ಸೊರಬದ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಹಿತ್ಯ ರಚನಾ ಕಮ್ಮಟನ್ನು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಉದ್ಘಾಟಿಸಿದರು. ಸಿ.ಸಿಲ್ವಿಯಾ ಸಿಕ್ವೇರಾ, ಆರ್.ಪುಷ್ಪಾ, ಸಂಜೀವ್‌ಕುಮಾರ್, ರವಿಕುಮಾರ್ ಇತರರಿದ್ದರು. 
ನ್ಯೂಸ್

ಮಕ್ಕಳಿಗೆ ಶಾಲಾ ಹಂತದಲ್ಲೇ ಸಾಹಿತ್ಯ ಆಸಕ್ತಿ ಮೂಡಿಸಿ

ಸೊರಬ: ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಸಾಹಿತ್ಯದ ಆಸಕ್ತಿ ಮೂಡಿಸಬೇಕು. ಸ್ಪಷ್ಟವಾಗಿ ಓದುವ, ಬರೆಯುವ ಮತ್ತು ಮಾತನಾಡುವ ಹವ್ಯಾಸ ಬೆಳೆಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.

ಪಟ್ಟಣದ ಹಳೇ ಸೊರಬದ ಅಮರಜ್ಯೋತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶಿಕ್ಷಣ ಇಲಾಖೆಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಾಹಿತ್ಯ ರಚನಾ ಕಮ್ಮಟ ಉದ್ಘಾಟಿಸಿ ಮಾತನಾಡಿದರು.

ಶೈಕ್ಷಣಿಕ ಬದುಕು ಮಾತೃಭಾಷೆಯಿಂದ ಆರಂಭವಾಗಬೇಕು. ಮಕ್ಕಳಿಗಾಗಿ ಶಾಲೆಗಳಲ್ಲಿ ಕಮ್ಮಟ ಹಮ್ಮಿಕೊಳ್ಳುತ್ತಿದ್ದು, ಬರೆಯುವ ಕಲೆ ಉತ್ತಮ ಆಗಬೇಕೆಂದರೆ ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾವಿದೆ. ಶಾಸೀಯ ಸ್ಥಾನಮಾನ ದೊರೆತಿದೆ. ಭಾಷಾ ಕಲಿಕೆ ಅತ್ಯಂತ ಜವಾಬ್ದಾರಿಯುತವಾಗಿದ್ದು, ರಾಜ್ಯೋತ್ಸವ ಸಂದರ್ಭದಲ್ಲಿ ಸಂಭ್ರಮಿಸಿದರೆ ಸಾಲದು. ಮಕ್ಕಳಿಗೆ ಪಠ್ಯದ ಜತೆಗೆ ಸಾಹಿತ್ಯ ಅಭಿರುಚಿ ಮೂಡಿಸಬೇಕು. ವಿದ್ಯಾರ್ಥಿಗಳು ಸಾಹಿತ್ಯ ರಚಿಸುವ ಪ್ರಯತ್ನ ಮಾಡಬೇಕು. ಡಿ.ಮಂಜುನಾಥ್ ಕಸಾಪ ಜಿಲ್ಲಾಧ್ಯಕ್ಷ

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್ ಮಾತನಾಡಿ, ಸಾಹಿತ್ಯ ಕಮ್ಮಟದಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಸಾಧ್ಯವಾಗುತ್ತದೆ. ಜಿಲ್ಲಾ ಕೇಂದ್ರಕ್ಕೆ ಸೀಮಿತವಾಗಿದ್ದ ಮಕ್ಕಳ ಸಾಹಿತ್ಯ ಸಮ್ಮೇಳನ ತಾಲೂಕು ಕೇಂದ್ರದಲ್ಲಿ ನಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಸಂಘಟನೆಯಿಂದ 400 ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗಿದೆ. ಇಂತಹ ಕಮ್ಮಟಗಳು ನಿರಂತರವಾಗಿ ನಡೆಯಬೇಕು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಎಸ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಡಾ. ಶಾಂತಾರಾಮ್ ಪ್ರಭು, ಅಂಕಣಕಾರ ಬಿ.ಚಂದ್ರೇಗೌ ಅವರು ವಿದ್ಯಾರ್ಥಿಗಳಿಗೆ ಸಾಹಿತ್ಯ ರಚನೆಯ ಮಾಹಿತಿ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪುಷ್ಪಾ, ಕಾಲೇಜಿನ ಪ್ರಾಚಾರ್ಯೆ ಸಿ.ಸಿಲ್ವಿಯಾ ಸಿಕ್ವೇರಾ, ಶಿಕ್ಷಣ ಇಲಾಖೆಯ ಸಂಜೀವಕುಮಾರ್, ರವಿಕುಮಾರ್, ಪ್ರಜ್ವಲ್ ಚಂದ್ರಗುತ್ತಿ, ಜಿ.ಡಿ.ಪ್ರಶಾಂತ್‌ಕುಮಾರ್, ಸುಬ್ರಾಯ ಜಿ. ಹಳ್ಳೇರ್ ಇತರರಿದ್ದರು.