|ವಿಲಾಸ ಮೇಲಗಿರಿ ಬೆಂಗಳೂರು
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕೇವಲ ಜೀವನೋಪಾಯ ಭಾಗವಾಗಿ ಉಳಿದಿಲ್ಲ. ಈ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಭರಪೂರ ಕೊಡುಗೆ ಪ್ರಕಟಿಸುತ್ತಿದೆ. ಗ್ರಾಮೀಣ ಪ್ರದೇಶದ ಅಕುಶಲ ಕರ್ವಿುಗಳನ್ನೂ ಸರ್ಕಾರದ ಯೋಜನೆಯ ಮುಖ್ಯವಾಹಿನಿಗೆ ತರಲು ಅನೇಕ ಆದೇಶಗಳನ್ನು ಹೊರಡಿಸುತ್ತಿದ್ದು, ವಿವಿಧ ವಿಮಾ ಸೌಲಭ್ಯಗಳಡಿ ಸವಲತ್ತು ಕಲ್ಪಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಒಟ್ಟು 75.43 ಲಕ್ಷ ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳಿವೆ. ಈ ಪೈಕಿ 85, 97,807 ಸಕ್ರಿಯ ಕೂಲಿ ಕಾರ್ವಿುಕರಿದ್ದಾರೆ. ಅವರೆಲ್ಲರಿಗೂ ಈ ಯೋಜನೆಯ ಪ್ರಯೋಜನ ದೊರೆಯಲಿದ್ದು, ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಭೂ ಸಂಪನ್ಮೂಲ ಇಲಾಖೆಗಳ ನಿರ್ದೇಶನದಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಯೋಜನೆಯ ಅಗತ್ಯವೇನು?: ಉದ್ಯೋಗಖಾತ್ರಿ ಕೂಲಿ ಕಾರ್ವಿುಕರು ಅನೇಕ ಸಮಸ್ಯೆ ಎದುರಿಸುತ್ತಿದ್ದರು. ಗುಂಪು ಗುಂಪಾಗಿ ಕಾಮಗಾರಿ ಸ್ಥಳಕ್ಕೆ ವಾಹನಗಳಲ್ಲಿ ಬಂದು ಹೋಗುವಾಗ ಅಪಘಾತವಾಗಿ ಅನೇಕರು ಮೃತಪಡುತ್ತಿದ್ದರು. ಮುಳ್ಳು, ಕೊಂಪೆಗಳಲ್ಲಿ ಕೆಲಸ ಮಾಡುವಾಗ ಹಾವು ಕಡಿದು ಸತ್ತವರೂ ಇದ್ದಾರೆ. ತಗ್ಗು ಗುಂಡಿಗಳಲ್ಲಿ ಬಿದ್ದು ಜೀವ ಕಳೆದುಕೊಂಡ ಪ್ರಕರಣಗಳಿಗೇನೂ ಕಮ್ಮಿ ಇಲ್ಲ. ಇಂತಹವರ ನೆರವಿಗೆ ಸರ್ಕಾರ ಧಾವಿಸಿದೆ.
5 ಲಕ್ಷ ರೂ.ವರೆಗೆ ವೈದ್ಯಕೀಯ ಸೌಲಭ್ಯ: ಪ್ರಧಾನ ಮಂತ್ರಿ ಆರೋಗ್ಯ ಯೋಜನೆಯಲ್ಲಿ ನೋಂದಾಯಿತ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅರ್ಹ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ಯಾವುದೇ ಕಂತು ಪಾವತಿಸುವಂತಿಲ್ಲ.
ಗ್ರಾಪಂ ಸಿಬ್ಬಂದಿಗೂ ಲಭ್ಯ: ಜಿಲ್ಲೆ, ತಾಲೂಕು ಪಂಚಾಯಿತಿ ಗ್ರೂಪ್ ಸಿ ಮತ್ತು ಡಿ ನೌಕರರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಅನಿರೀಕ್ಷಿತ ಸಂದರ್ಭಗಳಲ್ಲಿ ಅಪಘಾತಗಳಾದಲ್ಲಿ ಅವರ ಅವಲಂಬಿತ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಈ ವಿಮಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗ್ರಾಪಂ ಬಿಲ್ ಕಲೆಕ್ಟರ್, ಕ್ಲರ್ಕ್, ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್, ವಾಟರ್ ಮೆನ್/ ಪಂಪ್ ಅಪರೇಟರ್/ ಪಂಪ್ ಮೆಕ್ಯಾನಿಕ್, ಜವಾನ ಮತ್ತು ಸ್ವಚ್ಛತಾಗಾರರಿಗೂ ಈ ಸೌಲಭ್ಯ ಕಲ್ಪಿಸಿದೆ.
