ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಲಸದೊತ್ತಡದ ನಡುವೆಯೂ ಇನ್‌ಸ್ಪೆಕ್ಟರ್ ಜೆ. ಅಶ್ವತ್ಥಗೌಡ ಎಂಬುವರು 100 ಬಾರಿ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಪ್ರಸ್ತುತ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಆಗಿ ಅಶ್ವತ್ಥ ಗೌಡ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಇವರು, 1997ರ ವಿದ್ಯಾರ್ಥಿ ಜೀವನದಲ್ಲಿ ಎನ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಂದು ರಕ್ತದಾನ ಶುರು ಮಾಡಿದ್ದು, 2003ರಲ್ಲಿ ಸಬ್ ಇನ್‌ಸ್ಪೆಕ್ಟರ್‌ಯಾಗಿ ಇಲಾಖೆಗೆ ಸೇರಿ ಬೆಂಗಳೂರು ನಗರದಲ್ಲಿ ಸೇವೆ ಆರಂಭಿಸಿದ್ದರು. ಲಯನ್ಸ್ ಕ್ಲಬ್ ಆ್ ಸಂಜಯನಗರದೊಂದಿಗೆ ಕೈಜೋಡಿಸಿದ್ದಾರೆ. ಡಿ.22ರ ಭಾನುವಾರ ರಕ್ತದಾನ ಮಾಡುವ ಮೂಲಕ ಶತಕ ಬಾರಿಸಿದ್ದಾರೆ.
ಈ ಕುರಿತು ‘ವಿಜಯವಾಣಿ’ ಜತೆ ಮಾತನಾಡಿದ ಅಶ್ವತ್ಥ ಗೌಡ, ಖರ್ಚು ವೆಚ್ಚ ಇಲ್ಲದೆ ದಾನ ಮಾಡಲು ಅವಕಾಶ ಇರುವುದು ರಕ್ತದಾನಕ್ಕೆ ಮಾತ್ರ. ನಟ ವಿಷ್ಣುವರ್ಧನ್ ಅಭಿನಯದ ಸಿನಿಮಾಗಳಿಂದ ಪ್ರೇರಣೆಗೊಂಡು ಕಾಲೇಜು ವಿದ್ಯಾರ್ಥಿ ಆಗಿದ್ದಾಗಿನಿಂದ ರಕ್ತದಾನದಲ್ಲಿ ತೊಡಗಿಸಿಕೊಂಡಿದ್ದೇನೆ. ಬೆಂಗಳೂರಿನಿಂದ ತೀರ್ಥಹಳ್ಳಿ ಠಾಣೆಗೆ ವರ್ಗಾವಣೆ ಬಳಿಕ 15 ದಿನಕ್ಕೊಮ್ಮೆ ರಜೆ ಆಥವಾ ಕೋರ್ಟ್‌ಗೆ ಬೆಂಗಳೂರಿಗೆ ಬಂದಾಗ ಕಡ್ಡಾಯವಾಗಿ ಎಸ್‌ಡಿಪಿ ರಕ್ತದಾನ ಮಾಡಿ ವಾಪಸ್ ಹೋಗುತ್ತಿದ್ದೇನೆ. ಈ ಮೊದಲು 3 ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕಿತ್ತು. ಇದೀಗ 15 ದಿನಕ್ಕೆ ಅವಕಾಶವಿದೆ ಎಂದು ಅಶ್ವತ್ಥಗೌಡ ತಿಳಿಸಿದ್ದಾರೆ.
ಕೆಲಸದೊತ್ತಡದಲ್ಲಿ ಕರ್ತವ್ಯನಿರ್ವಹಿಸಿಕೊಂಡು ಶತಕ ಬಾರಿ ರಕ್ತದಾನ ಮಾಡಿ ಆರೋಗ್ಯವಾಗಿದ್ದೇನೆ. ಕರ್ತವ್ಯ ಮಾಡುವಾಗಲೂ ರಕ್ತದಾನಕ್ಕೆ ಅಡ್ಡಿ ಆಗಿಲ್ಲ. ಉತ್ತಮ ಕೆಲಸ ಮಾಡಿದ ಸಮಾಧಾನ ಇದೆ. ಪ್ರತಿಯೊಬ್ಬರೂ ರಕ್ತದಾನ ಮಾಡಿ ತುರ್ತಾಗಿ ರಕ್ತ ಬೇಕಾದವರ ಜೀವ ಉಳಿಸಲು ಆದ್ಯತೆ ನೀಡಬೇಕು.
-ಜೆ. ಅಶ್ವತ್ಥಗೌಡ, ತೀರ್ಥಹಳ್ಳಿ ಠಾಣೆ ಇನ್‌ಸ್ಪೆಕ್ಟರ್