ಬೆಂಗಳೂರು: ಎಚ್.ಡಿ. ಕುಮಾರಸ್ವಾಮಿಯವರು ಬಿಜೆಪಿ ಜತೆ ಹೋಗುವ ಸಲುವಾಗಿ ಮುಸ್ಲಿಂ ಮತ ಕೊಡಲಿಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಇದು ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ ಎಂದು ವಸತಿ ಸಚಿವ ಜಮೀರ್ ಅಹಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು ಮುಸ್ಲಿಂ ಸಮುದಾಯದ ಜತೆ ನಾನು ನಿಂತಿದ್ದೆ ಆದರೆ ಆ ಸಮುದಾಯ ಜೆಡಿಎಸ್ ಜತೆ ನಿಲ್ಲಲಿಲ್ಲ ಎಂದು ಹೇಳುವ ಎಚ್. ಡಿ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಯಾರ ಮತಗಳಿಂದ ಗೆದ್ದರು? ಮುಸ್ಲಿಂ ಸಮುದಾಯ ಮತ ನೀಡಿರದಿದ್ದರೆ ಇವರು ಗೆಲ್ಲುತ್ತಿದ್ದರೆ ಎಂಬುದನ್ನು ಎದೆ ಮುಟ್ಟಿಕೊಂಡು ಹೇಳಲಿ ಎಂದು ಸವಾಲು ಹಾಕಿದರು.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು ದೊಡ್ಡ ಅಂತರದಲ್ಲಿ ಗೆಲ್ಲಲಿಲ್ಲ. ಅಲ್ಲಿ ಮುಸ್ಲಿಂ ಸಮುದಾಯ ಒಟ್ಟಾಗಿ ಮತ ಕೊಟ್ಟಿದ್ದಕ್ಕೆ ಗೆದ್ದಿದ್ದು, ಇಲ್ಲದಿದ್ದರೆ ಸೋಲುತ್ತಿದ್ದರು. ಮುಸ್ಲಿಂ ಸಮುದಾಯ ಜೆಡಿಎಸ್‌ಗೆ ಮತ ಕೊಟ್ಟಿದ್ದಕ್ಕೆ 19 ಸ್ಥಾನ ಬಂದಿದೆ. ಇಲ್ಲದಿದ್ದರೆ 5 ರಿಂದ ಆರು ಸ್ಥಾನ ಬರುತ್ತಿತ್ತು ಎಂದು ಹೇಳಿದ್ದಾರೆ.
ನಾನು ಅಪಾರವಾಗಿ ಗೌರವಿಸುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕೋಮುವಾದಿ ಬಿಜೆಪಿ ವಿರುದ್ಧ ಇದ್ದವರು. ಆದರೆ ಕುಮಾರಸ್ವಾಮಿ ತಮ್ಮ ರಾಜಕಾರಣಕ್ಕೆ ಗೌಡರ ತತ್ವ ಸಿದ್ಧಾಂತ ಬಲಿ ಕೊಟ್ಟಿದ್ದಾರೆ ಎಂದು ದೂರಿದರು.