- ನಾಗವೇಣಿ ಸಂತೋಷ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರ
- ಕನ್ನಡ ಸಿನಿಮಾ ಮೂಲಕ ಹಾಲಿವುಡ್ ಕನಸು
- ಶೀಘ್ರವೇ ಸಿನಿಮಾಕ್ಕೆ ಮುಹೂರ್ತ
ಬೆಂಗಳೂರು: ನಾಗವೇಣಿ ಸಂತೋಷ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರ ‘ಜೀರೋ ಟು ಒನ್’. ಇದೊಂದು ಸ್ಫೂರ್ತಿದಾಯಕ ಕಥೆಯಾಗಿರಲಿದ್ದು, ಜೀವನಕ್ಕೆ ಉಪಯುಕ್ತವಾದ ಅಂಶಗಳು ಇಲ್ಲಿರಲಿವೆ. ಸಂತೋಷ್ ನಿರ್ದೇಶನದ ಜತೆಗೆ ಮುಖ್ಯಭೂಮಿಕೆಯಲ್ಲಿ ನಟಿಸಿ, ಚಿತ್ರವನ್ನು ಸ್ವತಃ ಅವರೇ ನಿರ್ಮಿಸುತ್ತಿದ್ದಾರೆ. ಇನ್ನು ಈ ಚಿತ್ರವು ಕನ್ನಡ, ಇಂಗ್ಲೀಷ್ ಸೇರಿ ಐದು ಭಾಷೆಯಲ್ಲಿ ಚಿತ್ರೀಕರಿಸಲು ಚಿತ್ರತಂಡ ಮುಂದಾಗುತ್ತಿದೆ.
‘ಇದು ನನ್ನ 13 ವರ್ಷಗಳ ಕನಸು. ಅನುಭವಿ ನಿರ್ದೇಶಕರ, ತಂತ್ರಜ್ಞರ ಮಾರ್ಗದರ್ಶನ ಪಡೆದು ಈ ಚಿತ್ರ ಮಾಡುತ್ತಿದ್ದೇವೆ. ಸದ್ಯದಲ್ಲೇ ಮುಹೂರ್ತ ನಡೆಸಿ, ಶೂಟಿಂಗ್ ಆರಂಭಿಸಲಿದ್ದೇವೆ. ಬೆಂಗಳೂರು ಅಲ್ಲದೇ ವಿದೇಶಗಳಲ್ಲಿ ಚಿತ್ರೀಕರಿಸುವ ಯೋಜನೆಯಿದೆ. ಹಾಲಿವುಡ್ ಹಾಗೂ ಬಾಲಿವುಡ್ ನಂತೆ ಸ್ಫೂರ್ತಿದಾಯಕ ಸಿನಿಮಾಗಳು ಕಡಿಮೆಯಾಗುತ್ತಿವೆ ಎಂಬ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಿನಿಮಾ ಜಾಗವನ್ನು ತುಂಬಲಿದೆ ಎಂಬ ಬಲವಾದ ನಂಬಿಕೆಯಿದೆ. ಹಾಲಿವುಡ್ ರೀತಿಯಲ್ಲಿ ಈ ಸಿನಿಮಾ ತರಲು ಪ್ರಯತ್ನಪಡುತ್ತೇನೆ. ಐದು ಭಾಷೆಗಳಲ್ಲಿ ಮೂಡಿಬರುವ ಕಾರಣಕ್ಕಾಗಿ ನುರಿತ ತಂತ್ರಜ್ಱರು, ಕಲಾವಿದರ ಪ್ರೇರಣೆ ಪಡೆದು ಈ ಚಿತ್ರದ ನಿರ್ಮಾಣಕ್ಕೆ ಮುಂದಾಗುತ್ತಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಚಿತ್ರದ ತಂತ್ರಜ್ಱರನ್ನು ಪರಿಚಯಿಸಲಿದ್ದೇವೆ ಎಂದು ನಾಗವೇಣಿ ಸಂತೋಷ್ ಮಾಹಿತಿ ನೀಡಿದರು. ಇಲ್ಲಿ ಸಂತೋಷ್ ಜತೆ ರಕ್ಷಿತಾ ಗೌಡ, ನಿಷಾ ಭಟ್, ಸುಮಾ, ನಕ್ಷತ್ರ, ರಿತ್ವಿಕಾ ಕಲಾ ಬಳಗದಲ್ಲಿದ್ದಾರೆ. ವೆಂಕಟೇಶ ನಾಕಿ ಛಾಯಾಗ್ರಹಣ ಚಿತ್ರಕ್ಕಿದೆ.