ಬೆಂಗಳೂರು:
ಒಳ ಮೀಸಲಾತಿ ಕುರಿತಾದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು ಎಂದು ಸಾಹಿತಿ ದೇವನೂರು ಮಹಾದೇವ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ನಾನು ಗೊಂದಲ, ಆತಂಕಗಳ ನಡುವೆಯೇ ಈ ಪತ್ರ ಬರೆಯುತ್ತಿರುವೆ. ಮೀಸಲಾತಿ ವರದಿ ಎಲ್ಲಿ ವಿವಾದಕ್ಕೊಳಗಾಗಿ, ಎಲ್ಲಿ ಮುಂದೂಡಲ್ಪಡುತ್ತದೊ ಎಂಬುದು ನನ್ನನ್ನು ತುಂಬಾ ಕಾಡುತ್ತಿದೆ. ಜೊತೆಗೆ ಖಾಲಿ ಇರುವ ಉದ್ದಯೋಗಗಳಿಗೂ, ನೇಮಕಾತಿ ಇಲ್ಲದೆ ಏಗುತ್ತಿರುವ ತರುಣರು, ತಮ್ಮ ತಾರುಣ್ಯ ಕಳೆದುಕೊಂಡು ಮಧ್ಯ ವಯಸ್ಕರಾಗುತ್ತಿದ್ದಾರೆ. ಇದು ತುಂಬಾನೆ ದಯನೀಯ ವಿಷಯ
ಎಂದು ಪತ್ರದ ಪ್ರಾರಂಭದಲ್ಲಿಯೇ ಪ್ರಸ್ತಾಪಿಸಿದ್ದಾರೆ.
ದಲಿತ ಸಮುದಾಯವೂ ದಿನದಿನಕ್ಕೂ ಚಲನಶೀಲತೆ ಪಡೆದುಕೊಂಡು ಬದಲಾವಣೆ ಆಗುತ್ತಿರುವುದರಿಂದ ಅದಕ್ಕೆ ತಕ್ಕಂತೆ ಮೀಸಲಾತಿ ಪ್ರಾತಿನಿಧ್ಯವನ್ನು ಸಮತೋಲನ ಮಾಡುವುದಕ್ಕಾಗಿ ಹಾಗೂ ಕಾಲಕಾಲಕ್ಕೆ ಹೊಸ ದತ್ತಾಂಶಗಳಿಂದ ಒಳ ಮೀಸಲಾತಿಯ ಪ್ರಮಾಣವನ್ನು ಪರಿಷ್ಕರಿಸಲು, ಹಿಂದುಳಿದ ವರ್ಗಗಳಿಗೆ ಇರುವಂತೆಯೇ, ಪರಿಶಿಷ್ಟ ಜಾತಿಗಳ ಆಯೋಗಕ್ಕೂ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಒದಗಿಸಬೇಕು ಎಂಬುದು ನನ್ನ ಭಾವನೆ ಎಂದಿದ್ದಾರೆ.
ಈ ರೀತಿಯಾದರೆ ಆ ಆಯೋಗದ ಮುಂದೆ, ನಾಗಮೋಹನ್ ದಾಸ್ ವರದಿಯ ಬಗ್ಗೆ ಇರಬಹುದಾದ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಸಾಧ್ಯತೆ ಹೆಚ್ಚುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ಮೀಸಲಾತಿ ಹೆಚ್ಚಳ ಆಯೋಗದ ಅಧ್ಯಕ್ಷರಾಗಿ ನಾಗಮೋಹನ್ ದಾಸ್ ಅವರು ಸಲ್ಲಿಸಿದ ವರದಿಯಲ್ಲಿ ’ಪರಿಶಿಷ್ಠ ಜಾತಿ ಸಮುದಾಯವು ಶೇ.17.98, ಪರಿಶಿಷ್ಟ ಪಂಗಡವು ಶೇ.7.41 ಜನಸಂಖ್ಯೆ ಇರುವುದರಿಂದ ಎಸ್ ಸಿಗೆ ಶೇ.18 ಹಾಗೂ ಎಸ್‌ಟಿಗೆ ಶೇ.7.50 ನೀಡುವುದು ಸೂಕ್ತ’ ಎಂದಿದ್ದರು.ತಾವು ಶೇ.1 ಹೆಚ್ಚಳದ ನಿರ್ಧಾರ ಕೈಗೊಂಡರೆ ಹೆಚ್ಚುವರಿಯಾಗಿ ಸಿಗುವ ಶೇ.1 ನಿಂದ ಇಂದಿನ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು ಎಂದಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಪರಿಶಿಷ್ಟ ಜಾತಿಗಳು ವೈವಿಧ್ಯಮಯ ಭಿನ್ನರೂಪತೆಯ (ಏಛಿಠಿಛ್ಟಿಟಜಛ್ಞಿಛಿಟ್ಠ) ಗುಂಪುಗಳಾಗಿದೆ ಎಂದು ಅಭಿಪ್ರಾಯ ನೀಡಿದೆ. ವರ್ಗೀಕರಣ ನಿರ್ಧರಿಸುವಾಗ ಸರ್ವಾಂಗೀಣ ಹಿಂದುಳಿದಿರುವಿಕೆಯನ್ನೂ ಪರಿಗಣಿಸಿ ನಿರ್ಧರಿಸಬೇಕಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾಗಮೋಹನ್ ದಾಸ್ ವರದಿಯನ್ನು ಗಮನಿಸಿದರೆ ಅದು ಸುಪ್ರೀಂ ಕೋರ್ಟ್ ಆಶಯಕ್ಕೆ ತಕ್ಕಂತೆಯೇ ಇರುವಂತೆ ಕಾಣಿಸುತ್ತದೆ ಎಂದು ಸಲಹೆ ನೀಡಿದ್ದಾರೆ.
