ಶಿವಮೊಗ್ಗ: ದಶಕದ ಹಿಂದೆ ಆಧಾರ್ ಕಾರ್ಡ್ ಪಡೆದುಕೊಂಡವರು ಪ್ರಸ್ತುತ ವಾಸಸ್ಥಳದ ವಿವರಗಳನ್ನು ತಮ್ಮ ಸಮೀಪದ ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್ ಇಲ್ಲವೇ ಆಧಾರ್ ಸೇವಾ ಕೇಂದ್ರಗಳಲ್ಲಿ ಸಲ್ಲಿಸಿ ಆಧಾರ್ ಕಾರ್ಡ್ ನವೀಕರಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ತಿಳಿಸಿದರು.
ಮಂಗಳವಾರ ಜಿಲ್ಲಾ ಮಟ್ಟದ ಆಧಾರ್ ನೋಂದಣಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಆಧಾರ್ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಿಸಿ 5 ವರ್ಷ ಪೂರೈಸಿರುವ 92,317ಮಕ್ಕಳು ಬಯೋಮೆಟ್ರಿಕ್ ಗುರುತನ್ನು ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು. 15 ವರ್ಷ ಮೇಲ್ಪಟ್ಟ 85,209 ಮಕ್ಕಳು ಆಧಾರ್ ನವೀಕರಿಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ 27,533 ಮಕ್ಕಳು ಇದುವರೆಗೆ ಆಧಾರ್ ನೋಂದಣಿ ಮಾಡಿಸದಿರುವುದನ್ನು ಗುರುತಿಸಲಾಗಿದೆ. ಇಂತಹ ಮಕ್ಕಳ ಪಾಲಕರು ಕೂಡಲೇ ನೋಂದಣಿ ಮಾಡಿಸಬೇಕು. ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಿ ಆಧಾರ್ ನೋಂದಣಿ ಮಾಡಿಸಬಹುದು. ಅದಕ್ಕಾಗಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಶೇ.26.03ರಷ್ಟು ಮಕ್ಕಳು ನೋಂದಾಯಿಸಿರುವ ಹೆಸರು, ವಿಳಾಸ, ಮೊಬೈಲ್ ನಂಬರ್‌ಗಳಲ್ಲಿ ವ್ಯತ್ಯಾಸವಿದೆ. ಅವುಗಳನ್ನು ಸರಿಪಡಿಸಿಕೊಳ್ಳಬೇಕು. ಇನ್ನೊಂದು ವರ್ಷದೊಳಗಾಗಿ ಆಧಾರ್ ನೋಂದಣಿ, ನವೀಕರಣ ಕಾರ್ಯ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಶಾಲಾ ಮಕ್ಕಳ ಆಧಾರ್ ನೋಂದಣಿಯಿಂದ ಶೈಕ್ಷಣಿಕ ಚಟುವಟಿಕೆ, ಸಿಇಟಿ ಮತ್ತಿತರ ಪ್ರವೇಶ ಪರೀಕ್ಷೆಗಳಿಗೆ, ವಿದ್ಯಾರ್ಥಿ ವೇತನ ಪಡೆಯಲು ಅನುಕೂಲವಾಗಲಿದೆ. ಯಾವುದೇ ಆಧಾರ್ ಕೇಂದ್ರವು ಅನಧಿಕೃತವಾಗಿದ್ದರೆ, ಅಲ್ಲಿ ವಂಚನೆ ನಡೆಸುತ್ತಿದ್ದರೆ, ಅಕ್ರಮ ವಲಸಿಗರು ಆಧಾರ್ ಪಡೆಯಲು ಪ್ರಯತ್ನಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.