ಕೋಲಾರ: ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸಂದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ನಿಂದ ಸಾಲ ವಿತರಣೆ ಕಾರ್ಯ ಸ್ಥಗಿತಗೊಂಡಿದ್ದು, ಹೆಗ್ಗಿಲ್ಲದೆ ಮೈಕ್ರೋ ಫೈನಾನ್ಸ್ಗಳು ಮತ್ತೆ ತಲೆಯೆತ್ತಿವೆ, ಈ ಹಾವಳಿಯ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಖಾಸಗಿ ಫೈನಾನ್ಸ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರ ಸ್ವಾಭಿಮಾನದ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ. ಸಹಕಾರ ಬ್ಯಾಂಕ್ಗಳ ಅವ್ಯವಸ್ಥೆಯನ್ನೇ ಬಂಡವಾಳವಾಗಿಸಿಕೊಂಡಿರುವ ಖಾಸಗಿ ಮೈಕ್ರೋ ಫೈನಾನ್ಸ್ಗಳು ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿ ಗ್ರಾಮೀಣ ಪ್ರದೇಶದ ರೈತಕೂಲಿ ಕಾರ್ಮಿಕರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಚುನಾವಣೆ ನಡೆಸಲು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಮೂಲಕ ಸಹಕಾರಿ ಸಂಸ್ಥೆಗಳನ್ನು ಉಳಿಸಬೇಕು ಎಂದರು.
ಲಕ್ಷಾಂತರ ರೈತರ ಜೀವನಾಡಿಯಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಮೂಲಕ ರೈತರ ಹಿತ ಕಾಯಬೇಕು. ಜಿಲ್ಲಾಸ್ಪತ್ರೆಯಲ್ಲಿ 1 ವರ್ಷದಿಂದ ಖಾಲಿ ಇರುವ ಕಾಯಂ ಜಿಲ್ಲಾ ಶಸ್ತ್ರಚಿಕಿತ್ಸಕರನ್ನು ನೇಮಕ ಮಾಡಿ ಹದಗೆಟ್ಟಿರುವ ಆಡಳಿತ ವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಬೈರತಿ ಸುರೇಶ್ ಅವರು, ಅಧಿಕಾರಿಗಳ ಕೆಡಿಪಿ ಸಭೆ ನಡೆಸಿ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಮೈಕ್ರೋ ಫೈನಾನ್ಸ್ ಹಾವಳಿಗೆ ವಿಶೇಷ ತಂಡ ರಚನೆ ಮಾಡುವ ಜತೆಗೆ ಬ್ಯಾಂಕ್ ಉಳಿವಿಗಾಗಿ ಸಿಎಂ ಬಳಿ ಚರ್ಚೆ ಮಾಡುವ ಭರವಸೆ ನೀಡಿದರು.