ಬೆಂಗಳೂರು: ಸಬ್‌ಇನ್‌ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿ ಹಗರಣದ ಸಂಬಂಧ ನ್ಯಾಯಮೂರ್ತಿ ಬಿ.ವೀರಪ್ಪ ಏಕಸದಸ್ಯ ವಿಚಾರಣಾ ಆಯೋಗವನ್ನು ಶುಕ್ರವಾರ ಭೇಟಿ ಮಾಡಿದ 100ಕ್ಕೂ ಅಧಿಕ ಅಭ್ಯರ್ಥಿಗಳು, ನಮ್ಮನ್ನು ವಿಚಾರಣೆಗೆ ಒಳಪಡಿಸಿ ಪ್ರಾಮಾಣಿಕವಾಗಿ ಪಾಸ್ ಆಗಿರುವವರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಮನವಿ ಸಲ್ಲಿಸಿದರು.
ನ್ಯಾ.ಬಿ.ವೀರಪ್ಪ ಅವರು, ಎಸ್‌ಐ ನೇಮಕಾತಿ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳನ್ನು 10 ಮಂದಿಯ ತಂಡಗಳನ್ನಾಗಿ ಕರೆದು ಮನವಿ ಆಲಿಸಿದರು.
2021ರ ಜನವರಿಯಲ್ಲಿ ಎಸ್‌ಐ ನೇಮಕಾತಿಯಲ್ಲಿ ಅಭ್ಯರ್ಥಿಗಳಾಗಿ ಪರೀಕ್ಷೆ ಎದುರಿಸಿದ್ದೇವೆ. ಕೆಲವರು ಎಸಗಿದ ಕಾನೂನುಬಾಹಿರ ಕೃತ್ಯಗಳಿಂದ ನೇಮಕಾತಿ ಆಯ್ಕೆ ಪಟ್ಟಿಯನ್ನು ರದ್ದು ಪಡಿಸಲಾಗಿದ್ದು, ಮತ್ತೊಮ್ಮೆ ಲಿಖಿತ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ.
ಪರಿಶ್ರಮ ಪಟ್ಟು ಪ್ರಾಮಾಣಿಕವಾಗಿ ಆಯ್ಕೆಯಾಗಿದ್ದು, ಮರುಪರೀಕ್ಷೆ ನಡೆಸುವುದರಿಂದ ನಮಗೆ ಅನ್ಯಾಯವಾಗಲಿದೆ. ನ್ಯಾಯಾಂಗ ತನಿಖೆಗೆ ಒಳಪಡಿಸಿ, ನೇಮಕಾತಿ ಪ್ರಕ್ರಿಯೆ ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ.