ಭದ್ರಾವತಿ: ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಖಾಸಗಿ ಶಾಲೆಗಳ ವ್ಯಾಮೋಹ ಕೈಬಿಡಬೇಕು ಎಂದು ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಹೇಳಿದರು.
ಹಳೇನಗರದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಕ್ರೀಡೆಗಳಲ್ಲೂ ಆಸಕ್ತಿ ಮೂಡಿಸಬೇಕು ಎಂದರು.
ನಗರಸಭಾ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಶಿಕ್ಷಕರೂ ಸೇರಿ ಸರ್ಕಾರಿ ನೌಕರಿಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಡ್ಡಾಯವಾಗಿ ಸೇರಿಸಬೇಕು. ಅಂತಹ ಕಾನೂನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು. ಹಲವಾರು ಕಾನೂನುಗಳನ್ನು ಜಾರಿಗೊಳಿಸಿರುವ ಸರ್ಕಾರ ಈ ಕಾನೂನು ಮರೆತಿರುವುದು ವಿಪರ್ಯಾಸ ಎಂದರು.
ಬಿಇಒ ಎ.ಕೆ.ನಾಗೇಂದ್ರಪ್ಪ ಮಾತನಾಡಿ, ಪಾಲಕರು ಖಾಸಗಿ ಶಾಲೆಗಳಲ್ಲಿ ಸೀಟು ಕೊಡಿಸುವಂತೆ ಶಾಸಕರು ಅಥವಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಶಿಪಾರಸು ಮಾಡಿಸುತ್ತಿರುವ ಪರಿಸ್ಥಿತಿ ಎದುರಾಗಿದೆ. ಇದು ನಿಜಕ್ಕೂ ದುರದೃಷ್ಟಕರ. ಸರ್ಕಾರಿ ಶಾಲೆಗಳ ಮೇಲಿರುವ ಇಂತಹ ಭಾವನೆ ದೂರವಾಗಬೇಕು ಎಂದು ಹೇಳಿದರು.
ಜಿಪಂ ಮುಖ್ಯ ಲೆಕ್ಕಪರಿಶೋಧನಾಧಿಕಾರಿ ಎಚ್.ಟಿ.ರಮೇಶ್, ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ಎಸ್.ಮಣಿಶೇಖರ್, ನಗರಸಭಾ ಸದಸ್ಯೆ ಅನುಪಮಾ ಚನ್ನೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಪಂಚಾಕ್ಷರಿ, ರಾಜ್ಯ ಪರಿಷತ್ ಸದಸ್ಯ ವೆಂಕಟೇಶ್, ಉಮಾ ರುಖಿಯಾ, ಕಂದಾಯಾಧಿಕಾರಿ ಪ್ರಶಾಂತ್ ಇದ್ದರು.