ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಎಸ್​ಐಆರ್​ ವಿರೋಧಿ ಒಕ್ಕೂಟ ಹಾಗೂ ವಿವಿಧ ನಾಗರಿಕ ಹಕ್ಕುಗಳ ಸಂಘಟನೆಗಳ ಒಕ್ಕೂಟದ ಕಾರ್ಯರ್ತರು ಗುರುವಾರ ಪ್ರತಿಭಟನೆ ನಡೆಸಿದರು. folder
ನ್ಯೂಸ್

ಎಸ್​ಐಆರ್​ ಪ್ರಕ್ರಿಯೆ ರದ್ದುಗೊಳಿಸಲು ಪಟ್ಟು

ಮತ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್​ ಕುಮಾರ್​ನನ್ನು ವಜಾಗೊಳಿಸಬೇಕು ಎಂದು ವಿವಿಧ ಸಂನೆಗಳ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.

ಬೆಂಗಳೂರು: ಮತ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್​ ಕುಮಾರ್​ನನ್ನು ವಜಾಗೊಳಿಸಬೇಕು ಎಂದು ವಿವಿಧ ಸಂನೆಗಳ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜಮಾಯಿಸಿದ ಎಸ್​ಐಆರ್​ ವಿರೋಧಿ ಹಾಗೂ ವಿವಿಧ ನಾಗರಿಕ ಹಕ್ಕುಗಳ ಸಂಘಟನೆಗಳ ಒಕ್ಕೂಟದ ಕಾರ್ಯರ್ತರು ಭಗತ್​ ಸಿಂಗ್​, ಸುಭಾಷ್​ ಚಂದ್ರ ಬೋಸ್​ ಭಾವಚಿತ್ರ, ಸಂವಿಧಾನ ಪೀಠಿಕೆ, ರಾಷ್ಟ್ರ ಧ್ವಜ ಹಿಡಿದು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.

ಬಡವರ, ಅಲ್ಪಸಂಖ್ಯಾತರ, ಕಾಲೋನಿ ನಿವಾಸಿಗಳ ಪಾಲಿಗೆ ಎಸ್​ಐಆರ್​ ವಿರೋಧಿ ಅಂದೋಲನವಾಗಿದೆ. ಉದ್ದೇಶ ಪೂರ್ವಕವಾಗಿಯೇ ಗುರಿಯಾಗಿಸಿಕೊಂಡು ಮತಪಟ್ಟಿಯಿಂದ ರದ್ದುಗೊಳಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗೆ ನೆಚ್ಚಿನ ನಾಯಕನ್ನು ಆಯ್ಕೆ ಮಾಡಿಕೊಳ್ಳಲು ಇರುವ ಹಕ್ಕು ಕಸಿದುಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

* ಒಂದು ದೇಶ, ಒಂದು ಪಕ್ಷದ ಉದ್ದೇಶ

ಸಿಜೆಪಿ ಸ್ಥಾಪಕ ಅಭಿಜೀತ್​ ದೀಪ್ಕೆ ಮಾತನಾಡಿ, ಒಂದು ದೇಶ, ಒಂದು ಚುನಾವಣೆಯ ಹಿಂದಿನ ಉದ್ದೇಶವೇ ಒಂದು ದೇಶ, ಒಂದು ಪಕ್ಷ. ಚುನಾವಣಾ ಆಯೋಗವೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈಗೊಂಬೆಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್​ ಕುಮಾರ್​ ಬಿಜೆಪಿಗೆ ಅನುಕುಲವಾಗಿ ವರದಿ ತಯಾರಿಸಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಜನ ವಿರೋಧಿ ಅಲೆ ಎದಿದ್ದೆ. ತಮ್ಮ ಪಕ್ಷಕ್ಕೆ ಮತ ನೀಡುವ ಸಮುದಾಯವನ್ನು ಉಳಿಸಿಕೊಂಡು, ಮತ ಹಾಕದೆ ಇರುವವರನ್ನು ಪತ್ತೆ ಹಚ್ಚಿ ರದ್ದುಗೊಳಿಸಲಾಗಿದೆ ಎಂದು ದೂರಿದರು.

* ಮತಪಟ್ಟಿ ತಯಾರಿಕೆಯಲ್ಲಿ ಎಡವಟ್ಟು

ಚಿತ್ರ ನಟ ಪ್ರಕಾಶ್​ ರೈ ಮಾತನಾಡಿ, ಆರಂಭದಿಂದಲೂ ಎಸ್​ಐಆರ್​ನ್ನು ವಿರೋಧಿಸಿಕೊಂಡು ಬಂದಿದ್ದೇವೆ. ಈ ಪ್ರಕ್ರಿಯೆಯಲ್ಲಿ ಆಗಿರುವ ನ್ಯೂನತೆಗಳ ಬಗ್ಗೆ ಸರ್ಕಾರ, ಆಯೋಗದ ಗಮನಕ್ಕೆ ತಂದಿದ್ದರು ಸಹ ಮತ ಪಟ್ಟಿ ಪರಿಷ್ಕರಣೆ ಮಾಡಿ ಎಡವಟ್ಟು ಮಾಡಿ ಇಟ್ಟಿದ್ದಾರೆ ಎಂದು ಕಿಡಿಕಾರಿದರು.

ಬಡವರು, ಮುಸ್ಲಿಮರು, ಬುಡಕಟ್ಟು ಜನಾಂಗ ಸೇರಿ ಹಲವು ದುರ್ಬಲ ವರ್ಗದವರ ಮತಗಳು ರದ್ದುಗೊಂಡಿವೆ. ಮನುಷ್ಯನ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಕೆಲಸ ಕೇಂದ್ರ ಸರ್ಕಾರದಿಂದ ಆಗಿದೆ. ಈಗಿರುವ ಚುನಾವಣಾ ಆಯುಕ್ತ ಜ್ಞಾನೇಶ್​ ಕುಮಾರ್​ ರಾಜೀನಾಮೆ ನೀಡಿದರೆ, ಅವರ ಜಾಗಕ್ಕೆ ಇಂತಹ ವ್ಯಕ್ತಿಯೇ ಇನ್ನೊಬ್ಬರು ಬರುತ್ತಾರೆ. ಇದರ ಬದಲು ಎಸ್​ಐಆರ್​ ರದ್ದಿಗೆ ಹೋರಾಡಿದರೆ ನ್ಯಾಯಸಿಗಲಿದೆ. ಅನ್ಯಾಯಕ್ಕೆ ಒಳಗಾಗಿರುವವರಿಗೆ ನ್ಯಾಯ ದೊರಕಿಸಬೇಕು ಎಂಬ ಉದ್ದೇಶದಿಂದ ಜನತಾ ನ್ಯಾಯಾಲಯ ನಡೆಸಲಾಗುತ್ತಿದೆ ಎಂದು ಹೇಳಿದರು.

ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ, ಸಿಜೆಪಿ ಮುಖಂಡ ಸೌರವ್​ ದಾಸ್​, ಅಶುತೋಷ್​ ರಾಂಕಾ, ಯೂಟ್ಯೂಬರ್​ ಧ್ರುವ ರಾಠಿ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್​, ಸಾಹಿತಿ ದೇವನೂರ ಮದೇವ, ನೂರ್​ ಶ್ರೀಧರ್​, ಕೆ.ಮಹಂತೇಶ್​, ಅಬ್ದುಲ್​ ಮಜೀದ್​ ಮತ್ತಿತರರು ಉಪಸ್ಥಿತರಿದ್ದರು.