ನ್ಯೂಸ್

ವಿಜಯನಗರ ಆಳ್ವಿಕೆ ಬೆಂಗಳೂರು ಕಟ್ಟಲು ಸ್ಫೂರ್ತಿ

ಪಿರಿಯಾಪಟ್ಟಣ: ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮತ್ತು ಆಳ್ವಿಕೆ ಕೆಂಪೇಗೌಡರಿಗೆ ಬೆಂಗಳೂರು ಕಟ್ಟಲು ಸ್ಫೂರ್ತಿಯಾಗಿತ್ತು ಎಂದು ಶಾಸಕ ಕೆ.ಮಹ ದೇವ್ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 510ನೇ ಜಯಂತಿಯಲ್ಲಿ ಮಾತನಾಡಿದ ಅವರು, ವಿಜಯನಗರದ ದಸರಾ ಆಚರಣೆ ಸಂದರ್ಭ ಅಲ್ಲಿಗೆ ಭೇಟಿ ನೀಡಿದ್ದ ಕೆಂಪೇಗೌಡ ಅವರು ಅಲ್ಲಿನ ಸಾಮ್ರಾಜ್ಯ ಸ್ಥಾಪನೆ ಮತ್ತು ಆಳ್ವಿಕೆಗೆ ಮನಸೋತಿದ್ದರು. ಪರಿಣಾಮ ಬೆಂಗಳೂರು ಇದೀಗ ದೇಶದಲ್ಲಿಯೇ ಬೆಳವಣಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು.

ರಾಜ್ಯ ಸರ್ಕಾರವು ಇದೀಗ ಅಂದಾಜು 78 ಕೋಟಿ ರೂ.ವೆಚ್ಚದಲ್ಲಿ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಲು ಮುಂದಾಗಿರುವುದು ಸ್ವಾಗತಾರ್ಹ. ಈ ಪ್ರತಿಮೆ ನಿರ್ಮಾಣಗೊಂಡಲ್ಲಿ ರಾಜ್ಯದಲ್ಲಿಯೇ ಮೂರನೇ ಬೃಹತ್ ಪ್ರತಿಮೆ ಯಾಗಲಿದೆ ಎಂದರು.

ತಹಸೀಲ್ದಾರ್ ಶ್ವೇತಾ.ಎನ್. ರವೀಂದ್ರ, ಕಂದಾಯ ನಿರೀಕ್ಷಕ ಪಾಂಡುರಂಗ, ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯೀಕರಣ ಇಲಾಖೆಯ ಎಇಇ ಎಂ.ಶಿವಕುಮಾರ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ದಿನೇಶ್ ಉಪಸ್ಥಿತರಿದ್ದರು.