ನ್ಯೂಸ್

ಒಳ ಮೀಸಲಾತಿ ಜಾರಿ ವಿಚಾರ ಕೈಬಿಡಬೇಕು; ಸೇವಾಲಾಲ ಸ್ವಾಮೀಜಿ

Haveri - Kariyappa Aralikatti

ರಾಣೆಬೆನ್ನೂರ: ರಾಜ್ಯ ಸರ್ಕಾರ ಬಂಜಾರರಿಗೆ ತೊಂದರೆ ಉಂಟು ಮಾಡುವ ಒಳ ಮೀಸಲಾತಿ ಜಾರಿ ವಿಚಾರ ಕೈಬಿಡಬೇಕು. ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಜಾರಿಗೊಳಿಸಬಾರದು ಎಂದು ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ್​ ಸೇವಾಲಾಲ್​ ಸ್ವಾಮೀಜಿ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮೈಸೂರು, ತುಮಕೂರ, ಬೆಂಗಳೂರ ಸೇರಿ ಇತರ ಕಡೆಗಳಲ್ಲಿ ಕಡಿಮೆ ಜನಸಂಖ್ಯೆ ಇರುವ ಪ್ರದೇಶದಲ್ಲಿ ಜಾತಿಗಣತಿ ಮಾಡಿ ಸರ್ಕಾರಕ್ಕೆ ಸುಳ್ಳು ವರದಿ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಜನರು ವಾಸ ಮಾಡುತ್ತಿದ್ದು, ಕೂಲಿಗಾಗಿ ವಲಸೆ ಹೋಗಿ ಜೀವನ ಮಾಡುವ ಸ್ಥಿತಿಯಿದೆ ಎಂದರು.

ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಎಚ್​. ಆಂಜನೇಯ ಅವರು ಬಂಜಾರ ಸಮುದಾಯದ ಕುರಿತು ಸುಳ್ಳು ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ನೀಡಿ, ಇದೀಗ ಒಳ ಮೀಸಲಾತಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಬಂಜಾರ ಸಮಾಜವನ್ನು ಎಸ್ಸಿ ಮೀಸಲಾತಿಯಿಂದ ಹೊರಗಿಡಬೇಕು ಎಂದು ಕೆಲವರ ಕುತಂತ್ರ ಮಾಡಿ ಇದೀಗ ಒಳ ಮೀಸಲಾತಿ ಜಾರಿಗೆ ತರಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಬಂಜಾರ ಸಮುದಾಯದ ತನ್ನದೆಯಾದ ಸಂಸತಿ, ಆಚಾರ ವಿಚಾರ ಹೊಂದಿದ್ದು ಆಥಿರ್ಕವಾಗಿ ಬಹಳ ಹಿಂದುಳಿದ ಸಮುದಾಯವಾಗಿದೆ. ಇಂತಹ ಸಮುದಾಯಕ್ಕೆ ಇದೀಗ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ ಎಂದರು.

2011ರ ಜಾತಿ ಗಣತಿ ವರದಿಯ ಪ್ರಕಾರ ರಾಜ್ಯದಲ್ಲಿ ಕೇವಲ ಐದಾರು ಜಿಲ್ಲೆಯಲ್ಲಿ ಜಾತಿ ಗಣತಿ ಮಾಡಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ಅಲ್ಲದೆ ಬಂಜಾರ ಸಮುದಾಯ ರಾಜ್ಯದಲ್ಲಿ ಆಥಿರ್ಕವಾಗಿ ಸದೃಢವಾಗಿದ್ದಾರೆ ಎಂದು ಹೇಳಲಾಗಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಜಾರಿ ಮಾಡಬಾರದು ಎಂದು ಆಗ್ರಹಿಸಿದರು.

ಪ್ರಮುಖರಾದ ಚಂದ್ರು ಲಮಾಣಿ, ರಾಮಣ್ಣ ನಾಯಕ, ಬೀರಪ್ಪ ಲಮಾಣಿ, ಬೀಮಪ್ಪ ನಾಯಕ, ವಸಂತ ಲಮಾಣಿ, ಕಿರಣ ಲಮಾಣಿ, ಮಾಲತೇಶ ಲಮಾಣಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.