ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಬುಡಕ್ಕೆ ಬೆಂಕಿ ಹತ್ತಿದಾಗ ದಲಿತರು ನೆನಪಾಗುತ್ತಾರೆ. ಪ್ರಿಯಾಂಕ್ ಖರ್ಗೆ ಎತ್ತಿರುವ ವಿಚಾರಕ್ಕೆ ಮಾತ್ರ ದಲಿತ ಸಂಘಟನೆಗಳು ಬೆಂಬಲಿಸಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ ರೀತಿಯಲ್ಲೇ ದಲಿತ ಸಂಘರ್ಷ ಸಮಿತಿಯನ್ನು ಪಕ್ಷ ನೋಡುತ್ತದೆ. ಹಲವು ಸಮಸ್ಯೆಗಳ ಪರಿಹಾರಕ್ಕೆ ದಲಿತ ಸಂಘಟನೆಗಳ ಮುಖಂಡರು ಹೋರಾಡುತ್ತಿದ್ದು, ಅದನ್ನು ನಾವು ಗೌರವಿಸುತ್ತೇವೆ ಎಂದರು.
ಆದರೆ ಪ್ರಿಯಾಂಕ್ ಖರ್ಗೆ ದಲಿತ ಸಂಘಟನೆಗಳನ್ನು ಬದಿಗಿಟ್ಟು ತಮಗೆ ಬೇಕಾದ ದಲಿತ ಮುಖಂಡರನ್ನು ಎತ್ತಿ ಕಟ್ಟಿದ್ದಾರೆ. ಯಾವುದೇ ದಲಿತ ಸಂಘಟನೆಗಳು ಪಥಸಂಚಲನ ಮಾಡಿದ್ದಿಲ್ಲ. ಆದರೆ ಈಗ ಪಥಸಂಚಲನದ ಮಾಡುತ್ತೇವೆ ಎನ್ನುತ್ತಿದ್ದಾರೆ. ಇವರು ಯಾವುದಾದರೂ ಧರ್ಮ, ದಲಿತ ಸಮುದಾಯಗಳು ಇಲ್ಲವೇ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಪರವೆ ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
ದಲಿತ ಸಂಘಟನೆಗಳು ಪಥ ಸಂಚಲನ ಮಾಡುವುದಕ್ಕೆ ಖಂಡಿತ ನಮ್ಮ ಬೆಂಬಲವಿದೆ. ಸಂಯಮ, ಶಿಸ್ತು ಸಂಘಟನೆಗಳಲ್ಲಿ ಬರಬೇಕು. ಅದನ್ನು ಅವರು ಮೈಗೂಡಿಸಿಕೊಂಡಿರುವುದು ಸಂತೋಷವಿದೆ. ಆದರೆ ಪಥಸಂಚಲನಕ್ಕೆ ಪೈಪೋಟಿಗೆ ಇಳಿದಿರುವುದು ಏಕೆ ? ಎಂದು ಕೇಳಿದರು.
ಪಥಸಂಚಲನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕಲಬುರ್ಗಿ ಪೀಠ ನೀಡಿದ ಆದೇಶವನ್ನು ಸ್ವಾಗತ ಮಾಡುತ್ತೇವೆ. ದಲಿತ ಸಂಘಟನೆಗಳ ಸಹಕಾರವನ್ನು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ. ದಲಿತರ ಸಮಸ್ಯೆಗೆ ಹೋರಾಟ ಮಾಡಿಲ್ಲ ಎಂದರು.
ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆಯಡಿ ಕಾದಿಟ್ಟ ಅನುದಾನದ ಪೈಕಿ 42 ಸಾವಿರ ಕೋಟಿ ರೂ. ಅನ್ಯ ಯೋಜನೆಗಳಿಗೆ ಬಳಕೆ ಮಾಡುವುದನ್ನು ಪ್ರಿಯಾಂಕ್ ಖರ್ಗೆ ನಿಲ್ಲಿಸಲಿಲ್ಲ. ಎಷ್ಟು ಜನ ದಲಿತ ವಿದ್ಯಾರ್ಥಿಗಳಿಗೆ ನೌಕರಿ ಕೊಡಿಸಿದ್ದಾರೆ, ಗುತ್ತಿಗೆದಾರರನ್ನಾಗಿ ಮಾಡಿದ್ದಾರೆ ? ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ಯಾರನ್ನಾದರೂ ಪ್ರಶ್ನಿಸಲಿ. ಆದರೆ ದೇಶ, ಸಮಾಜಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಂಡು ನೂರು ವರ್ಷ ಪೂರೈಸಿದ ಆರ್‌ಎಸ್‌ಎಸ್‌ನ್ನು ವಿರೋಧಿಸಬಾರದು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.