ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕ ದಿನೇಶ್ಚಂದ್ರ ಅಜಿಲ ಅಸಮಾಧಾನ ವ್ಯಕ್ತಪಡಿಸಿದರು. ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ಕೆ., ಕಾವೂರು ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಲೋಹಿತ್ ಮೊದಲಾದವರಿದ್ದರು.
- ಮೆಸ್ಕಾಂ ಕುಂದುಕೊರತೆ ಸಭೆಯಲ್ಲಿ ಒತ್ತಾಯ
- ಸಮಸ್ಯೆ ಪರಿಹಾರಕ್ಕೆ ಆಗ್ರಹ
ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಮೆಸ್ಕಾಂ ಮೂಲ್ಕಿ ವಿಭಾಗದ ಗ್ರಾಹಕರ ಕುಂದುಕೊರತೆ, ಅಹವಾಲು ಸ್ವೀಕಾರ ಕಾರ್ನಾಡು ಮೆಸ್ಕಾಂ ಕಚೇರಿಯಲ್ಲಿ ಜರುಗಿತು.
ಗ್ರಾಹಕ ಈಶ್ವರ ಕರಿತೋಟ ಮಾತನಾಡಿ, ಹಳೆಯಂಗಡಿಯ ಕರಿತೋಟ ಪ್ರದೇಶದಲ್ಲಿ ಹೈಟೆನ್ಷನ್ ವಿದ್ಯುತ್ ಕಂಬಗಳ ತಂತಿಗಳಿಗೆ ಮರದ ಬಳ್ಳಿಗಳು ಹಿಡಿದು ಮುಂಬರುವ ಮಳೆಯ ಸಂದರ್ಭ ಪ್ರಾಣಾಪಾಯಕಾರಿಯಾಗಿ ಪರಿಣಮಿಸಿದೆ. ಈ ಭಾಗದಲ್ಲಿ ವಿದ್ಯುತ್ ವಯರ್ ಜೋಲಾಡುತ್ತಿದ್ದು, ಅನೇಕ ವಿದ್ಯುತ್ ಕಂಬಗಳು ಬೀಳುವ ಸ್ಥಿತಿಯಲ್ಲಿ ಇದೆ. ಕೂಡಲೇ ಹೆಚ್ಚುವರಿ ವಿದ್ಯುತ್ ಕಂಬಗಳನ್ನು ಹಾಕುವುದರ ಜತೆಗೆ ಟ್ರೀ ಕಟ್ಟಿಂಗ್ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ನಾಡು ಪೇಟೆಯಿಂದ ಕಾರ್ನಾಡು ಬೈಪಾಸ್‌ವರೆಗೆ ವಿದ್ಯುತ್ ತಂತಿಗಳಿಗೆ ತಾಗಿಕೊಂಡು ಅಪಾಯಕಾರಿ ಮರಗಳಿದ್ದು ತೆರವುಗೊಳಿಸಬೇಕು. ಮುಂದಿನ ಮಳೆಗಾಲಕ್ಕೆ ಪೂರ್ವಸಿದ್ಧತೆಯಾಗಿ ಎಲ್ಲ ವ್ಯವಸ್ಥೆ ನಡೆಸಬೇಕು. ಕಾರ್ನಾಡ್ ಬೈಪಾಸ್ ಬಳಿ ಎರಡು ವಿದ್ಯುತ್ ಪರಿವರ್ತಕಗಳಿಂದ ಬೆಂಕಿಯ ಕಿಡಿ ಬರುತ್ತಿದ್ದು, ಸಮೀಪದಲ್ಲಿ ಬಸ್ ತಂಗುದಾಣ ಕೂಡ ಇದ್ದು ಅಪಾಯಕಾರಿಯಾಗಿದೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಸ್ಥಳೀಯರಾದ ಉದಯಕುಮಾರ್ ಶೆಟ್ಟಿ ಒತ್ತಾಯಿಸಿದರು.
ಗ್ರಾಹಕ ಸಾಧು ಅಂಚನ್ ಮಟ್ಟು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಂಬಕ್ಕೆ ತಾಗಿಕೊಂಡು ಹಲವಾರು ಅಪಾಯಕಾರಿ ಮರಗಳಿದ್ದು ತೆರವುಗೊಳಿಸಬೇಕು ಎಂದರು.
ಕಾರ್ನಾಡ್ ದರ್ಗಾ ರಸ್ತೆಯ ಪರಿಸರದಲ್ಲಿ ಪ್ರತಿಬಾರಿ ಅನಿಯಮಿತ ವಿದ್ಯುತ್ ಕಡಿತವಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಮುಖಾಂತರ ಕರೆ ಮಾಡಿದರೆ ಮಾತ್ರ ಸರಿಯಾಗುತ್ತದೆ ಎಂದು ಜೇಮ್ಸ್ ಡಿಸೋಜ ದೂರಿದರು.
