ನ್ಯೂಸ್

ನೆಫ್ರೋ ಯುರಾಲಜಿ ಅವ್ಯವಸ್ಥೆ ಸರಿಪಡಿಸಿ: ಸರ್ಕಾರಕ್ಕೆ ಶಂಕರ್ ಗುಹಾ ದ್ವಾರಕಾನಾಥ್ ಪತ್ರ

ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫ್ರೋ ಯುರಾಲಜಿ ಸಂಸ್ಥೆಯ ಅವ್ಯವಸ್ಥೆ ಒಂದೊಂದಾಗಿ ಹೊರಬೀಳುತ್ತಿದ್ದು, ರೋಗಿಗಳು ಚಿಕಿತ್ಸೆಗೆ ತೆರಳಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಸಂಸ್ಥೆಯ ಈ ಅವ್ಯವಸ್ಥೆ ಕುರಿತು ಆಡಳಿತ ಪಕ್ಷದವರೇ ದನಿ ಎತ್ತಿದ್ದಾರೆ.

ಸಂಸ್ಥೆಯಲ್ಲಿ ತಲೆದೂರಿರುವ ಅವ್ಯವಸ್ಥೆ, ಆರೋಗ್ಯ ಸೇವೆಯಲ್ಲಿನ ನಿರ್ಲಕ್ಷ್ಯದಿಂದ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ದೂರು ಆಧರಿಸಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕಾಂಗ್ರೆಸ್ ವಕ್ತಾರ ಡಾ. ಶಂಕರ್ ಗುಹಾ ದ್ವಾರಕನಾಥ್, ಸಂಸ್ಥೆಯ ಅವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯಲ್ಲಿ 20ಕ್ಕೂ ಹೆಚ್ಚು ಮೂತ್ರಪಿಂಡ ಕಸಿ ಶಸಚಿಕಿತ್ಸೆ ನಡೆದಿದ್ದು, ಈ ಪೈಕಿ ಚಿಕಿತ್ಸೆ ಲಿಸದೆ ನಾಲ್ವರು ಮರಣ ಹೊಂದಿದ್ದಾರೆ. ಆರು ಮಂದಿಗೆ ಶಸಚಿಕಿತ್ಸೆ ನಂತರ ಮತ್ತೊಮ್ಮೆ ಕಿಡ್ನಿ ವಿಲಗೊಂಡಿದ್ದು, ಅವರೂ ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಇತ್ತೀಚೆಗಷ್ಟೇ ಕಿಡ್ನಿ ಕಸಿ ಶಸಚಿಕಿತ್ಸೆಗೆ ಒಳಗಾದ 38 ವರ್ಷದ ಮಹಿಳೆಗೆ ಕಸಿ ಮಾಡಲಾಗಿದ್ದ ಕಿಡ್ನಿಯೂ ವಿಲವಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ರೋಗಿಗಳ ಜೀವ ಉಳಿಸಬೇಕಿದ್ದ ಸಂಸ್ಥೆ ಅವರ ಜೀವ ಹಿಂಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

11 ತಿಂಗಳಿಂದ ಕೋಮಾ ಸ್ಥಿತಿಯಲ್ಲಿ ಯುವಕ

ರಾಮನಗರ ಮೂಲದ ರಂಜಿತ್ ರಾಜ್ ಎಂಬ ಯುವಕ ಕಳೆದ ವರ್ಷ ನವೆಂಬರ್‌ನಲ್ಲಿ ಯೂರಿನ್ ಬ್ಲಾಕ್ ಸಮಸ್ಯೆಯಿಂದ ಚಿಕಿತ್ಸೆಗೆ ಬಂದವ 11 ತಿಂಗಳಿಂದ ಐಸಿಯುನಲ್ಲಿದ್ದಾನೆ. ಚಿಕ್ಕದೊಂದು ಶಸಚಿಕಿತ್ಸೆ ಎಂದು ಹೇಳಿ ನಂತರ ಮೂತ್ರನಾಳ ಮರುನಿರ್ಮಾಣ (ರೀಕನ್‌ಸ್ಟ್ರಕ್ಷನ್) ಮಾಡಲು ತೀರ್ಮಾನಿಸಿದ್ದರು. ಈ ಬಗ್ಗೆ ರೋಗಿಯ ಕುಟುಂಬದವರಿಗೆ ತಿಳಿಸದೆ ಶಸಚಿಕಿತ್ಸೆ ನಡೆದ್ದರು. ಅರ್ಧ ಗಂಟೆಯ ಚಿಕಿತ್ಸೆ ಎಂದು ಹೇಳಿ 8 ಗಂಟೆಗಳ ಕಾಲ ಚಿಕಿತ್ಸೆ ನಡೆಸಿದ್ದಾರೆ. ಇಲ್ಲಿಯವರೆಗಿನ ಆಸ್ಪತ್ರೆಯ ವೆಚ್ಚ 1.90 ಲಕ್ಷ ಮೀರಿದೆ. ಇದನ್ನು ಸರಿಪಡಿಸುವವರು ಯಾರು? ಎಂದು ಪ್ರಶ್ನಿಸಿದ್ದಾರೆ.

ಇಂತಹ ಘಟನೆ ನಡೆದ ತಕ್ಷಣ ಕಾನೂನು ಅನ್ವಯ ಆಂತರಿಕ ಸಮಿತಿ ರಚಿಸಿ ಆಡಳಿತ ಮಂಡಳಿ ಮೂಲಕ ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತರಬೇಕಿತ್ತು. ಘಟನೆ ನಡೆದು 11 ತಿಂಗಳಾದರೂ ತನಿಖೆ ನಡೆಸದಿರಲು ಕಾರಣವೇನು? ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಆಸ್ಪತ್ರೆಗೆ ಭೇಟಿ ನೀಡಿದಾಗಲೂ ಈ ವಿಚಾರ ಅವರ ಗಮನಕ್ಕೂ ಬಂದಿಲ್ಲ. ಈ ಕುರಿತು ಮುಖ್ಯಮಂತ್ರಿಗಳು ಶೀಘ್ರ ಗಮನ ಹರಿಸಿ ರಂಜಿತ್ ರಾಜ್ ಕುಟುಂಬಕ್ಕೆ ಪರಿಹಾರ ಒದಗಿಸಲು ಕ್ರಮವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸಂಸ್ಥೆಗೆ ಹೊಸ ಆಡಳಿತಾಧಿಕಾರಿಯನ್ನು ನೇಮಿಸಿ ಸಂಸ್ಥೆಯ ಅವ್ಯವಸ್ಥೆಯನ್ನು ಸರಿಪಡಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಕ್ರಮ ವಹಿಸಬೇಕು ಎಂದು ಡಾ. ಶಂಕರ್ ಗುಹಾ ಕೋರಿದ್ದಾರೆ.