾಖೆಯು ಒಂದೂವರೆ ವರ್ಷದಲ್ಲಿ 20 ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇಂದು ಕೃತಕ ಬುದ್ಧಿಮತ್ತೆ ಹೆಚ್ಚು ಸುದ್ದಿ ಮಾಡುತ್ತಿದೆ. ಎಲ್ಲ ಕ್ಷೇತ್ರದಲ್ಲೂ ಇದು ಕಾಲಿಟ್ಟಿದೆ. ಹೀಗಾಗಿ ನಾವು ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗಬೇಕಿದೆ.
-ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ.
>ಕೈಗಾರಿಕೆಗಳಲ್ಲಿ ಶೇ.44 ಕೌಶಲ ಭರಿತ ಉದ್ಯೋಗಿಗಳ ಕೊರತೆ ಇದೆ. ಇವಿ ಕಾರು ತಯಾರಿಸುವ ಉದ್ಯೋಗಿಗಳ ಕೊರತೆ ಇದೆ. ಇದಕ್ಕೆ ಕೌಶಲ ಮತ್ತು ಶಿಕ್ಷಣದ ನಡುವೆ ಇರುವ ಕಂದಕವೇ ಕಾರಣ. ಈ ಹಿನ್ನೆಲೆಯಲ್ಲಿ ‘ನಿಪುಣ ಕರ್ನಾಟಕ’ ಎಂಬ ಯೋಜನೆ ಮೂಲಕ ಕಂಪನಿಗಳ ಬೇಡಿಕೆಗೆ ತಕ್ಕಂತೆ ಶಿಕ್ಷಣ ನೀಡುತ್ತಿದ್ದೇವೆ.
-ಪ್ರಿಯಾಂಕ್ ಖರ್ಗೆ, ಐಟಿ, ಬಿಟಿ ಸಚಿವ.