ಮೆಸ್ಕಾಂ ಬಿಲ್ ಕಲೆಕ್ಟರ್ ಸರಿಯಾದ ಸಮಯಕ್ಕೆ ಬಿಲ್ ನೀಡಲು ಮನೆ ಮನೆಗೆ ಭೇಟಿ ನೀಡುತ್ತಿಲ್ಲ. ಇದರಿಂದ ಸರ್ಕಾರದ ಉಚಿತ ವಿದ್ಯುತ್ ಲಾನುಭವಿಗಳಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂತು. ಚಿತ್ರಾಪು ಪರಿಸರದ ಗದ್ದೆಯಲ್ಲಿ ವಿದ್ಯುತ್ ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿ ವಾಲಿದ್ದು ಕೂಡಲೇ ಸರಿಪಡಿಸಬೇಕು ಎಂದು ಕೃಷಿಕ ಬಾಲಚಂದ್ರ ಸನಿಲ್ ಒತ್ತಾಯಿಸಿದರು.
ಪಂಜಿನಡ್ಕ ಬಳಿ ತಮ್ಮ ಕೃಷಿ ಜಾಗದಲ್ಲಿ ಹಾದು ಹೋಗುವ ಹೈಟೆನ್ಷನ್ ವಿದ್ಯುತ್ ತಂತಿ ಬಗ್ಗೆ ತಾವು ಅನೇಕ ಸಲ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಿನೇಶ್ಚಂದ್ರ ಅಜಿಲ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಹಕರಾದ ರವೀಶ್ ಕಾಮತ್, ಅಶೋಕ್ ಜನನಿ ಮತ್ತಿತರರು ಮಾತನಾಡಿದರು. ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ಕೆ., ಕಾವೂರು ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ಲೋಹಿತ್, ಮೂಲ್ಕಿ ಮೆಸ್ಕಾಂ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಕೃಷ್ಣ ಐತಾಳ್, ತಾಂತ್ರಿಕ ವಿಭಾಗ ಸಹಾಯಕ ಇಂಜಿನಿಯರ್ ಉಪೇಂದ್ರನಾಥ ಕೆಯು, ಮೂಲ್ಕಿ ತಾಲೂಕು ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಧರ್ಮಾನಂದ ಶೆಟ್ಟಿಗಾರ್, ಮೆಸ್ಕಾಂ ಮೂಲ್ಕಿ ವಿಭಾಗದ ಎಸ್‌ಒ ಕೃಷ್ಣಪ್ಪ ಮತ್ತಿತರರು ಗ್ರಾಹಕರ ಪ್ರಶ್ನೆಗೆ ಉತ್ತರಿಸಿದರು.
ಗ್ರಾಹಕರಿಗೆ ಬಿಲ್ ಭರಿಸಲು ಸ್ಕ್ಯಾನರ್
ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಪಂ ವ್ಯಾಪ್ತಿಯ ನಡಿಕುದ್ರು ಪ್ರದೇಶಕ್ಕೆ ಹಿಂದೆ ಮೂಲ್ಕಿಯಿಂದ ವಿದ್ಯುತ್ ಸಂಪರ್ಕವಿದ್ದು ಎಲ್ಲವೂ ಸರಿಯಾಗಿತ್ತು. ಇದೀಗ ಹೆಜಮಾಡಿಯಿಂದ ಬರುವ ಸಂಪರ್ಕ ಲೋ ವೋಲ್ಟೇಜ್ ಸಮಸ್ಯೆ ಇದೆ. ಮೂಲ್ಕಿ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಚಂದ್ರಹಾಸ್ ಕೋಟ್ಯಾನ್ ನಡಿಕುದ್ರು ಮನವಿ ಸಲ್ಲಿಸಿದರು. ಮಂಗಳೂರು, ಸುರತ್ಕಲ್‌ನಲ್ಲಿ ಹಣ ಪಾವತಿಗೆ ವಿಶೇಷ ವ್ಯವಸ್ಥೆ ಇದ್ದು ಗ್ರಾಹಕ ಸಹಕಾರಿಯಾಗಿದೆ. ಮೂಲ್ಕಿ ಮೆಸ್ಕಾಂ ಕಚೇರಿಯಲ್ಲಿ ಗ್ರಾಹಕರಿಗೆ ಬಿಲ್ ಭರಿಸಲು ಸ್ಕ್ಯಾನರ್ ಅಳವಡಿಸಬೇಕು ಎಂದು ಗ್ರಾಹಕ ನವೀನ್ ರಾಜ್ ಸಲಹೆ ನೀಡಿದರು.
ಮಳೆಗಾಲದಲ್ಲಿ ಅಪಾಯ
ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿಯಲ್ಲಿ ಅಮೃತ್ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ರಸ್ತೆ, ಮಳೆ ನೀರಿನ ತೋಡು ಅಗೆಯಲಾಗಿದ್ದು, ರಸ್ತೆ ಬದಿಯ ವಿದ್ಯುತ್ ಕಂಬಗಳ ಬುಡದ ಮಣ್ಣು ಸಡಿಲಾಗಿರುವ ಅಪಾಯವಿದೆ. ಇದನ್ನು ಪರಿಶೀಲಿಸಿ ಮುಂದಿನ ಮಳೆಗಾಲದಲ್ಲಿ ಅಪಾಯ ಸಂಭವಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ನಿರ್ಲಕ್ಷ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ವಿರುದ್ಧ ಪೊಲೀಸರಿಗೆ ದೂರು ನೀಡಿ ಎಂದು ನಾಗರಿಕರು ಆಗ್ರಹಿಸಿದರು.