ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್ ಮತ್ತು ಕಾರ್ಯಾಚರಣೆಯ ನಿಖರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅನುಮೋದನೆಯೊಂದಿಗೆ ರನ್‌ವೇ 24 ಕ್ಕಾಗಿ ಪ್ರೆಸಿಶನ್ ಅಪ್ರೋಚ್ ಲೈಟಿಂಗ್ ಕ್ಯಾಟಗರಿ-1 ವ್ಯವಸ್ಥೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ.  
ನ್ಯೂಸ್

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕ್ಯಾಟ್-1 ಲೈಟಿಂಗ್ ಸಿಸ್ಟಮ್ ಅಳವಡಿಕೆ

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್ ಮತ್ತು ಕಾರ್ಯಾಚರಣೆಯ ನಿಖರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅನುಮೋದನೆಯೊಂದಿಗೆ ರನ್‌ವೇ 24 ಕ್ಕಾಗಿ ಪ್ರೆಸಿಶನ್ ಅಪ್ರೋಚ್ ಲೈಟಿಂಗ್ ಕ್ಯಾಟಗರಿ-1 ವ್ಯವಸ್ಥೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ.
ಟೇಬಲ್‌ಟಾಪ್ ರನ್‌ವೇ ಹೊಂದಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ, ಮಳೆ, ಮಂಜು ಅಥವಾ ಧೂಳಿನ ಕಾರಣದಿಂದಾಗಿ ದೃಷ್ಟಿ ಗೋಚರತೆ ಕಡಿಮೆಯಾದಾಗ ಪೈಲಟ್‌ಗಳಿಗೆ ರನ್‌ವೇ ಸ್ಪಷ್ಟವಾಗಿ ಕಾಣುವಂತೆ ಮಾಡಲು ಈ ಅತ್ಯಾಧುನಿಕ ದೀಪಗಳ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಭಾರತದಲ್ಲೇ ಮೊದಲ ಹಾಗೂ ಏಷ್ಯಾದಲ್ಲೇ ಎರಡನೇ ಅತ್ಯಂತ ವಿಶಿಷ್ಟವಾದ ಏರ್‌ಫೀಲ್ಡ್ ಲೈಟಿಂಗ್ ಯೋಜನೆಯಾಗಿದೆ. ರನ್‌ವೇಯಿಂದ ಹೊರಕ್ಕೆ 900 ಮೀಟರ್ ಉದ್ದದವರೆಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ 17 ಲ್ಯಾಟ್ಟಿಸ್ ಗೋಪುರಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಕೆಲವು ಗೋಪುರಗಳು ಐತಿಹಾಸಿಕ ಕುತುಬ್ ಮಿನಾರ್‌ಗಿಂತಲೂ ಎತ್ತರವಾಗಿದ್ದು, ತಾಂತ್ರಿಕವಾಗಿ ಅತ್ಯಂತ ಸಂಕೀರ್ಣವಾದ ಯೋಜನೆಯಾಗಿದೆ. ಪ್ರತಿಯೊಂದು ಗೋಪುರವು 4 ದೀಪಗಳು ಮತ್ತು ಮಧ್ಯದಲ್ಲಿ ಮಿನುಗುವ ದೀಪದ ವ್ಯವಸ್ಥೆಯನ್ನು ಒಳಗೊಂಡಿದೆ. ಇವುಗಳ ನಿರ್ವಹಣೆಯನ್ನು ಸುಲಭಗೊಳಿಸಲು, ದೀಪಗಳಿರುವ ಭಾಗವನ್ನು ನೆಲದ ಮಟ್ಟಕ್ಕೆ ಕೆಳಗಿಳಿಸುವ ವಿಶಿಷ್ಟ ತಂತ್ರಜ್ಞಾನ ಇಲ್ಲಿದೆ.
ಈ ನೂತನ ವ್ಯವಸ್ಥೆಯಿಂದಾಗಿ ಮಳೆಗಾಲದಲ್ಲೂ ಪೈಲಟ್‌ಗಳಿಗೆ ರನ್‌ವೇ ಮಧ್ಯದ ರೇಖೆ ಸ್ಪಷ್ಟವಾಗಿ ಗೋಚರಿಸಲಿದ್ದು, ವಿಮಾನಗಳು ಹಾದಿ ತಪ್ಪುವುದು ಅಥವಾ ಬೇರೆಡೆಗೆ ಡೈವರ್ಟ್ ಆಗುವುದು ಗಣನೀಯವಾಗಿ ತಪ್ಪಲಿದೆ. ಈ ಮೂಲಕ ಮಂಗಳೂರು ವಿಮಾನ ನಿಲ್ದಾಣವು ದೇಶದ ಅತ್ಯಂತ ಸುರಕ್ಷಿತ ಟೇಬಲ್‌ಟಾಪ್ ವಿಮಾನ ನಿಲ್ದಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ.