ನ್ಯೂಸ್

SUCCESS STORIES: ಬೇರೆಯವರನ್ನು ಅನುಕರಿಸುವ ತಪ್ಪು ಮಾಡಬಾರದು; ಡಾ.ನೂರುಲ್ ಹುದಾ

ವರ್ಷ.ಎಸ್. ಬೆಂಗಳೂರು

ಸಾಧಿಸಲೇಬೇಕೆಂಬ ಛಲ, ಜ್ಞಾನ ಸಂಪಾದನೆಯೇ ಗುರಿಯಾಗಿದ್ದರೆ ಎಂತಹ ಕಟ್ಟುಪಾಡುಗಳನ್ನು ಬದಿಸರಿಸಿ ಮುನ್ನಗುಬಹುದು ಎಂಬುದನ್ನು ಅರಿತು, ಕಾರ್ಯಪ್ರವೃತ್ತರಾಗಿರುವ ಡಾ.ನೂರುಲ್ ಹುದಾ ಇಂದಿನ ವಿಜಯವಾಣಿ ವಿದ್ಯಾರ್ಥಿ-ಉದ್ಯೋಗ ಮಿತ್ರದ ಸಂಡೇ ಗೆಸ್ಟ್.

ಬೆಂಗಳೂರು: ಸಾಧಿಸಲೇಬೇಕೆಂಬ ಛಲ, ಜ್ಞಾನ ಸಂಪಾದನೆಯೇ ಗುರಿಯಾಗಿದ್ದರೆ ಎಂಥಹ ಕಟ್ಟುಪಾಡುಗಳನ್ನು ಬದಿಸರಿಸಿ ಮುನ್ನಗುಬಹುದು ಎಂಬುದನ್ನು ಅರಿತು, ಕಾರ್ಯಪ್ರವೃತ್ತರಾಗಿರುವ ಡಾ.ನೂರುಲ್ ಹುದಾ ಇಂದಿನ ವಿಜಯವಾಣಿ ವಿದ್ಯಾರ್ಥಿ-ಉದ್ಯೋಗ ಮಿತ್ರದ ಸಂಡೇ ಗೆಸ್ಟ್.

ಹಿನ್ನೆಲೆ

ಡಾ.ನೂರುಲ್ ಹುದಾ, ಮೂಲತ: ದಾವಣಗೆರೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣದವರು. ತಂದೆ ಮೊಹಮ್ಮದ್ ಅಮೀರ್ ಆಜಂ, ತಾಯಿ ರೆಹನಾ ಬೀ. ಶಿವಮೊಗ್ಗದ ಅಲ್ಫಾರು ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಕಸ್ತೂರ ಬಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲೆ ಹಾಗೂ ಪಿಯು ಶಿಕ್ಷಣವನ್ನು, ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿಎ ಪದವಿಯನ್ನು ಪಡೆದಕೊಂಡಿದ್ದಾರೆ. ಕುವೆಂಪು ಯೂನಿವರ್ಸಿಟಿಯಲ್ಲಿ ಇಂಗ್ಲಿಷ್‌ನಲ್ಲಿ ಎಂಎ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.

ಶೈಕ್ಷಣಿಕ ಸಾಧನೆ

ಸಮುದಾಯದಲ್ಲಿ ಶೈಕ್ಷಣಿಕವಾಗಿ ಹೆಣ್ಣು ಮಕ್ಕಳು ಮುಂದುವರಿಯಲು ತೊಡಕುಗಳಿದ್ದು, ಅದನ್ನು ಮೀರಿ ಉನ್ನತ ವ್ಯಾಸಂಗ ಮಾಡಬೇಕೆಂಬ ಆಕಾಂಕ್ಷೆಯಿಂದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಅಧ್ಯಯನಕಾರರಾಗಿದ್ದರು. ಇವರು ಮಂಡಿಸಿದ ‘ಹಿಸ್ಟರಿ, ವುಮೆನ್ ಆ್ಯಂಡ್ ಕಾನ್‌ಫ್ಲಿಕ್ಟ್’ ಎಂಬ ಪ್ರಬಂಧಕ್ಕೆ 2023ರಲ್ಲಿ ಡಾಕ್ಟರ್ ಆಫ್ ಫಿಲಾಸಫಿ(ಪಿಎಚ್‌ಡಿ) ಇನ್ ಇಂಗ್ಲಿಷ್ ಪದವಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಸ್ಪರ್ಧಾ ಪರೀಕ್ಷೆಯೆಡೆಗೆ ಒಲವು

ಸಮಾಜಕ್ಕೆ ಕೊಡುಗೆ ನೀಡಬೇಕು, ಹೆಣ್ಣು ಮಕ್ಕಳಿಗೆ ಮಾದರಿಯಾಗಬೇಕು, ಶಿಕ್ಷಣದ ಮಹತ್ವ ಅರಿತು, ಇತರರಿಗೂ ತಿಳಿಸಬೇಕು ಎಂಬ ಅದಮ್ಯ ಬಯಕೆ ಉನ್ನತವಾದದ್ದನ್ನು ಸಾಧಿಸಲು ಪ್ರೇರೆಪಿಸಿತು. ಅದರಂತೆಯೇ ಸ್ಪರ್ಧಾ ಪರೀಕ್ಷೆಯೆ ಇದಕ್ಕೆ ಸೂಕ್ತ ವೇದಿಕೆ ಎಂಬುದನ್ನು ಮನಗಂಡು ಸ್ಪರ್ಧಾ ಪರೀಕ್ಷೆಯ ಸಿದ್ಧತೆ ಪ್ರಾರಂಭಿಸಿದರು.

3ನೇ ಪ್ರಯತ್ನಕ್ಕೆ ಯಶ

ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸ್ಪರ್ಧಾ ಆಕಾಂಕ್ಷಿಗಳಿಗೆ ಆಯೋಜಿಸುವ ಪರೀಕ್ಷೆಯಲ್ಲಿ 52ನೇ Rank ಪಡೆದಿದ್ದರು. ಈ ಮೂಲಕ ವಿದ್ಯಾರ್ಥಿ ವೇತನ ಪಡೆದು ಹೈದ್ರಾಬಾದ್‌ಗೆ ಯುಪಿಎಸ್ಸಿ ಕೋಚಿಂಗ್‌ಗೆಂದು ತೆರಳಿದ್ದರು. ಐಎಎಸ್ ತಯಾರಿ ಜತೆಗೆ ಕೆಎಎಸ್ ಪರೀಕ್ಷೆಗೂ ಸ್ವಪ್ರಯತ್ನ ನಡೆಸುತ್ತಿದ್ದರು. ಅದರಂತೆಯೇ 2015 ಹಾಗೂ 2017ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಭಾಗವಹಿಸಿ, 3ನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ.

ಪ್ರಸ್ತುತ ಕರ್ತವ್ಯ

2022ರ ಕೆಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 22ನೇ Rank ಬರುವ ಮೂಲಕ ತಹಸೀಲ್ದಾರ್ ಆಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಪ್ರೊಬೇಷನರಿ ಅವಧಿಯಲ್ಲಿದ್ದು, ಮೈಸೂರಿನಲ್ಲಿ ತರಬೇತಿ ಪಡೆಯುತ್ತಿದಾರೆ.

ತಯಾರಿ ಹೇಗಿರಬೇಕು...?

ಆಯ್ಕೆ ಮಾಡಿಕೊಳ್ಳುವ ಪರೀಕ್ಷೆಯ ಕುರಿತು ಸಮಗ್ರ ಮಾಹಿತಿಯಿರಬೇಕು. ಅಡಿಪಾಯ ಭದ್ರವಾಗಿದ್ದಾಗ ಮಾತ್ರ ಪ್ರತಿಹಂತವನ್ನು ಯಶಸ್ವಿಯಾಗಿ ತೇರ್ಗಡೆಗೊಳಿಸಲು ಸಾಧ್ಯ. ನಮ್ಮ ಹಿನ್ನಲೆ, ನಾವಿರುವ ಪರಿಸರದ ವಸ್ತುಸ್ಥಿತಿ ಅರ್ಥಮಾಡಿಕೊಂಡು ಓದಿಗೆ ಸಮಯ ನಿಗದಿಪಡಿಸಬೇಕು. ಬೇರೆಯವರನ್ನು ಅನುಕರಿಸುವ ತಪ್ಪು ಮಾಡಬಾರದು. ಒಮ್ಮೆ ವೇಳಾಪಟ್ಟಿ ರೂಪಿಸಿದರೆ ಅದನ್ನು ಅನುಸರಿಸಲೆಬೇಕು ಎಂಬುದು ಇವರ ತಯಾರಿ ವೈಖರಿ.

ಪ್ಲಾನ್ ‘ಬಿ’

ಸ್ಪರ್ಧಾ ಪರೀಕ್ಷೆ ತೆಗೆದುಕೊಳ್ಳಬೇಕೆಂಬುದು ಪ್ಲಾನ್ ‘ಎ’ ಆದರೆ, ಪಿಎಚ್‌ಡಿ ಅಧ್ಯಯನ ಮಾಡುತ್ತ, ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅಥಿತಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು ಪ್ಲಾನ್ ‘ಬಿ’ಯಾಗಿತ್ತು. ಸ್ಪರ್ಧಾ ಆಕಾಂಕ್ಷಿಗಳು ಒಂದೇ ಯೋಜನೆ ರೂಪಿಸಿ ಅದರಲ್ಲಿ ಯಶಸ್ಸು ಗಳಿಸದೆ, ಕುಗ್ಗುವ ಬದಲು ಮುಂದಾಲೋಚನೆಯಿಂದ ಪರ್ಯಾಯ ಮಾರ್ಗ ಆರಿಸಿಕೊಳ್ಳುವುದು ಸೂಕ್ತ ಎಂಬುದು ನೂರುಲ್ ಅವರ ಅಭಿಪ್ರಾಯ

ಗುರಿ ತಲುಪುವವರೆಗೂ ನಿಲ್ಲದಿರಿ...

ಸ್ವಾಮಿ ವಿವೇಕಾನಂದರು ಹೇಳಿರುವಂತೆ ಎದ್ದೇಳಿ, ಎಚ್ಚರವಾಗಿರಿ, ಗುರಿ ತಲುಪುವವರೆಗೂ ನಿಲ್ಲದಿರಿ. ಹಾರ್ಡ್‌ವರ್ಕ್ ಮತ್ತು ಸ್ಮಾರ್ಟ್‌ವರ್ಕ್ ಎರಡರ ಅರಿವಿರಬೇಕು. ಆದರೆ, ಯಾವುದನ್ನು ಎಲ್ಲಿ ಬಳಸಬೇಕು ಎಂಬುದನ್ನು ತಿಳಿದಿರಬೇಕು.