ಸಾಗರ ತಾಲೂಕಿನ ಭೀಮನಕೋಣೆಯಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪದಕ ಗಳಿಸಿದ ಅಂಗವಿಕಲ ಮಕ್ಕಳಾದ ಶರತ್ ಶೆಟ್ಟಿ, ಅನುಷಾ, ಲೀಲಾವತಿ, ತರಬೇತುದಾರರಾದ ಉಮೇಶ್, ಆದರ್ಶ, ಗೀತಾ ಅವರನ್ನು ಸನ್ಮಾನಿಸಲಾಯಿತು.  
ನ್ಯೂಸ್

ಅಂಗವಿಕಲ ಮಕ್ಕಳಿಗೆ ಪ್ರೇರಣೆ ನೀಡಿ

ಸಾಗರ: ಅಗವಿಕಲ ಮಕ್ಕಳ ಆರೈಕೆ, ಅವರ ಶೈಕ್ಷಣಿಕ ಚಟುವಟಿಕೆಗೆ ಪ್ರೇರಣೆ ನೀಡುವುದು ಪುಣ್ಯದ ಕೆಲಸ ಎಂದು ನಗರಸಭೆ ಸದಸ್ಯ ಎಲ್.ಚಂದ್ರಪ್ಪ ಹೇಳಿದರು.

ತಾಲೂಕಿನ ಭೀಮನಕೋಣೆಯಲ್ಲಿ ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ ಸಂಸ್ಥೆಯಿಂದ ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದರು.

ಸಂಸ್ಥೆಯು ವಿಕಲಾಂಗರ ಆಸಕ್ತಿದಾಯಕ ಕ್ಷೇತ್ರವನ್ನು ಗುರುತಿಸಿ ಅವಕಾಶ ನೀಡುತ್ತಿದೆ. ಮಕ್ಕಳಲ್ಲಿರುವ ಕ್ರೀಡಾ, ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ. ಈ ಶಾಲೆಯ ಮಕ್ಕಳು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಷ್ಟ ಮಟ್ಟದಲ್ಲಿ ಮಾಡಿರುವ ಸಾಧನೆ ವಿಶೇಷವಾದುದು ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ ಸಂಸ್ಥೆ ಅಧ್ಯಕ್ಷೆ ಸರಸ್ವತಿ ನಾಗರಾಜ್ ಮಾತನಾಡಿ, ದೈಹಿಕವಾಗಿ ಸರಿ ಇರುವ ಮಕ್ಕಳನ್ನು ನಿಭಾಯಿಸುವುದೇ ಕಷ್ಟವಾಗಿರುವಾಗ ಅಂಗವಿಕಲ ಮಕ್ಕಳಿಗೆ ಶಿಕ್ಷಣ ನೀಡಿ, ಆರೈಕೆ ಮಾಡುತ್ತಿರುವ ಶಿಕ್ಷಕರ ಕಾರ್ಯ ಅನುಕರಣೀಯ. ವಿಕಾಲಂಗ ಮಕ್ಕಳಿಗೆ ಅನುಕಂಪ ತೋರುವುದಕ್ಕಿಂತ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕು. ಪಾಲಕರು ಇಂತಹ ಮಕ್ಕಳನ್ನು ಹೆಚ್ಚು ಮುತುವರ್ಜಿಯಿಂದ ಆರೈಕೆ ಮಾಡಬೇಕು. ಅವರ ಮನಸ್ಸಿಗೆ ನೋವಾಗದಂತೆ ಎಚ್ಚರವಹಿಸಬೇಕು ಎಂದರು.

ನವದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದ ಶರತ್ ಶೆಟ್ಟಿ, ಅನುಷಾ, ಲೀಲಾವತಿ, ತರಬೇತುದಾರರಾದ ಉಮೇಶ್, ಆದರ್ಶ, ಗೀತಾ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥಾಪಕಿ ಶಾಂತಲಾ, ಗಿರೀಶ್ ಗೌಡ, ಶೈಲೇಶ್, ಅಕ್ಷಯಕುಮಾರ್, ನವೀನ್, ಸುರೇಶಕುಮಾರ್, ಪವನ್, ಸಿಂಧುಜಾ, ಮೇಜರ್ ನಾಗರಾಜ್, ವೆಂಕಟೇಶ್ ಇತರರಿದ್ದರು.