ನವದೆಹಲಿ: ಸದ್ಯ ತಮ್ಮ ಬೆಂಬಲಿಗ ಶಾಸಕರೊಂದಿಗೆ ದೆಹಲಿ ಸೇರಿರುವ ಸಚಿನ್ ಪೈಲಟ್, ಸರ್ಕಾರದ ಎದುರು ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ. ಅವನ್ನು ಈಡೇರಿಸಿದರೆ ಮಾತ್ರ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಷರತ್ತು ವಿಧಿಸಿದ್ದಾರೆ.
ತನ್ನ ಆಪ್ತರಾದ ನಾಲ್ವರು ಶಾಸಕರಿಗೆ ರಾಜಸ್ಥಾನ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು. ಅದರಲ್ಲೂ ಹಣಕಾಸು ಮತ್ತು ಗೃಹ ಸಚಿವಾಲಯವನ್ನೇ ನಮ್ಮ ಆಪ್ತವಲಯಕ್ಕೆ ನೀಡಬೇಕು ಎಂದು ಹೇಳಿದ್ದಾರೆ. ಹಾಗೇ ಮೂರನೇಯದಾಗಿ ತನನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನನ್ನಾಗಿಯೇ ಉಳಿಸಬೇಕು. ಆ ಹುದ್ದೆ ಬೇರೆಯವರಿಗೆ ಕೊಡಬಾರದು ಎಂಬ ಬೇಡಿಕೆಯನ್ನು ಸರ್ಕಾರದ ಎದುರು ಸಚಿನ್ ಪೈಲಟ್ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಶಾಸಕರ ಲೆಕ್ಕಾಚಾರದಲ್ಲಿ ಗೆಹ್ಲೋಟ್ಗೆ ಮೇಲುಗೈ, ಸಚಿನ್ ಪೈಲಟ್ಗೆ ಹಿನ್ನಡೆ
ಸದ್ಯ ಸಚಿನ್ ಪೈಲಟ್ ಅವರೊಂದಿಗೆ ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ರಾಜೀವ್ ಸಾತವ್ ಅವರು ಈ ಬೇಡಿಕೆಯ ಸಂದೇಶವನ್ನು ಜೈಪುರಕ್ಕೆ ಆಗಮಿಸಿ, ಅಶೋಕ್ ಗೆಹ್ಲೋಟ್ ಅವರಿಗೆ ಅಧಿಕೃತವಾಗಿ ನೀಡಲಿದ್ದಾರೆ ಎನ್ನಲಾಗಿದೆ.
ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೆ ಇದ್ದರೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು. ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪೈಲಟ್ ಅವರ ಬದಲಿಗೆ ರಘುವೀರ್ ಮೀನಾರನ್ನು ನೇಮಕ ಮಾಡಲಾಗುವುದು ಎಂದು ಕಾಂಗ್ರೆಸ್ ಮೂಲಗಳಿಂದ ಮಾಹಿತಿ ಹೊರಬಿದ್ದಿತ್ತು. ಅದರ ಬೆನ್ನಲ್ಲೇ ಸಚಿನ್ ಪೈಲಟ್ ಮೂರು ಬೇಡಿಕೆಗಳನ್ನು ಸರ್ಕಾರದ ಎದುರು ಇಟ್ಟಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)