ನ್ಯೂಸ್

ಸಾಂವಿಧಾನಿಕ ಸಂಸ್ಥೆಗೆ ಅವಮಾನ: ವಿಜಯೇಂದ್ರ | CM DCM must apologize

ಬೆಂಗಳೂರು: ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವಮಾನಿಸಿದ್ದಲ್ಲದೆ, ಜನರಲ್ಲಿ ಅಪನಂಬಿಕೆ ಹುಟ್ಟಿಹಾಕಲು ಪ್ರಯತ್ನಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿ ಮನಸ್ಥಿತಿಯಿಂದ ಕಾಂಗ್ರೆಸ್ ನಾಯಕರು ಇನ್ನೂ ಹೊರ ಬಂದಿಲ್ಲವೆಂದು ಅವರ ಹೇಳಿಕೆಗಳ ತೋರಿಸಿ ಕೊಡುತ್ತವೆ ಎಂದು ಟೀಕಿಸಿದರು.

ಚುನಾವಣಾ ಆಯೋಗವನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪದಲ್ಲಿ ಹತಾಶೆ ಎದ್ದುಕಾಣುತ್ತಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಹಮತ ವ್ಯಕ್ತಪಡಿಸಿರುವುದು ಖಂಡನೀಯ ಎಂದರು.

ಕಾಂಗ್ರೆಸ್ ಗೆದ್ದದ್ದು ಹೇಗೆ ?

ರಾಜ್ಯದ ವಿಧಾನಸಭೆ ಚುನಾವಣೆ 136 ಸೀಟುಗಳನ್ನು ಕಾಂಗ್ರೆಸ್ ಗೆದ್ದದ್ದು, ಸಿದ್ದರಾಮಯ್ಯ ಸಿಎಂ ಹಾಗೂ ಡಿ.ಕೆ.ಶಿವಕುಮಾರ್ ಡಿಸಿಎಂ ಆದದ್ದು ಹೇಗೆ ? ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದದ್ದು ಹೇಗೆ ? ಎಂದು ವಿಜಯೇಂದ್ರ ಪ್ರಶ್ನಿಸಿದರು.

ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿತ್ತೆ ?. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಯಿಟ್ಟರು ಎಂಬ ಗಾದೆ ಮಾತಿದೆ. ಹಾಗಾಗಿದೆ ಇವತ್ತಿನ ಕಾಂಗ್ರೆಸ್ ಪರಿಸ್ಥಿತಿ ಎಂದು ಬಿ.ವೈ.ವಿಜಯೇಂದ್ರ ಚಾಟಿ ಬೀಸಿದರು.

ಮೋದಿ ದಾಖಲೆ

ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ 4078 ದಿನಗಳನ್ನು ಪೂರೈಸಿ ಹೊಸ ದಾಖಲೆ ಬರೆದಿದ್ದಾರೆ. ಸಮರ್ಥ ಆಡಳಿತ, ಉತ್ತಮ ಅಭಿವೃದ್ಧಿ ಕೆಲಸಗಳ ಮೂಲಕ ದೇಶವನ್ನು ಮುನ್ನಡೆಸಿ ಮೂರನೇ ಬಾರಿಗೆ ಪ್ರಧಾನಿಯಾಗಿದ್ದು, ಅದೇ ಪರಿಶ್ರಮ, ಅಭಿವೃದ್ಧಿ, ಸಮರ್ಥ ಆಡಳಿತದೊಂದಿಗೆ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯಲಿದ್ದಾರೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಹಿತರಕ್ಷಣೆಗೆ ಬದ್ಧ

ಮಹದಾಯಿ ವಿಚಾರದಲ್ಲಿ ರಾಜ್ಯದ ಹಿತರಕ್ಷಣೆಗೆ ಬಿಜೆಪಿ ಬದ್ಧವಾಗಿದೆ. ಗೋವಾ ಸಿಎಂ ಹೇಳಿಕೆಗೆ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತ್ಯುತ್ತರಿಸಿದ್ದನ್ನು ಗಮನಿಸಬೇಕು. ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಾರೋಷ ಹೇಳಿಕೆ ನೀಡಿದ್ದು, ಕರ್ನಾಟಕದ ಹಿತಾಸಕ್ತಿಯನ್ನು ಬಲಿಕೊಡಲು ನಾವು ಅವಕಾಶ ಕೊಡುವುದಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಕಾಂಗ್ರೆಸ್ ನಿಂದ ಅಕ್ರಮ ಅನುಮಾನ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಒಂಭತ್ತು ಲೋಕಸಭಾ ಸ್ಥಾನಗಳನ್ನು ಗಳಿಸಿರುವ ಬಗ್ಗೆ ನಮಗೂ ಅನುಮಾನವಿದೆ. ಕಾಂಗ್ರೆಸ್‌ನ ಷಡ್ಯಂತ್ರ ಮೀರಿ ಎನ್‌ಡಿಎ 19 ಸ್ಥಾನಗಳನ್ನು ಗೆದ್ದಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿಕ್ಕೋಡಿ, ದಾವಣಗೆರೆ, ಚಾಮರಾಜನಗರ, ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಅಕ್ರಮ ನಡೆಸಿಯೇ ಗೆದ್ದಿದೆ ಅನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.