ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪಾಲ್ಗೊಂಡಿದ್ದ ಭಕ್ತರು. 
ನ್ಯೂಸ್

ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ, ಮಲೆನಾಡಿನಲ್ಲಿ ಮುಗಿಲುಮುಟ್ಟಿದ ಹರ್ಷ

ಶಿವಮೊಗ್ಗ: ಅಯೋಧ್ಯೇಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸೋಮವಾರ ಸಾಕಾರಗೊಂಡ ಹಿನ್ನೆಲೆಯಲ್ಲಿ ಮಲೆನಾಡು ಶಿವಮೊಗ್ಗದಲ್ಲೂ ಶ್ರೀರಾಮ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಜಿಲ್ಲಾದ್ಯಂತ ಬಹುತೇಕ ಎಲ್ಲ ಗ್ರಾಮ, ನಗರ, ವಾರ್ಡ್‌ಗಳ ಶಿವ, ರಾಮ, ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಶ್ರೀರಾಮನಿಗೆ ಭಕ್ತಿಯ ಪರಾಕಾಷ್ಠೆ ಮೆರೆದರು.

ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ಸೇರಿ ನಾನಾ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ದೇವಸ್ಥಾನಗಳು ಸಾಕ್ಷಿಯಾದವು. ಶ್ರೀರಾಮ ಜಯರಾಮ ಘೋಷಣೆ, ಧ್ಯಾನ, ಆರಾಧನೆ, ಭಜನೆ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು. ಪೂಜೆ ಜತೆಗೆ ಹೋಮ, ಹವನಗಳನ್ನು ನಡೆಸಿದ್ದು ರಾಮನಮ ಜಪ ಎಲ್ಲೆಡೆ ಮೊಳಗಿತು.
ಜಿಲ್ಲೆಯ ಹಲವೆಡೆ ಹಿಂದುಗಳು ಮಾತ್ರವಲ್ಲದೆ ಇತರ ಧರ್ಮೀಯರೂ ರಾಮೋತ್ಸವದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಶ್ರೀರಾಮನ ಪ್ರತಿಷ್ಠಾಪನೆ ಬಳಿಕ ಭಕ್ತರಿಗೆ ಶರಬತ್ತು, ಪ್ರಸಾದ, ಅನ್ನಸಂತರ್ಪಣೆ ನಡೆಯಿತು. ಮಕ್ಕಳು, ಮಹಿಳೆಯರು, ವೃದ್ಧರೂ ರಾಮೋತ್ಸವಕ್ಕೆ ಸಾಕ್ಷಿಯಾದರು. ಎಲ್ಲ ದೇವಸ್ಥಾನಗಳು ಭಕ್ತರಿಂದ ತುಂಬಿದ್ದವು. ಸಂಜೆವರೆಗೂ ನಾನಾ ಪೂಜಾ ವಿಧಿವಿಧಾನಗಳು ನೆರವೇರಿದವು. ಗಲ್ಲಿ ಗಲ್ಲಿಗಳಲ್ಲೂ ಸಿಹಿ ಹಂಚಿ ಸಂಭ್ರಮಿಸಲಾಯಿತು.
ರಾಮನಾಮ ಜಪಯಜ್ಞ ಸಮಿತಿಯಿಂದ ಶ್ರೀರಾಮ ಜಪ, ಧ್ಯಾನ ಭಜನೆ, ಆರಾಧನೆ ಹಾಗೂ ಶಾಲಾ, ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆ ನಡೆಸಲಾಯಿತು. 108 ಬಾರಿ ಶ್ರೀರಾಮ ಜಯರಾಮ ಜಯ ಜಯ ರಾಮ ಮಹಾಮಂತ್ರ ಪಠಣ ಮಾಡಲಾಯಿತು. ಶಾಲಾ, ಕಾಲೇಜುಗಳಲ್ಲಿ ಶ್ರೀರಾಮನ ಕುರಿತಂತೆ ರಸಪ್ರಶ್ನೆ, ಭಕ್ತಿ ಗೀತೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಭಜನಾ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.
ಜಿಲ್ಲೆಯ ಎಲ್ಲ ಮುಜರಾಯಿ ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಶ್ರೀರಾಮನ ಪ್ರತಿಷ್ಠಾಪನೆಯನ್ನು ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರಮುಖವಾಗಿ ಶಿವಮೊಗ್ಗ ಬಿ.ಎಚ್.ರಸ್ತೆಯ ಮೈಲಾರೇಶ್ವರ ದೇವಸ್ಥಾನ, ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ಉಷಾ ನರ್ಸಿಂಗ್ ಹೋಮ್ ಹೊರಭಾಗ, ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ದೊಡ್ಡ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿದ್ದರಿಂದ ಸಾವಿರಾರು ಭಕ್ತರು ಮೂರ್ತಿ ಪ್ರತಿಷ್ಠಾಪನೆಯನ್ನು ನೇರವಾಗಿ ವೀಕ್ಷಿಸಿದರು.