ಬೆಂಗಳೂರು: ಸರ್ಕಾರಿ ನೌಕರರ ಹಾಗೂ ಅವರ ಕುಟುಂಬದ ಸದಸ್ಯರ ಆಸ್ತಿ-ಹೊಣೆಗಾರಿಕೆಗೆ ಸಂಬಂಧಿಸಿದ ಮಾಹಿತಿ-ವಿವರಗಳನ್ನು ಲೋಕಾಯುಕ್ತದ ಸಕ್ಷಮ ಅಧಿಕಾರಿಗಳು ಕೋರಿದ ಸಂದರ್ಭದಲ್ಲಿ ವಿಳಂಬವಿಲ್ಲದೆ ಒದಗಿಸುವಂತೆ(Instructions to provide details of assets and liabilities of government employees) ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೂಚಿಸಿದೆ.
ಅನೇಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡದೇ ಇರುವ ಬಗ್ಗೆ ಕರ್ನಾಟಕ ಲೋಕಾಯುಕ್ತರು ಗಮನ ಸೆಳೆದಿದ್ದು, ಇಂತಹ ಮಾಹಿತಿಯನ್ನು ಜಾಲತಾಣದಲ್ಲಿ ಪ್ರಕಟಿಸುವಂತೆ ನಿರ್ದೇಶನ ನೀಡಿದ್ದಾರೆ.
ಪ್ರತಿಯೊಬ್ಬ ಸರ್ಕಾರಿ ನೌಕರನು ಸರ್ಕಾರಿ ಸೇವೆಗೆ ಸೇರುವಾಗ ಹಾಗೂ ತರುವಾಯ ಪ್ರತಿ ವರ್ಷ ಆತನ ಹಾಗೂ ಆತನ ಕುಟುಂಬದ ಸದಸ್ಯರ ಆಸ್ತಿ ಹೊಣೆಗಾರಿಕೆ ಪಟ್ಟಿಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಹಾಗೂ ಅವರ ಕುಟುಂಬದ ಸದಸ್ಯರ ಆಸ್ತಿ-ಹೊಣೆಗಾರಿಕೆಗೆ ಸಂಬಂಧಿಸಿದ ಮಾಹಿತಿ, ವಿವರಗಳನ್ನು ಲೋಕಾಯುಕ್ತದ ಸಕ್ಷಮ ಅಧಿಕಾರಿಗಳು ಕೋರಿದ ಸಂದರ್ಭದಲ್ಲಿ ಅವುಗಳನ್ನು ಯಾವುದೇ ವಿಳಂಬವಿಲ್ಲದೆ ಅವರಿಗೆ ಒದಗಿಸುವಂತೆ ಎಲ್ಲ ಇಲಾಖೆ ಮುಖ್ಯಸ್ಥರಿಗೆ ಹಾಗೂ ಸಕ್ಷಮ ಪ್ರಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈ ಸೂಚನೆ ಪಾಲಿಸುವಲ್ಲಿ ವಿಲರಾದ ಇಲಾಖೆ ಮುಖ್ಯಸ್ಥರು ಹಾಗೂ ಸಕ್ಷಮ ಪ್ರಾಧಿಕಾರಗಳನ್ನು ನೇರ ಹೊಣೆಗಾರರನ್ನಾಗಿ ಪರಿಗಣಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಇರುವಂತೆ ಕೇವಲ ಆರೋಪಿತ ಭ್ರಷ್ಟ ಅಧಿಕಾರಿ/ನೌಕರರ ಆಸ್ತಿ-ಹೊಣೆಗಾರಿಕೆ ವಿವರಗಳನ್ನು ಲೋಕಾಯುಕ್ತ ಹಾಗೂ ಇನ್ನಿತರ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಕೇಳಿದಾಗ ಇಲಾಖೆ ಮುಖ್ಯಸ್ಥರು ಒದಗಿಸುವ ವ್ಯವಸ್ಥೆಯನ್ನು ಮುಂದುವರಿಸಬೇಕು. ಒಂದು ವೇಳೆ ಸಚಿವಾಲಯದ ಅಧಿಕಾರಿ/ನೌಕರರ ಆಸ್ತಿ ಹೊಣೆಗಾರಿಕೆ ವಿವರಗಳನ್ನು ಸಾರ್ವಜನಿಕವಾಗಿ ಜಾಲತಾಣಗಳಲ್ಲಿ ಬಹಿರಂಘಗೊಳಿಸಿದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು.
-ರಮೇಶ್ ಸಂಗಾ, ಅಧ್ಯಕ್ಷರು, ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘ.