ನ್ಯೂಸ್

ನಗರದಲ್ಲಿ ಸಾವಿರಾರು ಅತ್ಯಾಧುನಿಕ ಸಿಸಿ ಕ್ಯಾಮರಾ ಅಳವಡಿಕೆ: ಜನಸಂಪರ್ಕ ಸಭೆಯಲ್ಲಿ ಬಿ.ದಯಾನಂದ್ ಹೇಳಿಕೆ

ಬೆಂಗಳೂರು: ಉತ್ತಮ ಪೊಲೀಸ್ ವ್ಯವಸ್ಥೆ ಕಲ್ಪಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ನಿರ್ಭಯಾ ಯೋಜನೆಡಿಯಲ್ಲಿ ಸಾವಿರಾರು ಅತ್ಯಾಧುನಿಕ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.

ಮಹದೇವಪುರದ ಎಸ್‌ಎಪಿ ಲ್ಯಾಬ್ಸ್ ಸಭಾಂಗಣದಲ್ಲಿ ಶನಿವಾರ ನಡೆದ ಮಾಸಿಕ ಜನಸಂಪರ್ಕ ದಿವಸ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.

ಈಗಾಗಲೇ ನಗರದದಲ್ಲಿ ನಿರ್ಭಯಾ ಯೋಜನೆ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿದ ೬೬೭ ಕೋಟಿ ರೂ. ವೆಚ್ಚದಲ್ಲಿ ನಗರಾದ್ಯಂತ ಸಿಸಿಕ್ಯಾಮರಾ ಅಳವಡಿಕೆ ಕಾರ್ಯ ನಡೆಯುತ್ತಿದೆ. ಸದ್ಯ ೭೫೦೦ ಸಿಸಿ ಕ್ಯಾಮರಾಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಅದರಿಂದ ಪೊಲೀಸ್ ಇಲಾಖೆಗೂ ಹಾಗೂ ಸಾರ್ವಜನಿಕರಿಗೂ ಉಪಯೋಗವಾಗಲಿದೆ ಎಂದರು.

ಸಭೆಯಲ್ಲಿ ಕೆಲ ಸಾರ್ವಜನಿಕರು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಧೂಮಪಾನ ಸೇವನೆ ಮಾಡುತ್ತಿದ್ದಾರೆ. ಜತೆಗೆ ಸೈಬರ್ ಅಪರಾಧ, ಶಬ್ದ ಮತ್ತು ವಾಯು ಮಾಲಿನ್ಯ, ಮೊಬೈಲ್ ಮತ್ತು ಸರಗಳ್ಳತನ, ವಾಹನ ಕಳ್ಳತನ, ಸಿಸಿ ಕ್ಯಾಮರಾ ಅಳವಡಿಕೆ ಮತ್ತು ಅಕ್ರಮ ವಲಸಿಗರಿಂದ ಸಮಸ್ಯೆ ಹಾಗೂ ಇತರ ವಿಷಯಗಳ ಕುರಿತು ದೂರು ನೀಡಿದರು.

ಇದಕ್ಕೆ ಉತ್ತರಿಸಿದ ಪೊಲೀಸ್ ಆಯುಕ್ತರು, ಪೊಲೀಸ್ ಇಲಾಖೆ ಹೊರತುಪಡಿಸಿ ಇತರೆ ಇಲಾಖೆಗಳಿಗೆ ಒಳಪಡುವ ದೂರುಗಳನ್ನು ಕಾರ್ಯಕ್ರಮದಲ್ಲಿದ್ದ ಬಿಬಿಎಂಪಿ, ಬೆಸ್ಕಾಂ, ಜಲಮಂಡಲಿ, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ಇತರೆ ಇಲಾಖೆಯ ಅಧಿಕಾರಿಗಳಿಗೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಅಪರಾಧ ಜಾಗೃತಿ ಸಲಹೆಗಳ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು. ಜತೆಗೆ ಪೊಲೀಸರ ಅಪರಾಧ ಪತ್ತೆ ಕಾರ್ಯಾಚರಣೆಗೆ ಸಹಕಾರ ನೀಡಿದ ಸಾರ್ವಜನಿಕರಿಗೆ ಪ್ರಶಂಸನಾ ಪತ್ರ ನೀಡಲಾಯಿತು.