ದಾಸ್ ಅವರ ವರದಿಯು ಸಮಗ್ರ ಸಮೀಕ್ಷೆ ಮಾಡುವ ಮೂಲಕವೇ ಅಂಕಿ- ಅಂಶಗಳನ್ನು ಸಂಗ್ರಹಿಸಿದೆ. ವಿಸ್ತಾರವಾದ ಸಮೀಕ್ಷೆ ಮಾಡಿ ಶೇ.94 ರಷ್ಟು ಜನರ ಮಾಹಿತಿ ಸಂಗ್ರಹಿಸಿದೆ. ಮನೆ ಮನೆ ಸರ್ವೇ, ನಿಗಧಿತ ಕೇಂದ್ರಗಳಲ್ಲಿ ಸರ್ವೆ, ಣ್ಞ್ಝಜ್ಞಿಛಿ ಸರ್ವೆ ಅವಕಾಶ ಹೀಗೆ ಸಮಗ್ರ ಪ್ರಯತ್ನ ಮಾಡಿದೆ. ಈ ರೀತಿ ಸಮೀಕ್ಷೆ ಅಪರೂಪ. ಮೊದಲು ಇದನ್ನು ಎಲ್ಲರೂ ಗೌರವಿಸಬೇಕಾಗಿದೆ. ಹಾಗೆಂದು ಈಗ ಎದ್ದಿರುವ ಆಕ್ಷೇಪಣೆಗಳನ್ನು ತಳ್ಳಿ ಹಾಕಬೇಕಿಲ್ಲ. ಅವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ತಾವು ಘೋಷಣೆ ಮಾಡುವುದಾದರೆ, ಅದು ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ಲಭ್ಯವಾಗುವ ಜಾತಿ/ಜನಗಣತಿಯ ದತ್ತಾಂಶಗಳ ಮೂಲಕ ಪರಿಷ್ಕರಣೆಯ ಮೂಲಕ ಸಮತೋಲನ ಮಾಡಲು ಅವಕಾಶವಾಗುತ್ತದೆ ಎಂದು ಹೇಳಿದ್ದಾರೆ.
ಎಸ್ಸಿ, ಎಸ್‌ಟಿ ಮೀಸಲಾತಿಯನ್ನು ಶೇ.18% ಮತ್ತು ಶೇ.7.5 ಮಾಡುವ ಬಗ್ಗೆ ಆಶ್ವಾಸನೆ ನೀಡುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಕಾರ್ಯವ್ಯಾಪ್ತಿ ಹಾಗೂ ಅಧಿಕಾರದ ಘೋಷಣೆ ಮಾಡುವುದು. ಮೀಸಲಾತಿಯನ್ನು ನೀಡದಿರುವುದಕ್ಕಾಗಿಯೇ ಹುಟ್ಟಿಕೊಂಡಿದೆಯೇನೋ ಎಂಬಂತಿರುವ ’ಗುತ್ತಿಗೆ ಕೆಲಸ’ಗಳಲ್ಲು ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದು. ಪರಿಶಿಷ್ಟ ಜಾತಿ/ಪಂಗಡಗಳ ಹೆಸರಿನಲ್ಲಿ ಸುಳ್ಳು ಪ್ರಮಾಣ ಪತ್ರ ಪಡೆದುಕೊಂಡಿರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ ಪ್ರಕಟಿಸಬೇಕು ಎಂದು ಹೇಳಿದ್ದಾರೆ.