ಬೇಲೂರು : ಅನ್ನಭಾಗ್ಯ ಯೋಜನೆ ಉಚಿತ ಪಡಿತರಕ್ಕೆ ಹಣ ವಸೂಲಿ ಮಾಡುತ್ತಿದ್ದಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಶಿರಸ್ತೇದಾರ್ ವೀಣಾ ಮತ್ತು ಇನ್ಸ್‌ಪೆಕ್ಟರ್ ಗೀತಾಂಜಲಿ ಸ್ಥಳ ಪರಿಶೀಲಿಸಿದರು.
ಪಟ್ಟಣದ ಜೆಪಿ ನಗರದಲ್ಲಿರುವ ನ್ಯಾಯಬೆಲೆ ಅಂಗಡಿ 84 ರಲ್ಲಿ ಶನಿವಾರ ಪಡಿತರ ವಿತರಣೆ ಸಂದರ್ಭ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಾನವ ಹಕ್ಕು ಹೋರಾಟಗಾರರ ಒಕ್ಕೂಟದ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಉಚಿತವಾಗಿ ವಿತರಿಸ ಬೇಕಾದ ಪಡಿತರಕ್ಕೆ ನಿರ್ವಾಹಕಿ ಗ್ರಾಹಕರಿಂದ ಹಣ ಪಡೆಯುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು.
ಕ್ರಮ ವಹಿಸುವ ಭರವಸೆ: ಪಡಿತರ ಪಡೆಯಲು 20 ರೂ. ಕೆವೈಸಿ ಮಾಡಿಸಲು 30 ರೂ. ಹಣ ಪಡೆಯುವುದು ತಪ್ಪು. ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಕೊಡುತ್ತಿರುವ ಪಡಿತರ ಪಡೆಯಲು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲೂ ಹಣ ಪಡೆಯುವಂತಿಲ್ಲ. ಅಕ್ರಮವಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿರುವ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಶಿರಸ್ತೇದಾರ್ ವೀಣಾ ಮತ್ತು ಇನ್ಸ್‌ಪೆಕ್ಟರ್ ಗೀತಾಂಜಲಿ ಭರವಸೆ ನೀಡಿದರು. ಸ್ಥಳದಲ್ಲಿದ್ದ ಗ್ರಾಹಕರಿಗೆ ಮಾಲೀಕರಿಂದ ಹಣ ವಾಪಸ್ ಕೊಡಿಸಿದರು.
ಉಗ್ರ ಪ್ರತಿಭಟನೆ ಎಚ್ಚರಿಕೆ: ಮಾನವ ಹಕ್ಕು ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಜಿ.ನಿಂಗರಾಜ್ ಮಾತನಾಡಿ, ನ್ಯಾಯಾಬೆಲೆ ಅಂಗಡಿಯ ನಿರ್ವಾಹಕಿ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಮಿತಿ ತಾಲೂಕು ಅಧ್ಯಕ್ಷ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ, ನಗರ ಕಾರ್ಯದರ್ಶಿ ಕಿರಣ್, ಮುಖಂಡರಾದ ಶಂಕರ್ ಪ್ರಸಾದ್, ದೀಕ್ಷಿತ್, ರವೀಂದ್ರನಾಥ್ ಸೇರಿದಂತೆ ಇತರರಿದ್ದರು.