ಫಲಾನುಭವಿಗಳಿಗೆ ಜಾಗೃತಿ ಅಭಿಯಾನ: ನರೇಗಾ ಫಲಾನುಭವಿಗಳನ್ನು ಈ ಯೋಜನೆ ವ್ಯಾಪ್ತಿಗೆ ತರಲು ಜಾಗೃತಿ ಸಭೆ ನಡೆಸಲಾಗುತ್ತದೆ. ಅದಕ್ಕಾಗಿ ವಾರ್ಡ್ಸಭೆ, ಗ್ರಾಮಸಭೆ, ರೋಜ್ಗಾರ್ ದಿನಾಚರಣೆ, ಐಇಸಿ ಕಾರ್ಯಕ್ರಮಗಳಲ್ಲಿ ಬ್ಯಾನರ್, ಗೋಡೆ ಬರಹ, ಭಿತ್ತಿಪತ್ರಗಳ ಮೂಲಕ ಯೋಜನೆಗಳ ಕುರಿತು ಪ್ರಚುರಪಡಿಸಲು ಎಲ್ಲ ಜಿಪಂ ಸಿಇಒಗಳಿಗೆ ಸೂಚಿಸಲಾಗಿದೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ, ಸುರಕ್ಷಾ ವಿಮೆ ಮತ್ತು ಆರೋಗ್ಯ ವಿಮಾ ಕಂತುಗಳನ್ನು ಸರ್ಕಾರದಿಂದಲೇ ಪಾವತಿಸುವ ಕುರಿತು ಚಿಂತನೆ ನಡೆಸಿದ್ದೇವೆ. ಈ ಮೂರರಲ್ಲಿ ಯಾವ ವಿಮೆಯನ್ನಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯಡಿ ಕೂಲಿ ಕಾರ್ವಿುಕರು ವಾರ್ಷಿಕ -ಠಿ;330 ವಿಮಾ ಕಂತು ಪಾವತಿಸಿ -ಠಿ;2 ಲಕ್ಷ ಜೀವ ವಿಮೆ ಸೌಲಭ್ಯ ಪಡೆಯಬಹುದಾಗಿದೆ. ಗ್ರಾಮೀಣ ಪ್ರದೇಶದ 18ರಿಂದ 50 ವಯೋಮಿತಿಯ ಫಲಾನುಭವಿಗಳಿಗೆ ಸೌಲಭ್ಯ ಲಭ್ಯ.
ಅಪಘಾತ ಸಂದರ್ಭ ಆಪದ್ಬಾಂಧವ: ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ ವಾರ್ಷಿಕ -ಠಿ;12 ವಿಮಾ ಕಂತು ಪಾವತಿಸುವ 18ರಿಂದ 70 ವರ್ಷ ವಯೋಮಾನದ ಫಲಾನುಭವಿಗಳಿಗೆ ಅಪಘಾತ ಸಂದರ್ಭದಲ್ಲಿ 2 ಲಕ್ಷ ರೂ. ವಿಮೆ ಸೌಲಭ್ಯ ದೊರೆಯಲಿದೆ.
ಸರ್ಕಾರವೇ ವಿಮಾ ಕಂತು ಪಾವತಿಸಲಿ: ಅಸಂಘಟಿತ ವಲಯದ ಕೂಲಿ ಕಾರ್ವಿುಕರಿಗೆ ಕಾಯಂ ಕೆಲಸ ಇರುವುದಿಲ್ಲ. ನಿರ್ದಿಷ್ಟ ಆದಾಯ ಇರುವುದಿಲ್ಲ. ಅನೇಕರು ಒಂದೇ ಸ್ಥಳದಲ್ಲಿ ನೆಲೆಸಿರುವುದೂ ಇಲ್ಲ. ಹೊಟ್ಟೆ ಪಾಡಿಗೆ ಒಂದೂರಿನಿಂದ ಇನ್ನೊಂದು ಊರಿಗೆ ವಲಸೆ ಹೋಗುತ್ತಾರೆ. ಅಂತಹ ಕೂಲಿ ಕಾರ್ವಿುಕರು ವಿಮಾ ಕಂತು ಕಟ್ಟಲು ಹೇಗೆ ಸಾಧ್ಯ? ಈ ಷರತ್ತು ತೆಗೆದು ಹಾಕಿ, ಸರ್ಕಾರವೇ ವಿಮಾ ಕಂತು ಪಾವತಿಸಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ ಒತ್ತಾಯಿಸಿದ್ದಾರೆ.